ADVERTISEMENT

13ರಿಂದ ‘ಭೂಮಿ ಸುಪೋಷಣ–ಸಂರಕ್ಷಣಾ’ ಅಭಿಯಾನ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2021, 19:31 IST
Last Updated 9 ಏಪ್ರಿಲ್ 2021, 19:31 IST
ಭೂಮಿ ಸುಪೋಷಣ ಮತ್ತು ಸಂರಕ್ಷಣಾ ಅಭಿಯಾನದ ಲಾಂಛನ
ಭೂಮಿ ಸುಪೋಷಣ ಮತ್ತು ಸಂರಕ್ಷಣಾ ಅಭಿಯಾನದ ಲಾಂಛನ   

ಬೆಂಗಳೂರು: ‘ರಾಸಾಯನಿಕಗಳ ಬಳಕೆಯಿಂದ ಭೂಮಿ ಬಂಜರಾಗುವುದನ್ನು ತಪ್ಪಿಸಿ, ಫಲವತ್ತತೆ ಹೆಚ್ಚಿಸುವ ಜಾಗೃತಿ ಮೂಡಿಸಲು ‘ಭೂಮಿ ಸುಪೋಷಣ ಮತ್ತು ಸಂರಕ್ಷಣಾ ಅಭಿಯಾನ’ವನ್ನುಇದೇ 13ರಿಂದ ಜುಲೈ 24ರವರೆಗೆ ದೇಶವ್ಯಾಪಿ ಹಮ್ಮಿಕೊಳ್ಳಲಾಗಿದೆ’ ಎಂದುಸುಪೋಷಣ ಜನ ಅಭಿಯಾನದ ರಾಷ್ಟ್ರೀಯ ಸಮಿತಿಯ ಸದಸ್ಯ ಆನಂದ್ ತಿಳಿಸಿದರು.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಭೂಮಿ ಸುಪೋಷಣೆಗಾಗಿ ಕೃಷಿಕರು, ಸಾಮಾನ್ಯ ಜನರನ್ನು ಸಂಪರ್ಕಿಸುವುದು, ಈಗಾಗಲೇ ಸುಪೋಷಣೆಯಲ್ಲಿ ತೊಡಗಿರುವ ಕೃಷಿಕರಿಂದ ಮಾಹಿತಿ ನೀಡುವುದು ಹಾಗೂ ಸಾವಯವ ಆಸಕ್ತರನ್ನು ಪ್ರೇರೇಪಿಸುವುದು ಈ ಅಭಿಯಾನದ ಮುಖ್ಯ ಉದ್ದೇಶ’ ಎಂದರು.

‘ಭೂತಾಯಿಯ ರಕ್ಷಣೆಯ ಧ್ಯೇಯದೊಂದಿಗೆ ಹಮ್ಮಿಕೊಂಡಿರುವ ಅಭಿಯಾನಕ್ಕೆ ಅಕ್ಷಯ ಕೃಷಿ ಪರಿವಾರ, ಸಾವಯವ ಕೃಷಿ ಪರಿವಾರ, ಸ್ವದೇಶಿ ಜಾಗರಣ ಮಂಚ್, ಗ್ರಾಮ ವಿಕಾಸ, ವನವಾಸಿ ಕಲ್ಯಾಣ ಸೇರಿದಂತೆ ಹಲವು ಸಂಘಟನೆಗಳು ಕೈಜೋಡಿಸಿವೆ. ಏ.13ರ ಯುಗಾದಿ ಹಬ್ಬದಂದು ಅಭಿಯಾನಕ್ಕೆ ಅಧಿಕೃತ ಚಾಲನೆ ನೀಡಲಾಗುವುದು’ ಎಂದು ವಿವರಿಸಿದರು.

‘ಪ್ರತಿ ಗ್ರಾಮದಲ್ಲಿ ಅಂದು ಭೂಮಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಅಭಿಯಾನ ಆರಂಭಗೊಳ್ಳಲಿದೆ. ಗ್ರಾಮದ ಎಲ್ಲ ರೈತರಿಂದ ಅವರ ಕೃಷಿ ಭೂಮಿಯಿಂದ ಒಂದು ಹಿಡಿ ಮಣ್ಣನ್ನು ತಂದು ರಾಶಿ ಮಾಡಲಾಗುವುದು. ಅದಕ್ಕೆ ಪೂಜೆ ಸಲ್ಲಿಸುವ ಮೂಲಕ ಭೂತಾಯಿಯನ್ನು ಸಾವಯವಗೊಳಿಸುವ ಸಂಕಲ್ಪ ಮಾಡಲಾಗುವುದು. ಅಭಿಯಾನದ ಭಾಗವಾಗಿ ತಾಲ್ಲೂಕು ಮಟ್ಟದಲ್ಲಿ ಸಮಾವೇಶಗಳು, ಗ್ರಾಮಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜನೆ ರೂಪಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಅಭಿಯಾನದ ಕರ್ನಾಟಕ ದಕ್ಷಿಣ ಪ್ರಾಂತದ ಸಂಚಾಲಕ ಅರುಣ್ ಕುಮಾರ್,‘ದೇಶದಲ್ಲಿನ ಭೂಮಿಯುರಾಸಾಯನಿಕಗಳ ಬಳಕೆಯಿಂದ ಅಪಾಯಕ್ಕೆ ತುತ್ತಾಗಿದೆ. ಅದನ್ನು ಸಾವಯವಗೊಳಿಸುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಭೂಮಿಯನ್ನು ಕೊಂಡೊಯ್ಯಬೇಕು. ಇದಕ್ಕಾಗಿ ರೈತರಿಗೆ ಸಾವಯವ ಕೃಷಿಯ ಜಾಗೃತಿ ಮೂಡಿಸಲಾಗುವುದು. ಸಾವಯವ ಕೃಷಿಯಲ್ಲಿ ಸಾಧನೆಗೈದ ರೈತರಿಂದಲೇ ಮಾಹಿತಿ ನೀಡಲಾಗುವುದು. ಇದರಲ್ಲಿ ಅಭಿಯಾನದ ಕಾರ್ಯಕರ್ತರು ನೆರವಾಗಲಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.