ADVERTISEMENT

ಸುಮಲತಾ ಬೆನ್ನಿಗೆ ನಿಂತ ಕೈ ನಾಯಕರಿಗೆ ಮೂಗುದಾರ: ಡಿಕೆಶಿಗೆ ಹೊಣೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2019, 5:42 IST
Last Updated 9 ಮಾರ್ಚ್ 2019, 5:42 IST
   

ಬೆಂಗಳೂರು: ಮಂಡ್ಯ‌ ಲೋಕಸಭಾ ಕ್ಷೇತ್ರವನ್ನು ಗೆಲ್ಲಲು ಕಾರ್ಯತಂತ್ರ ರೂಪಿಸುತ್ತಿರುವ ಜೆಡಿಎಸ್, ಇಲ್ಲಿ ಕಣಕ್ಕಿಳಿಯಲು ನಿರ್ಧರಿಸಿರುವ ಸುಮಲತಾ ಅಂಬರೀಷ್ ಅವರ ಬೆಂಬಲಕ್ಕೆ ನಿಂತಿರುವ ಜಿಲ್ಲಾ ಕೈ ಮುಖಂಡರಿಗೆ ಕಡಿವಾಣ ಹಾಕಲು ಮುಂದಾಗಿದೆ.

ಮೈತ್ರಿ ಸೂತ್ರದಂತೆ ಜೆಡಿಎಸ್‌ ಅಭ್ಯರ್ಥಿ ಪರ ಕೆಲಸ ಮಾಡುವಂತೆ ಸ್ಥಳೀಯ ಕಾಂಗ್ರೆಸ್ ನಾಯಕರಿಗೆ ಸ್ಪಷ್ಟ ಸಂದೇಶ ಕೊಡುವ ಪ್ರಯತ್ನ ನಡೆಸುತ್ತಿರುವ ಆ ಪಕ್ಷದ ನಾಯಕರು, ಕಾಂಗ್ರೆಸ್ ಹೈಕಮಾಂಡ್ ಮೂಲಕ ಜಿಲ್ಲಾ ಕೈ ನಾಯಕರಿಗೆ ಮೂಗುದಾರ ತೊಡಿಸಲು ತೀರ್ಮಾನಿಸಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಲು ಜೆಡಿಎಸ್ ನಿರ್ಧರಿಸಿದ್ದು, ಏನೇ ಆದರೂ ಕ್ಷೇತ್ರ ಗೆಲ್ಲಿಸಿಕೊಳ್ಳಲು ಜೆಡಿಎಸ್‌ ವರಿಷ್ಠರು ತಂತ್ರ ಹೆಣೆಯುತ್ತಿದ್ದಾರೆ.

ಈಗಾಗಲೇ ಮಂಡ್ಯ ಜಿಲ್ಲೆಯ‌ ಮುಖಂಡರ ಜೊತೆ ಚರ್ಚಿಸುವಂತೆ ಟ್ರಬಲ್ ಶೂಟರ್ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಕಾಂಗ್ರೆಸ್ ಜವಾಬ್ದಾರಿ ನೀಡಿದೆ.

ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾ ರಾಜಕೀಯದಲ್ಲಿ ಮಧ್ಯಪ್ರವೇಶಿಸಿರುವ ಶಿವಕುಮಾರ್, ಮಂಡ್ಯ ಜಿಲ್ಲಾ ಮುಖಂಡರು, ಚುನಾವಣೆಯಲ್ಲಿ ಪರಾಜಿತ, ಮಾಜಿ ಶಾಸಕರು, ಪದಾಧಿಕಾರಿಗಳ ಸಭೆಯನ್ನು ಭಾನುವಾರ ಕರೆದಿದ್ದಾರೆ. ಸಂಜೆ 5 ಗಂಟೆಗೆ ಕ್ರೆಸೆಂಟ್ ರಸ್ತೆಯಲ್ಲಿರುವ ಸಚಿವರ ಸರ್ಕಾರಿ ಮನೆಯಲ್ಲಿ ಈ ಸಭೆ ನಡೆಯಲಿದೆ.

ಸುಮಲತಾ ಸ್ಪರ್ಧೆಗಿಳಿಯಲು ನಿರ್ಧರಿಸಿರುವುದು ಜೆಡಿಎಸ್‌ ನಾಯಕರನ್ನು ಕಂಗಡಿಸಿದೆ ಎನ್ನಲಾಗಿದೆ. ಸುಮಲತಾ ಅವರ ಬೆನ್ನ ಹಿಂದೆ ಪರೋಕ್ಷವಾಗಿ ಮಂಡ್ಯ ಕೈ‌ ಮುಖಂಡರಿದ್ದಾರೆ ಎಂಬ ಅನುಮಾನವೂ ಇದೆ.

ಹಾಗಾಗಿ ಜಿಲ್ಲಾ ಮುಖಂಡರಿಗೆ ಲಗಾಮು‌ ಹಾಕಿಸಲು ಮುಂದಾದ ಜೆಡಿಎಸ್‌ ವರಿಷ್ಠರು ಮುಂದಾಗಿದ್ದಾರೆ ಎನ್ನಲಾಗಿದೆ.

ಸಚಿವ ಎಚ್.ಡಿ.ರೇವಣ್ಣ ಅವರು ಸುಮಲತಾ ವಿರುದ್ಧ ವೈಯಕ್ತಿಕ ಟೀಕೆ ಮಾಡಿರುವುದು ಸರಿಯಲ್ಲ. ಆ ರೀತಿ ಅವರು ಮಾತನಾಡಬಾರದಿತ್ತು ಎಂದು ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.