ADVERTISEMENT

ಗವಿ ಗಂಗಾಧರೇಶ್ವರನಿಗೆ ಸೂರ್ಯ ನಮನ

2 ನಿಮಿಷ 13 ಸೆಕೆಂಡು ಶಿವಲಿಂಗಕ್ಕೆ ಆದಿತ್ಯನ ಕಿರಣಾಭಿಷೇಕ: ವಿಸ್ಮಯಕಾರಿ ದೃಶ್ಯ ಕಂಡು ಭಕ್ತರು ಪುನೀತ

​ಪ್ರಜಾವಾಣಿ ವಾರ್ತೆ
Published 14 ಜನವರಿ 2022, 16:35 IST
Last Updated 14 ಜನವರಿ 2022, 16:35 IST
ಗವಿಪುರದಲ್ಲಿರುವ ಗವಿಗಂಗಾಧರೇಶ್ವರ ದೇಗುಲದ ಶಿವಲಿಂಗವನ್ನು ಸೂರ್ಯ ರಶ್ಮಿ ಸ್ಪರ್ಶಿಸಿದ ಮನಮೋಹಕ ದೃಶ್ಯ -ಪ್ರಜಾವಾಣಿ ಚಿತ್ರ/ ರಂಜು ಪಿ
ಗವಿಪುರದಲ್ಲಿರುವ ಗವಿಗಂಗಾಧರೇಶ್ವರ ದೇಗುಲದ ಶಿವಲಿಂಗವನ್ನು ಸೂರ್ಯ ರಶ್ಮಿ ಸ್ಪರ್ಶಿಸಿದ ಮನಮೋಹಕ ದೃಶ್ಯ -ಪ್ರಜಾವಾಣಿ ಚಿತ್ರ/ ರಂಜು ಪಿ   

ಬೆಂಗಳೂರು: ಮಕರ ಸಂಕ್ರಮಣದ ಮುನ್ನಾದಿನವಾದ ಶುಕ್ರವಾರ ಸೂರ್ಯನು ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಪಥ ಬದಲಿಸಿದ್ದು, ಈ ವೇಳೆ ಸೂರ್ಯ ರಶ್ಮಿಯು ಗವಿಪುರದಲ್ಲಿರುವ ಐತಿಹಾಸಿಕ ಗವಿಗಂಗಾಧರೇಶ್ವರ ದೇಗುಲದ ಶಿವಲಿಂಗವನ್ನು ಸ್ಪರ್ಶಿಸಿತು.

2 ನಿಮಿಷ 13 ಸೆಕೆಂಡು ಶಿವಲಿಂಗಕ್ಕೆ ಆದಿತ್ಯನ ಕಿರಣಾಭಿಷೇಕವಾಯಿತು. ಭಕ್ತರು ಈ ವಿಸ್ಮಯಕಾರಿ ದೃಶ್ಯ ಕಣ್ತುಂಬಿಕೊಂಡು ಪುನೀತರಾದರು.

‘ಗುಹಾಂತರ ದೇಗುಲ’ದ ಬಲಭಾಗದಲ್ಲಿರುವ ಕಿಟಕಿಯ ಸರಳುಗಳ ನಡುವಿನಿಂದ ಸಂಜೆ 5.17ರ ಸುಮಾರಿಗೆ ಗರ್ಭಗುಡಿ ಪ್ರವೇಶಿಸಿದ ಸೂರ್ಯರಶ್ಮಿ, ನಂದಿ ವಿಗ್ರಹದ ಎಡಗಾಲನ್ನು ಸ್ಪರ್ಶಿಸಿತು. ಬಳಿಕ ಅದರ ಎರಡು ಶೃಂಗಗಳ (ಕೊಂಬು) ಮಧ್ಯಭಾಗದಿಂದ ಹಾದು ಹೋಗಿ ಗವಿಗಂಗಾಧರೇಶ್ವರನ ಪಾದ ಸ್ಪರ್ಶಿಸಿತು.

