ADVERTISEMENT

Super Bug: ‘ಸೂಪರ್‌ ಬಗ್‌’ ಬಗ್ಗಿಸಲು ವೈಜ್ಞಾನಿಕ ಅಸ್ತ್ರ

ಎಸ್.ರವಿಪ್ರಕಾಶ್
Published 12 ಜುಲೈ 2025, 23:59 IST
Last Updated 12 ಜುಲೈ 2025, 23:59 IST
ಸೂಪರ್ ಬಗ್
ಸೂಪರ್ ಬಗ್   

ಬೆಂಗಳೂರು: ಗಂಭೀರ ಸ್ವರೂಪದ ಕಾಯಿಲೆಗಳನ್ನು ಹರಡುವ ಬ್ಯಾಕ್ಟೀರಿಯಾ, ವೈರಸ್‌, ಫಂಗೈ ಮತ್ತು ಪರಾವಲಂಬಿಗಳು ಔಷಧ ಹಾಗೂ ರೋಗ ನಿರೋಧಕಗಳಿಗೆ, ಪ್ರತಿಜೀವಕ ನಿರೋಧಕ ಶಕ್ತಿ ಬೆಳೆಸಿಕೊಂಡಿರುವುದರಿಂದ ಅವು ಕೆಲಸ ಮಾಡದೇ ಸಾಯುವ ರೋಗಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.ಇದು ಮಾನವರ ಸಮಸ್ಯೆ ಮಾತ್ರವಲ್ಲ, ಪ್ರಾಣಿಗಳು ಮತ್ತು ಕೃಷಿ ಕ್ಷೇತ್ರವೂ ಈ ಸಮಸ್ಯೆಯನ್ನು ಎದುರಿಸುತ್ತಿವೆ. ಮಾನವರಲ್ಲಿ ಕ್ಷಯ ಸೇರಿದಂತೆ ಹಲವು ಗಂಭೀರ ಸ್ವರೂಪದ ಕಾಯಿಲೆಗಳ ಔಷಧಗಳಿಗೆ ಈ ಸೂಕ್ಷ್ಮಜೀವಿಗಳು ಪ್ರತಿಜೀವಕ ನಿರೋಧಕ ಶಕ್ತಿ ಬೆಳೆಸಿಕೊಂಡಿವೆ. ಇದರಿಂದ ಚಿಕಿತ್ಸೆ ನೀಡುವುದು ಸಂಕೀರ್ಣವಾಗಿದೆ. ಸೋಂಕು ರೋಗ ತಡೆಯಲು ಸಾಧ್ಯವಾಗದೇ, ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದೆ. ಕೃಷಿಯಲ್ಲೂ ರೋಗಗಳನ್ನು ತಡೆಯಲಾಗುತ್ತಿಲ್ಲ, ಫಸಲು ನಾಶವಾಗುತ್ತಿದೆ. ಪ್ರತಿಜೀವಕ ನಿರೋಧಕಗಳಿಗೆ ‘ಸೂಪರ್‌ ಬಗ್’ ಎಂದೂ ಕರೆಯಲಾಗುತ್ತದೆ.

ಜಾಗತಿಕವಾಗಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಬೆಂಗಳೂರಿನ ‘ಸೆಂಟರ್‌ ಫಾರ್‌ ಸೆಲ್ಯುಲರ್ ಆ್ಯಂಡ್ ಮಾಲೆಕ್ಯುಲಾರ್‌ ಪ್ಲಾಟ್‌ಫಾರ್ಮ್’(ಸಿ–ಕ್ಯಾಂಪ್‌) ಹೊಸ ಸಾಹಸಕ್ಕೆ ಕೈ ಹಾಕಿದೆ. ಇದಕ್ಕಾಗಿ ‘ಒನ್‌ ಹೆಲ್ತ್‌ ಎಎಂಆರ್‌ ಚಾಲೆಂಜ್‌’ ಕಾರ್ಯಕ್ರಮ ಆರಂಭಿಸಿದೆ. ಈ ಮೂಲಕ ನವಪೀಳಿಗೆಯ ವಿಜ್ಞಾನಿಗಳಿಗೆ ಒಂದು ಸವಾಲು ನೀಡಿದ್ದು, ಪ್ರತಿಜೀವಕ ನಿರೋಧಕ ಶಕ್ತಿ ಬೆಳೆಸಿಕೊಂಡ ಸೂಕ್ಷ್ಮಜೀವಿಗಳಿಗೆ ಮದ್ದರೆಯಲು ಹೊಸ ತಂತ್ರಜ್ಞಾನ, ಪರಿಹಾರವನ್ನು ಅಭಿವೃದ್ಧಿ ಪಡಿಸಬೇಕು. ಸೂಕ್ಷ್ಮಜೀವಿಗಳು ಪ್ರತಿಜೀವಕ ಶಕ್ತಿ ಪಡೆದ ರೀತಿ, ಅವುಗಳ ಗುರುತಿಸುವಿಕೆ ಮತ್ತು ಅವುಗಳನ್ನು ನಿಸ್ತೇಜಗೊಳಿಸಿ ನಾಶಗೊಳಿಸುವ ಸಿದ್ಧ ತಂತ್ರಜ್ಞಾನ ಮಾದರಿಯನ್ನು ವಿಜ್ಞಾನಿಗಳು ಮುಂದಿಡಬೇಕು.

ವಿನೂತನ ಮತ್ತು ಅನನ್ಯ ಆವಿಷ್ಕಾರ ಮಾಡಿ ಸೈ ಎನಿಸಿಕೊಳ್ಳುವ ವಿಜ್ಞಾನಿಗಳಿಗೆ ₹40 ಲಕ್ಷದಿಂದ ₹2 ಕೋಟಿಯವರೆಗೆ ಆರ್ಥಿಕ ಸಹಾಯ ನೀಡಲು ಸಂಸ್ಥೆ ಮುಂದಾಗಿದೆ.

ADVERTISEMENT

ಕೇಂದ್ರ ಸರ್ಕಾರದ ‘ರಾಷ್ಟ್ರೀಯ ಕ್ರಿಯಾ ಯೋಜನೆ–2.0’ ಭಾಗವಾಗಿ ಮುಂದಿನ ಎರಡು ವರ್ಷಗಳೊಳಗೆ ಪ್ರತಿಜೀವಕ ನಿರೋಧಕ ಶಕ್ತಿಗೆ ಪ್ರತಿಯಾಗಿ ಪರಿಹಾರವನ್ನು ಮುಂದಿಡಬೇಕಾಗಿದೆ.

ಇದಕ್ಕಾಗಿ ‘ಇಂಡಿಯಾ ಎಎಂಆರ್‌ ಇನೋವೇಷನ್‌ ಹಬ್‌’ವೊಂದನ್ನು ಆರಂಭಿಸಲಾಗಿದೆ. ಆಸಕ್ತ ವಿಜ್ಞಾನಿಗಳು ಇದರಲ್ಲಿ ನೋಂದಾಯಿಸಿಕೊಳ್ಳಬೇಕು. ದೇಶ–ವಿದೇಶಗಳ ವಿಜ್ಞಾನಿಗಳೂ ಇದರಲ್ಲಿ ಭಾಗವಹಿಸಬಹುದು. ಒಟ್ಟು 12 ಆವಿಷ್ಕಾರಗಳಿಗೆ ಆರ್ಥಿಕ ನೆರವು ನೀಡಲಾಗುತ್ತದೆ ಎಂದು ಸಿ–ಕ್ಯಾಂಪ್‌ ನಿರ್ದೇಶಕ ಡಾ. ತಸ್ಲಿಮ್‌ಆರೀಫ್‌ ಸಯ್ಯದ್‌ ವಿವರಿಸಿದ್ದಾರೆ. 

