ADVERTISEMENT

ಕಬ್ಬು ಬೆಳೆಗಾರರ ‍ಪ್ರತಿಭಟನೆ | ರೈತರ ಸಂಕಷ್ಟಕ್ಕೆ ಕೇಂದ್ರವೇ ಹೊಣೆ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 15:54 IST
Last Updated 6 ನವೆಂಬರ್ 2025, 15:54 IST
<div class="paragraphs"><p>ಸಿದ್ದರಾಮಯ್ಯ</p></div>

ಸಿದ್ದರಾಮಯ್ಯ

   

ಬೆಂಗಳೂರು: ‘ಕೇಂದ್ರ ಸರ್ಕಾರದ ತಪ್ಪು ನೀತಿ ಮತ್ತು ರಾಜ್ಯದ ರೈತರ ಬದುಕಿನೊಂದಿಗೆ ಚೆಲ್ಲಾಟ ಆಡುತ್ತಿರುವ ಪರಿಣಾಮ ಕಬ್ಬು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿಜೆಪಿಯವರು ತಪ್ಪು ಮಾಹಿತಿ ನೀಡಿ ರೈತರ ದಾರಿ ತಪ್ಪಿಸುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿ ಕಾರಿದರು.

ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕಬ್ಬು ಬೆಳೆಗಾರರ ಹೋರಾಟ ಮತ್ತು ಅವರ ಸಮಸ್ಯೆ ಈಡೇರಿಸುವ ಕುರಿತು ನಡೆದ ಸುದೀರ್ಘ ಚರ್ಚೆಯ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ADVERTISEMENT

‘ನ್ಯಾಯಯುತ ಮತ್ತು ಲಾಭದಾಯಕ ದರ (ಎಫ್‌ಆರ್‌ಪಿ) ನಿಗದಿ ಮಾಡುವುದು ಕೇಂದ್ರ ಸರ್ಕಾರವೇ ವಿನಾ ರಾಜ್ಯ ಸರ್ಕಾರವಲ್ಲ. ಕಬ್ಬು ಮತ್ತು ಸಕ್ಕರೆ ವಿಚಾರದಲ್ಲಿ ರಾಜ್ಯ ಸರ್ಕಾರದ ಪಾತ್ರ ಅತ್ಯಲ್ಪ. ಕೇಂದ್ರ ನಿಗದಿ ಮಾಡುವ ದರ ರೈತರಿಗೆ ಲಭಿಸುತ್ತದೆಯೇ ಎಂಬುದನ್ನು ನೋಡಿಕೊಳ್ಳುವುದು, ತೂಕ, ಬೆಲೆ ಮತ್ತು ನಿಗದಿತ ಅವಧಿಯಲ್ಲಿ ಪಾವತಿ ಆಗುವಂತೆ ಗಮನಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿ’ ಎಂದು ಅವರು ಪ್ರತಿಪಾದಿಸಿದರು. 

ಎಫ್‌ಆರ್‌ಪಿ ನಿಗದಿಯಲ್ಲಿ ಅನ್ಯಾಯ ಮಾಡಿರುವ ಕೇಂದ್ರ ಸರ್ಕಾರ, 2019 ರಲ್ಲಿ ಕಡೆಯದಾಗಿ ಸಕ್ಕರೆಗೆ ಎಂಎಸ್‌ಪಿ ನಿಗದಿ ಮಾಡಿತ್ತು. ಆಗ ಪ್ರತಿ ಕೆ.ಜಿ.ಗೆ ₹31 ನಿಗದಿ ಮಾಡಲಾಗಿತ್ತು. ಆ ಬಳಿಕ ಎಂಎಸ್‌ಪಿ ಪರಿಷ್ಕರಿಸಲಿಲ್ಲ. ಜತೆಗೆ ಕಳೆದ ಕೆಲವು ವರ್ಷಗಳಿಂದ ಕೇಂದ್ರ ಸರ್ಕಾರ ಸಕ್ಕರೆ ರಫ್ತನ್ನು ನಿಲ್ಲಿಸಿದೆ. ಕಳೆದ ವರ್ಷ ಇಡೀ ದೇಶಕ್ಕೆ 10 ಲಕ್ಷ ಮೆಟ್ರಿಕ್ ಟನ್‌ ರಫ್ತು ಮಾಡಲು ಮಾತ್ರ ಅವಕಾಶ ನೀಡಲಾಗಿತ್ತು. ರಾಜ್ಯದಲ್ಲಿ 41 ಲಕ್ಷ ಮೆಟ್ರಿಕ್ ಟನ್‌ ಉತ್ಪಾದನೆ ಆಗಿತ್ತು’ ಎಂದು ಹೇಳಿದರು.

