ADVERTISEMENT

ಅಸಹಾಯಕರಾದರೇ ‘ಹೌದಾ ಹುಲಿಯಾ’!: ಸುನಿಲ್‌ಕುಮಾರ್

ಪುತ್ರ ವ್ಯಾಮೋಹವೊ, ಸ್ವಪಕ್ಷೀಯರ ಬೆದರಿಕೆಯೊ: ಸುನಿಲ್‌ಕುಮಾರ್ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 23:47 IST
Last Updated 29 ಜನವರಿ 2026, 23:47 IST
ವಿಧಾನಸಭೆಯಲ್ಲಿ ಮಾತನಾಡಿದ ವಿ.ಸುನಿಲ್‌ಕುಮಾರ್
ವಿಧಾನಸಭೆಯಲ್ಲಿ ಮಾತನಾಡಿದ ವಿ.ಸುನಿಲ್‌ಕುಮಾರ್   

ಬೆಂಗಳೂರು: ‘ಒಂದು ಕಾಲಕ್ಕೆ ‘ಹೌದಾ ಹುಲಿಯಾ’ ಎಂದು ಕರೆಯಿಸಿಕೊಳ್ಳುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಅಸಹಾಯಕರು. ಇದಕ್ಕೆ ಪುತ್ರ ವ್ಯಾಮೋಹ ಕಾರಣವೊ? ಸ್ವಪಕ್ಷೀಯರ ಬೆದರಿಕೆಯೊ? ಹೈಕಮಾಂಡ್‌ನ ಬ್ಲಾಕ್‌ಮೇಲ್‌ ಕಾರಣವೊ’ ಎಂದು ಬಿಜೆಪಿಯ ವಿ.ಸುನಿಲ್‌ಕುಮಾರ್‌ ಪ್ರಶ್ನಿಸಿದರು.

ರಾಜ್ಯಪಾಲರ ಭಾಷಣದ ಕುರಿತ ವಂದನಾ ನಿರ್ಣಯದ ಮೇಲೆ ವಿಧಾನಸಭೆಯಲ್ಲಿ ಮಾತನಾಡಿದ ಅವರು, ‘ಕಳೆದ ಎರಡೂವರೆ ವರ್ಷಗಳ ನಿಮ್ಮ ಆಡಳಿತ ಗಮನಿಸಿದಾಗ ಎಲ್ಲ ಕಡೆಯೂ ನಿಮ್ಮ ಅಸಹಾಯಕತೆ ಕಾಣುತ್ತಿದೆ. ಇದು ನಮ್ಮ ಆರೋಪ ಮಾತ್ರವಲ್ಲ, ನಿಮ್ಮ ಪಕ್ಷದ ಶಾಸಕರೇ ಈಗ ಇರುವುದು ಹಿಂದಿನ ಸಿದ್ಧರಾಮಯ್ಯ ಅಲ್ಲ ಎನ್ನುತ್ತಿದ್ದಾರೆ’ ಎಂದರು.

‘ಸಿದ್ದರಾಮಯ್ಯ ಇಷ್ಟು ಅಸಹಾಯಕ ಆಗುತ್ತಾರೆ ಎಂದು ರಾಜ್ಯದ ಜನ ಭಾವಿಸಿರಲಿಲ್ಲ. ಶಾಸನ ಸಭೆಗೆ ಬನ್ನಿ ಎಂದು ಶಾಸಕರಿಗೆ ಮುಖ್ಯಮಂತ್ರಿ ಪತ್ರ ಬರೆಯುತ್ತಾರೆ. ಜನಪ್ರತಿನಿಧಿಗಳ ದೂರವಾಣಿ ಕರೆಯನ್ನು ಎತ್ತಬೇಕು ಎಂದು ಮುಖ್ಯಕಾರ್ಯದರ್ಶಿಯವರು ಅಧಿಕಾರಿಗಳಿಗೆ ತಾಕೀತು ಮಾಡುತ್ತಾರೆ. ಕೆ.ಎನ್‌.ರಾಜಣ್ಣ ಅವರನ್ನು ಸಂಪುಟದಿಂದ ತೆಗೆಯಿರಿ ಎಂದು ಹೈಕಮಾಂಡ್ ಹೇಳುತ್ತದೆ, ತಮ್ಮ ಆಪ್ತರಾದರೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಕೋಗಿಲು ಪ್ರಕರಣದಲ್ಲಿ ಕೆ.ಸಿ.ವೇಣುಗೋಪಾಲ್ ಅವರ ಒಂದು ‘ಎಕ್ಸ್‌’ ಸಂದೇಶಕ್ಕೆ ಗಾಬರಿ ಬಿದ್ದು ಓಡಿ ಹೋಗುತ್ತಾರೆ. ಯಾಕೆ ಹೀಗಾಗಿದ್ದೀರಾ’ ಎಂದು ಮುಖ್ಯಮಂತ್ರಿಯವರನ್ನು ಉದ್ದೇಶಿಸಿ ಸುನಿಲ್ ಪ್ರಶ್ನಿಸಿದರು.