ಭಾರತ ಸರ್ಕಾರದ ವೈಜ್ಞಾನಿಕ ಸಲಹೆಗಾರ ಹಾಗೂ ವಿಜ್ಞಾನಿ ಪ್ರೊ.ಎ.ಕೆ.ಸೂದ್ ಅವರು ಈ ವಿಚಾರವಾಗಿ ಈಚೆಗೆ ‘ಸಿ–ಕ್ಯಾಂಪ್‌’ಗೆ ಭೇಟಿ ನೀಡಿದ್ದರು. ವಿಜ್ಞಾನ, ತಂತ್ರಜ್ಞಾನ, ಉದ್ಯಮ ಮತ್ತು ಸರ್ಕಾರಗಳ 75 ಪ್ರತಿನಿಧಿಗಳ ಜತೆ ನಡೆಸಿದ ಸಭೆಯಲ್ಲಿ ಅವರು, ಸಮುದಾಯ ಆರೋಗ್ಯ, ಸಾರ್ವಜನಿಕ ಆರೋಗ್ಯ ವ್ಯವಸ್ಥೆ, ಪ್ರಾಣಿ ಮತ್ತು ಕೃಷಿ ಆರೋಗ್ಯವನ್ನು ಕಾಪಾಡುವುದಕ್ಕೆ ‘ಒನ್‌ ಹೆಲ್ತ್‌ ಎಎಂಆರ್‌ ಚಾಲೆಂಜ್‌’ ಅನ್ನು ಸಂಘಟಿತ ಪ್ರಯತ್ನದ ಮೂಲಕ ಸಾಕಾರಗೊಳಿಸುವ ಅಗತ್ಯವನ್ನು ಪ್ರತಿಪಾದಿಸಿದರು.

‘ಒನ್‌ ಹೆಲ್ತ್‌ ಎಎಂಆರ್‌ ಚಾಲೆಂಜ್‌’ಗೆ ‘ಇಂಟರ್‌ನ್ಯಾಷನಲ್‌ ಸೆಂಟರ್ ಫಾರ್ ಆ್ಯಂಟಿಮೈಕ್ರೊಬಿಯಲ್‌ ರೆಸಿಸ್ಟೆನ್ಸ್‌ ಸಲ್ಯುಷನ್ಸ್‌’ (ಐಸಿಎಆರ್‌ಎಸ್‌) ಮುಂದಿನ ಐದು ವರ್ಷಗಳ ಕಾಲ ಹಣಕಾಸಿನ ನೆರವು ಮತ್ತು ತಾಂತ್ರಿಕ ಪರಿಣತಿಯನ್ನು ಹಂಚಿಕೊಳ್ಳಲು ಮುಂದಾಗಿದೆ. ಈ ಕೆಲಸಕ್ಕೆ ಇತರ ಮೂಲಗಳಿಂದಲೂ ಸಂಪನ್ಮೂಲ ಸಂಗ್ರಹಿಸಲಾಗುವುದು ಎಂದು ಸೂದ್‌ ತಿಳಿಸಿದ್ದಾರೆ.

ಯಾವ ಕಾಯಿಲೆಯಲ್ಲಿ ಈ ಸಮಸ್ಯೆ?

ನಿಯೊಪ್ಲಾಸಂ, ಉಸಿರಾಟದ ಸೋಂಕು, ಕ್ಷಯ, ಕರುಳಿನ ಸೋಂಕು, ಮಧುಮೇಹ, ಮೂತ್ರಪಿಂಡದ ಕಾಯಿಲೆ, ತಾಯಿ ಮತ್ತು ಶಿಶುವಿನ ಕಾಯಿಲೆಗಳಲ್ಲಿ ಈ ಸಮಸ್ಯೆಯಿಂದ ಸಾವಿನ ಪ್ರಮಾಣ ಹೆಚ್ಚು. ಇವುಗಳ ಔಷಧ, ರೋಗನಿರೋಧಕಗಳಿಗೆ ಪ್ರತಿಜೀವಕಗಳು ನಿರೋಧಕ ಶಕ್ತಿ ಬೆಳೆಸಿಕೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.