
ಬೆಂಗಳೂರು: ‘ಕಬ್ಬು ಕಾರ್ಖಾನೆಗಳ ಮಾಲೀಕರು ರಫ್ತಿಗೆ ಅವಕಾಶ ಕೋರಿದ್ದು, ಹೆಚ್ಚುವರಿ ಸಂಗ್ರಹವಿರುವ 15 ಲಕ್ಷ ಟನ್ ಸಕ್ಕರೆ ರಫ್ತಿಗೆ ಅವಕಾಶ ನೀಡಲಾಗುವುದು. ಮೊಲಾಸಿಸ್ ರಫ್ತಿಗೆ ಅನುಮತಿ ಈಗಾಗಲೇ ಕೊಟ್ಟಿದ್ದೇವೆ’ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಪ್ರಲ್ಹಾದ ಜೋಶಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಕಬ್ಬು ಬೆಳೆಗಾರರ ವಿಚಾರದಲ್ಲಿ ರಾಜ್ಯ ಸರ್ಕಾರ ಜವಾಬ್ದಾರಿಯಿಂದ ವರ್ತಿಸಬೇಕು. ಸಂಧಾನ ನಡೆಸಬೇಕು. ರೈತರು ಪ್ರತಿ ಟನ್‍ಗೆ ₹3,500 ಕೇಳುತ್ತಿದ್ದಾರೆ. ವರ್ಷದ ಆರಂಭದಲ್ಲೇ ಕೇಂದ್ರ ಸರ್ಕಾರ ಪ್ರತಿ ಟನ್ ಕಬ್ಬಿಗೆ ನ್ಯಾಯಸಮ್ಮತ ಮತ್ತು ಲಾಭದಾಯಕ ದರ (ಎಫ್‌ಆರ್‌ಪಿ) ₹3,500 ನಿಗದಿ ಮಾಡಿದೆ. ಜತೆಗೆ, ಎಥೆನಾಲ್ ಖರೀದಿ ಮೊತ್ತ 97.2 ಶೇಕಡಾ ಪಾವತಿ ಆಗಿದೆ. ಮುಖ್ಯಮಂತ್ರಿ, ಸಚಿವರು ಕಾರ್ಖಾನೆಗಳ ಮಾಲೀಕರು, ರೈತರ ಜತೆ ಮಾತುಕತೆ ನಡೆಸಬೇಕು’ ಎಂದು ಸಲಹೆ ನೀಡಿದರು.
ತುಪ್ಪ, ಬೆಣ್ಣೆ ಬೆಲೆ ಏರಿಕೆ ವಾಪಸ್‌ಗೆ ಆಗ್ರಹ: ರಾಜ್ಯ ಸರ್ಕಾರ ತುಪ್ಪ, ಬೆಣ್ಣೆ ಬೆಲೆ ಹೆಚ್ಚಿಸಿದೆ. ಇದು ರಾಹುಲ್ ಗಾಂಧಿ ಸಹವಾಸ ದೋಷ. ಬೆಲೆ ಏರಿಕೆಯ ಬೆಂಕಿಗೆ ತುಪ್ಪ ಸುರಿದಿದ್ದಾರೆ. ತಕ್ಷಣ ಬೆಲೆ ಏರಿಕೆ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.