ಎಥೆನಾಲ್ ವಿಚಾರದಲ್ಲೂ ಕೇಂದ್ರ ಸರ್ಕಾರವು ತಾರತಮ್ಯ ಧೋರಣೆ ಅನುಸರಿಸುತ್ತಿದೆ. ಕರ್ನಾಟಕದಲ್ಲಿ 270 ಕೋಟಿ ಲೀಟರ್‌ ಉತ್ಪಾದನಾ ಸಾಮರ್ಥ್ಯ ಇದ್ದರೂ 2024–25 ರಲ್ಲಿ 47 ಲೀಟರ್‌ ತೈಲ ಕಂಪನಿಗಳಿಗೆ ಖರೀದಿ ಮಾಡಲು ಹಂಚಿಕೆ ಆಗಿದೆ ಎಂದರು.

‘ಕೇಂದ್ರ ಸರ್ಕಾರವು ರಾಜ್ಯದ ವಿಚಾರದಲ್ಲಿ ನಡೆಸುತ್ತಿರುವ ತಾರತಮ್ಯ ಧೋರಣೆಯು ರೈತರ ಅನ್ನದ ತಟ್ಟೆವರೆಗೂ, ರೈತರ ಭೂಮಿವರೆಗೂ ಬಂದಿದೆ. ಈ ವಿಚಾರದಲ್ಲಿ ನಾವು ಅಧಿಕಾರಕ್ಕೆ ಬಂದಾಗಿನಿಂದಲೂ ಧ್ವನಿ ಎತ್ತಿದ್ದೇವೆ. ರೈತರೂ ನಮ್ಮ ಎಲ್ಲಾ ಪ್ರಯತ್ನಗಳ ಜೊತೆ ಕೈಜೋಡಿಸಬೇಕು’ ಎಂದು ಸಿದ್ದರಾಮಯ್ಯ ಮನವಿ ಮಾಡಿದರು.

ರೈತ ದ್ರೋಹಿಯಾದ ಬಿಜೆಪಿಯವರ ಮರುಳು ಮಾತುಗಳಿಗೆ ರೈತರು ಯಾವುದೇ ಕಾರಣಕ್ಕೂ ಬಲಿಯಾಗಬಾರದು. ರಾಜಕಾರಣ ಬೆರೆಸಲು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪ್ರತಿಭಟನೆ ಸ್ಥಳಕ್ಕೆ ಹೋಗಿ ರಾತ್ರಿ ಮಲಗಿದ್ದರು. ಪ್ರತಿಭಟನಕಾರರ ಬೇಡಿಕೆ ಆಲಿಸಲು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಲ್ಲಿಗೆ ಹೋಗಿದ್ದಾರಾ ಎಂದು ಅವರು ಪ್ರಶ್ನಿಸಿದರು.

ಸಕ್ಕರೆ ಕಾರ್ಖಾನೆಗಳ ಮಾಲೀಕರೂ ಆಗಿರುವುದರಿಂದ ಸಚಿವರಾದ ಸತೀಶ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳಕರ ಅವರು ಪ್ರತಿಭಟನಾ ಸ್ಥಳಕ್ಕೆ ಹೋಗಲಿಲ್ಲ. ರೈತರ ಆಕ್ರೋಶ ಹೆಚ್ಚಾಗಿದ್ದರಿಂದ ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರನ್ನು ಕಳುಹಿಸಲಿಲ್ಲ. ಬದಲಿಗೆ ಜಿಲ್ಲಾಧಿಕಾರಿ ಮತ್ತು ಎಸ್ಪಿ ಅವರನ್ನು ರೈತರ ಜತೆ ಮಾತುಕತೆಗೆ ಕಳುಹಿಸಲಾಗಿತ್ತು ಎಂದು ಸಿದ್ದರಾಮಯ್ಯ ಹೇಳಿದರು.

ಬೆಳಗಾವಿ ಜಿಲ್ಲಾಧಿಕಾರಿ ಸಕ್ಕರೆ ಕಾರ್ಖಾನೆ ಮಾಲೀಕರ ಜತೆ ಈಗಾಗಲೇ ಚರ್ಚೆ ನಡೆಸಿ, ಶೇ 11.25 ಇಳುವರಿ ಬಂದರೆ ₹3,200 ಮತ್ತು ಶೇ 10.25 ಇಳುವರಿ ಬಂದರೆ ₹3,100 (ಕಟಾವು ಮತ್ತು ಸಾಗಣೆ ವೆಚ್ಚ ಹೊರತು ಪಡಿಸಿ) ಪಾವತಿಸುವಂತೆ ಮನವೊಲಿಸಿದ್ದಾರೆ. ಈ ವಿಷಯವನ್ನು ಅಧಿಕಾರಿಗಳು ರೈತರಿಗೆ ತಿಳಿಸಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಆದ್ದರಿಂದ ನಾಳೆ ನಡೆಸಲು ಉದ್ದೇಶಿಸಿರುವ ರಸ್ತೆ ತಡೆಯನ್ನು ಕೈಬಿಟ್ಟು ವಿಧಾನಸಭೆಯಲ್ಲಿ ನಡೆಯುವ ಸಭೆಗೆ ಹಾಜರಾಗಬೇಕು ಎಂದು ಸಿದ್ದರಾಮಯ್ಯ ರೈತರಿಗೆ ಮನವಿ ಮಾಡಿದರು.

