ADVERTISEMENT

ಯೋಧನ ಕುಟುಂಬಕ್ಕೆ ಅರ್ಧ ಎಕರೆ ಜಮೀನು ನೀಡಿದ ಅಂಬರೀಷ್‌ ಪತ್ನಿ

ಒಂದೇ ದಿನ ₹26 ಲಕ್ಷ ನೆರವು

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2019, 20:37 IST
Last Updated 21 ಫೆಬ್ರುವರಿ 2019, 20:37 IST
ಎಚ್‌.ಗುರು ಕುಟುಂಬದ ಸದಸ್ಯರಿಗೆ ಸುಮಲತಾ ಸಾಂತ್ವನ ಹೇಳಿದರು
ಎಚ್‌.ಗುರು ಕುಟುಂಬದ ಸದಸ್ಯರಿಗೆ ಸುಮಲತಾ ಸಾಂತ್ವನ ಹೇಳಿದರು   

ಮಂಡ್ಯ: ಉಗ್ರರ ದಾಳಿಯಿಂದ ಹುತಾತ್ಮರಾದ ಮದ್ದೂರು ತಾಲ್ಲೂಕಿನ ಗುಡಿಗೆರೆ ಗ್ರಾಮದ ಯೋಧ ಎಚ್‌.ಗುರು ಮನೆಗೆ ಅಂಬರೀಷ್‌ ಪತ್ನಿ, ನಟಿ ಸುಮಲತಾ ಗುರುವಾರ ಭೇಟಿನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಕುಟುಂಬಕ್ಕೆ ಅರ್ಧ ಎಕರೆ ಜಮೀನು ನೀಡುವುದಾಗಿ ಘೋಷಿಸಿದರು.

‘ಅಂಬರೀಷ್‌ ಹುಟ್ಟೂರು ದೊಡ್ಡರಸಿನಕೆರೆ ಗ್ರಾಮದಲ್ಲಿ ಪಿತ್ರಾರ್ಜಿತವಾಗಿ ಬಂದಿರುವ ಜಮೀನು ಇದೆ. ಅದರಲ್ಲಿ 20 ಗುಂಟೆ ನೀಡಲಾಗುವುದು. ಅವರೂ ಜಮೀನು ಪಡೆಯಲು ಒಪ್ಪಿದ್ದಾರೆ. ಶೀಘ್ರದಲ್ಲೇ ಅಗತ್ಯ ಪ್ರಕ್ರಿಯೆ ಪೂರೈಸ ಲಾಗುವುದು’ ಎಂದರು.

‘ಜಿಲ್ಲೆ ಜನರು ಇಟ್ಟಿರುವ ಪ್ರೀತಿ, ವಿಶ್ವಾಸ ಉಳಿಸಿಕೊಳ್ಳುತ್ತೇನೆ. ಅಂಬರೀಷ್‌ ಮೇಲಿನ ಪ್ರೀತಿಯ ಋಣ ತೀರಿಸುವ ಅವಕಾಶ ಸಿಕ್ಕರೆ ತೀರಿಸುತ್ತೇನೆ. ಅಭಿಮಾನಿಗಳ ಒತ್ತಾಯದ ಮೇರೆಗೆ ಲೋಕಸಭೆಗೆ ಸ್ಪರ್ಧಿಸುವುದಾಗಿ ಕಾಂಗ್ರೆಸ್‌ ಮುಖಂಡ ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದೇನೆ. ಅಂಬರೀಷ್‌ ಸಹ ಕಾಂಗ್ರೆಸ್‌ ಪಕ್ಷಕ್ಕೆ ಸೇವೆ ಸಲ್ಲಿಸಿದ್ದಾರೆ. ಹೀಗಾಗಿ ಕಾಂಗ್ರೆಸ್‌ನಿಂದಲೇ ಸ್ಪರ್ಧೆ ಬಯಸಿದ್ದೇನೆ’ ಎಂದರು.

ADVERTISEMENT

ಬೇರೆ ಕಡೆ ಸ್ಪರ್ಧೆಗೆ ಸಾಕಷ್ಟು ಅವಕಾಶಗಳಿವೆ. ಆದರೆ ರಾಜಕಾರಣ ಮಾಡುವುದಿದ್ದರೆ ಅದು ಮಂಡ್ಯದಿಂದ ಮಾತ್ರ. ಕಾಂಗ್ರೆಸ್‌ ಮುಖಂಡರನ್ನು ಭೇಟಿಯಾಗಿ ನನ್ನ ಬಯಕೆ ಹೇಳಿಕೊಳ್ಳುತ್ತಿದ್ದೇನೆ. ಕೊನೆಗೆ ಅಭಿಮಾನಿಗಳ ನಿರ್ಧಾರಕ್ಕೆ ಬದ್ಧಳಾಗಿರುತ್ತೇನೆ’ ಎಂದರು.

ಪುಟ್ಟಣ್ಣಯ್ಯ ಮನೆಗೆ ಭೇಟಿ: ಪಾಂಡವಪುರ ತಾಲ್ಲೂಕು ಕ್ಯಾತನಹಳ್ಳಿ ಗ್ರಾಮದ ದಿ.ಕೆ.ಎಸ್‌.ಪುಟ್ಟಣ್ಣಯ್ಯ ಮನೆಗೆ ಭೇಟಿ ನೀಡಿ ಕುಟುಂಬ ಸದಸ್ಯರ ಜೊತೆ ಮಾತುಕತೆ ನಡೆಸಿದರು.

ಒಂದೇ ದಿನ ₹ 26 ಲಕ್ಷ ನೆರವು

ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಜಮೀರ್‌ ಅಹಮದ್‌ ಖಾನ್‌, ಕಾಂಗ್ರೆಸ್‌ ಮುಖಂಡರಾದ ರಿಜ್ವಾನ್‌ ಹರ್ಷದ್‌, ಜಿ.ಎ.ಬಾವ ಗುಡಿಗೆರೆ ಗ್ರಾಮಕ್ಕೆ ಭೇಟಿ ನೀಡಿ ಯೋಧನ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಜಮೀರ್‌ ಅಹಮದ್ ತಮ್ಮ ಟ್ರಾವೆಲ್ಸ್‌ನಿಂದ ₹ 10 ಲಕ್ಷ, ವಕ್ಫ್‌ ಬೋರ್ಡ್‌ನಿಂದ ₹ 10 ಲಕ್ಷ, ರಿಜ್ವಾನ್‌ ಹರ್ಷದ್‌ ₹ 5 ಲಕ್ಷ, ಜಿ.ಎ.ಬಾವ ₹ 1 ಲಕ್ಷ ಸೇರಿ ಒಟ್ಟು ₹ 26 ಲಕ್ಷ ನೆರವು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.