ADVERTISEMENT

ನೋಡು ನೋಡುತ್ತಲೇ ಕಿರಣಗಳು ‌ಲಿಂಗವನ್ನು ಪೂರ್ಣವಾಗಿ ಆವರಿಸಿದವು. ಈ ವೇಳೆ ಶಿವಲಿಂಗಕ್ಕೆ ನಿರಂತರವಾಗಿಕ್ಷೀರ ಹಾಗೂ ಎಳನೀರಿನ ಅಭಿಷೇಕ ಮಾಡಲಾಯಿತು. ಗಂಟೆ, ಜಾಗಟೆ ಹಾಗೂ ನಗಾರಿಯ ಸದ್ದು ಮೊಳಗಿದವು. ಶಂಕರನ ಸ್ತೋತ್ರಗಳೂ ಅನುರಣಿಸಿದವು. ಭಕ್ತರು ಹರ ನಾಮ ಸ್ಮರಿಸುತ್ತಾ ಭಾವ ಪರವಶರಾದರು.

ಶಿವಲಿಂಗದ ಶಿರವನ್ನು ಚುಂಬಿಸಿ ಸೂರ್ಯದೇವ ಮರೆಯಾಗುತ್ತಿದ್ದಂತೆ ದೇವಸ್ಥಾನದೊಳಗಿದ್ದವರು ‘ಓಂ ನಮಃ ಶಿವಾಯ.. ಓಂ ನಮಃ ಶಿವಾಯ.. ಹರ ಹರ ಮಹಾದೇವ್‌.. ಶಂಭೋ ಶಿವ ಶಂಕರ’ ಎಂಬ ಘೋಷಣೆಗಳನ್ನು ಮೊಳಗಿಸಿದರು. ನಂತರ ದೇವರಿಗೆ ಮತ್ತೊಮ್ಮೆ ಅಭಿಷೇಕ ಮಾಡಿ ಹೂವಿನಿಂದ ಅಲಂಕರಿಸಲಾಯಿತು. ಸಂಕಲ್ಪ ಪೂಜೆಯನ್ನೂ ನೆರವೇರಿಸಲಾಯಿತು.

‘ದೇಗುಲದೊಳಗೆ ಪ್ರವೇಶಿಸಿದ ಸೂರ್ಯದೇವ ಮೊದಲು ನಂದಿಯ ಎಡ ಕಾಲಿಗೆ ನಮಸ್ಕರಿಸಿದ. ಬಳಿಕ ಅದರ ಕಿವಿಯ ಹತ್ತಿರ ಬಂದು ನಂದಿಯನ್ನು ಪ್ರಾರ್ಥಿಸಿದ. ನಂತರ ಅದರ ಎರಡು ಶೃಂಗಗಳ ಮಧ್ಯಭಾಗದಿಂದ ಸ್ವಾಮಿಯ ಗರ್ಭಗೃಹ ಪ್ರವೇಶಿಸಿದ.ಶಿವ ಮತ್ತು ಪಾರ್ವತಿ ಒಂದೇ ಪೀಠದಲ್ಲಿರುವುದು ಈ ದೇಗುಲದ ವೈಶಿಷ್ಟ್ಯ. ಗರ್ಭಗುಡಿ ಪ್ರವೇಶಿಸುತ್ತಿದ್ದಂತೆ ಸೋಮಸೂತ್ರದ ಪಾರ್ವತಿಯ ದರ್ಶನ ಮಾಡಿ ಆಕೆಯ ಅನುಗ್ರಹ ಪಡೆದ. ಅನಂತರ ಲಿಂಗದ ಪಾದ ಸ್ಪರ್ಶಿಸಿದ ಸೂರ್ಯದೇವ, ಕ್ರಮೇಣ ಇಡೀ ಲಿಂ‌ಗಕ್ಕೆ ಕಿರಣಾಭಿಷೇಕ ಮಾಡಿ ಉತ್ತರಾಯಣಕ್ಕೆ ಪ್ರವೇಶ ಮಾಡಿದ್ದಾನೆ’ ಎಂದುದೇವಸ್ಥಾನದ ಪ್ರಧಾನ ಅರ್ಚಕಸೋಮಸುಂದರ್‌ ದೀಕ್ಷಿತ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.