ಸಕ್ಕರೆ ಕಾರ್ಖಾನೆಗಳ ಮಾಲೀಕರು ಪ್ರತಿ ಟನ್‌ಗೆ ₹2,900 ಮಾತ್ರ ನೀಡುತ್ತಿದ್ದಾರೆ ಎಂಬುದಾಗಿ ರೈತರು ಹೇಳಿದ್ದಾರೆ ಎಂಬುದನ್ನು ಅವರ ಗಮನಕ್ಕೆ ತಂದಾಗ, ‘ಕಾರ್ಖಾನೆಗಳವರು ಕಬ್ಬನ್ನು ಕಟಾವು ಮಾಡಿ ಸಾಗಣೆ ವೆಚ್ಚವನ್ನೂ ಭರಿಸಿ ತರುವುದರಿಂದ ₹2,900 ನೀಡುತ್ತಾರೆ. ಕಟಾವು ಮತ್ತು ಸಾಗಣೆಗೆ ಪ್ರತಿ ಟನ್‌ಗೆ ₹900 ಆಗುತ್ತದೆ. ಅದನ್ನು ಕಾರ್ಖಾನೆಗಳೇ ಭರಿಸುತ್ತವೆ. ಇದರಿಂದ ಪ್ರತಿ ಟನ್‌ಗೆ ₹3,800 ಕೊಟ್ಟ ಹಾಗೆ ಆಗುವುದಿಲ್ಲವೇ’ ಎಂದು ಪ್ರಶ್ನಿಸಿದರು.

ಒಂದು ವೇಳೆ ರೈತರೇ ಕಬ್ಬನ್ನು ಕಾರ್ಖಾನೆಗೆ ತಂದರೆ ಪ್ರತಿ ಟನ್‌ಗೆ ₹3,500 ಕೊಡ್ತಾರೆ. ಆಗ ಕಟಾವು ಮತ್ತು ಸಾಗಣೆ ವೆಚ್ಚವನ್ನು ರೈತರೇ ಭರಿಸಬೇಕಾಗುತ್ತದೆ ಎಂದೂ ವಿವರಿಸಿದರು.

‘ಕೆಲವು ರೈತ ಮುಖಂಡರು ಮಹಾರಾಷ್ಟ್ರ ಸಕ್ಕರೆ ಕಾರ್ಖಾನೆಗಳ ಕುರಿತು ಪ್ರಸ್ತಾಪಿಸಿರುವುದು ನನ್ನ ಗಮನಕ್ಕೆ ಬಂದಿದೆ. ನನಗಿರುವ ಮಾಹಿತಿ ಪ್ರಕಾರ ಮಹಾರಾಷ್ಟ್ರದಲ್ಲಿ 40ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳು ₹2,515ರಿಂದ ₹3,635ರವರೆಗೆ ಪ್ರತಿ ಟನ್‌ ಕಬ್ಬಿಗೆ ದರ ನೀಡುತ್ತಿವೆ. ನಾಳೆಯ ಸಭೆಯಲ್ಲಿ ಈ ವಿಚಾರವನ್ನು ತೀರ್ಮಾನಿಸುತ್ತೇವೆ’ ಎಂದರು.

ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಮಾತನಾಡಿ, ‘ರೈತರಿಗೆ ಪ್ರತಿ ಟನ್‌ಗೆ ಶೇ 11.25 ಇಳುವರಿ ಬಂದರೆ ₹3,200ರವರೆಗೆ ಕೊಡಲು ಹೇಳಿದ್ದೇವೆ (ಕಟಾವು, ಸಾಗಾಣಿಕೆ ವೆಚ್ಚ ಹೊರತುಪಡಿಸಿ). ಶೇ 10.25 ಇಳುವರಿಗೆ ₹3,100 ನಿಗದಿ ಮಾಡಿದ್ದೇವೆ. ಇದಕ್ಕೆ ಕಟಾವು ಮತ್ತು ಸಾಗಣೆ ವೆಚ್ಚ ₹900 ಸೇರಿಸಿದರೆ ₹4,100 ವರೆಗೂ ಸಿಗುತ್ತದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.