ADVERTISEMENT

‘ಸಿದ್ದರಾಮಯ್ಯ ಅವರ ಅಸಹಾಯಕತೆಗೆ ಮತ್ತೊಂದು ಉದಾಹರಣೆ ಎಂದರೆ, ಕಾಂತರಾಜ ಆಯೋಗದ ವರದಿ ತಿರಸ್ಕರಿಸಿದ್ದು. ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳಿಗೆ ನ್ಯಾಯ ಕೊಡುತ್ತೇನೆ. ಎಷ್ಟೇ ವಿರೋಧ ಬಂದರೂ ವರದಿ ಜಾರಿ ಮಾಡುತ್ತೇನೆ ಎಂದು ಪ್ರತಿಜ್ಞೆ ತೊಟ್ಟಿದ್ದರು. ರಾಹುಲ್‌ಗಾಂಧಿ ವರದಿ ತಿರಸ್ಕರಿಸಿ ಅಂದ ತಕ್ಷಣವೇ ವರದಿಯನ್ನು ಕಸದ ಬುಟ್ಟಿಗೆ ಹಾಕಿದರು. ಆದ್ದರಿಂದ ನಿಮ್ಮನ್ನು ಹಿಂದುಳಿದವರ ಚಾಂಪಿಯನ್ ಎಂದು ಕರೆಯಲು ಸಾಧ್ಯವೇ’ ಎಂದರು.

‘ಎರಡೂವರೆ ವರ್ಷದ ಆಡಳಿತದ ಬಗ್ಗೆ ಸರ್ಕಾರ ಆತ್ಮಾವಲೋಕನ ಮಾಡಿಕೊಳ್ಳಬೇಕಿತ್ತು. ಅದನ್ನು ಬಿಟ್ಟು ಸರ್ಕಾರ ಸಂಘರ್ಷದ ಹಾದಿ ಹಿಡಿದಿದೆ’ ಎಂದು ಅವರು ಹೇಳಿದರು.

‘ತಮ್ಮದು ಆಲಿಸುವ ಸರ್ಕಾರ ಎಂದು ಮುಖ್ಯಮಂತ್ರಿ ಹೇಳಿಕೊಳ್ಳುತ್ತಾರೆ. ಆದರೆ, ಸರ್ಕಾರದ ಆಡಳಿತದ ಬಗ್ಗೆ ಜನರ ಅಭಿಪ್ರಾಯ ಏನಿದೆ ಎಂಬುದನ್ನು ಸಿದ್ದರಾಮಯ್ಯ ಅವರು ಮಾರುವೇಷದಲ್ಲಿ ಹೋಗಿ ತಿಳಿದುಕೊಳ್ಳಲಿ. ಆಗ ವಾಸ್ತವ ಗೊತ್ತಾಗುತ್ತದೆ. ಹಿಂದೆ ರಾಜರುಗಳು ಮಾರುವೇಷದಲ್ಲಿ ಹೋಗಿ ಅಭಿಪ್ರಾಯ ತಿಳಿದುಕೊಳ್ಳುತ್ತಿದ್ದರು’ ಎಂದು ಸುನಿಲ್‌ಕುಮಾರ್ ಹೇಳಿದರು.

‘ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಎಂದು ನಾವು ಹೇಳುವುದಲ್ಲ. ನಿಮ್ಮ ಪಕ್ಷದ ಶಾಸಕರವೇ ಬಹಿರಂಗವಾಗಿ ಹೇಳುತ್ತಿದ್ದಾರೆ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಎಂಬುದೇ ಇಲ್ಲ. ನಿಮ್ಮ ಪಕ್ಷದವರಿಗೊಂದು ಕಾನೂನು ಉಳಿದವರಿಗೊಂದು ಕಾನೂನು ಎಂಬಂತಾಗಿದೆ’ ಎಂದು ಟೀಕಿಸಿದರು.

ಹಳಿ ತಪ್ಪಿದ ಹದವಿಲ್ಲದ ನಾಯಕತ್ವದ ಸರ್ಕಾರ. ಸಂವಾದವೇ ಇಲ್ಲ ಸಂಘರ್ಷವೇ ಸರ್ವಸ್ವ ಎಂದುಕೊಂಡಿರುವ ಜಾಹಿರಾತಿನ ಆಡಳಿತ ಇದು
ವಿ.ಸುನಿಲ್‌ಕುಮಾರ್ ಬಿಜೆಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.