ಪ್ರಿಯಾಂಕ್ ಖರ್ಗೆ ಮತ್ತು ನರೇಂದ್ರ ಮೋದಿ
ಬೆಂಗಳೂರು: ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ್ದ ಪ್ರಕರಣವನ್ನು ಸಚಿವ ಪ್ರಿಯಾಂಕ್ ಖರ್ಗೆ ಖಂಡಿಸಿದ್ದಾರೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ್ದ ಪ್ರಕರಣ ಸಂಬಂಧ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಮೇಲಿನ ಶೂ ದಾಳಿಯು ಪ್ರತಿಯೊಬ್ಬ ಭಾರತೀಯರನ್ನೂ ಕೆರಳಿಸಿದೆ ಎಂದು ಮೋದಿ ಅವರು ಹೇಳಿದ್ದಾರೆ. ಘಟನೆ ನಡೆದಿದ್ದು ಬೆಳಿಗ್ಗೆ 11.30 ಗಂಟೆ ಸುಮಾರಿಗೆ, ಮೋದಿಯವರು ಕೆರಳಿ ಪ್ರತಿಕ್ರಿಯೆ ನೀಡಿದ್ದು ರಾತ್ರಿ 8.29 ಗಂಟೆಗೆ!, ಮೋದಿಯವರು ಕೆರಳುವುದಕ್ಕೆ ಸುದೀರ್ಘ 9 ಗಂಟೆಗಳ ಅವಧಿ ಹಿಡಿಯಿತು. ಅದೇ ಕ್ರಿಕೆಟ್ ಪಂದ್ಯದ ವಿಷಯವಾಗಿದ್ದರೆ ಕೆಲವೇ ಕ್ಷಣಗಳಲ್ಲಿ ಟ್ವೀಟ್ ಮಾಡುತ್ತಿದ್ದರು’ ಎಂದು ಕುಟುಕಿದ್ದಾರೆ.
‘ಈ ಘಟನೆಯು ಪ್ರತಿಯೊಬ್ಬ ಭಾರತೀಯರನ್ನೂ ಕೆರಳಿಸಿದೆ ಎಂದಿದ್ದಾರೆ. ಆದರೆ, ದೇಶದ ಗೃಹ ಸಚಿವ ಅಮಿತ್ ಶಾ ಕೆರಳಲಿಲ್ಲ, ಖಂಡಿಸಲಿಲ್ಲ. ಬಿಜೆಪಿ ಪಕ್ಷ ಕೆರಳಲಿಲ್ಲ, ಖಂಡಿಸಲಿಲ್ಲ. ಕೇಂದ್ರದ ಯಾವೊಬ್ಬ ಮಂತ್ರಿಯೂ ಕೆರಳಿ ಖಂಡಿಸಲಿಲ್ಲ. ಯಾವೊಬ್ಬ ಬಿಜೆಪಿಗರೂ ಕೆರಳಿ ಬೀದಿಗಿಳಿಯಲಿಲ್ಲ’ ಎಂದು ಪ್ರಿಯಾಂಕ್ ಕಿಡಿಕಾರಿದ್ದಾರೆ.
‘ಶೂ ಎಸೆಯಲು ಯತ್ನಿಸಿದ್ದ ಪ್ರಕರಣವನ್ನು ಖಂಡಿಸುವ ಬದಲು ಈ ದಾಳಿಯನ್ನು ಬಿಜೆಪಿ ಹಾಗೂ ಸಂಘಪಾರಿವಾರದ ಬೆಂಬಲಿಗರು ಸಂಭ್ರಮಿಸುತ್ತಿದ್ದಾರೆ. ಇವರನ್ನು ನೋಡಿ ಮೋದಿಯವರು ಕೆರಳಲಿಲ್ಲ. ಮತಗಳ್ಳತನದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾಗ ಮಳೆಗಾಲದ ಕಪ್ಪೆಗಳಂತೆ ವಟಗುಟ್ಟಿದ್ದ ಬಿಜೆಪಿಯವರು ಈಗೇಕೆ ಮೌನವಾಗಿದ್ದಾರೆ?, ಸಂವಿಧಾನದ ಘನತೆ, ನ್ಯಾಯಾಲಯದ ಪಾವಿತ್ರ್ಯತೆ ಬಿಜೆಪಿಗೆ ಮುಖ್ಯವಲ್ಲವೇ’ ಎಂದು ಖರ್ಗೆ ಪ್ರಶ್ನಿಸಿದ್ದಾರೆ.
‘ಇದು ಕೇವಲ ವ್ಯಕ್ತಿಯೊಬ್ಬರ ಮೇಲೆ ನಡೆಸಿದ ದಾಳಿಯಲ್ಲ, ಮೋದಿಯವರೇ ಪಾಲಿಸಿ ಪೋಷಿಸುತ್ತಿರುವ ವಿಚಾರಧಾರೆಯು ಸಂವಿಧಾನದ ಮೇಲೆ ನಡೆಸಿದ ದಾಳಿ. ಮೋದಿಯವರು ನಿಜಕ್ಕೂ ಕೆರಳುವುದಿದ್ದರೆ ತಾವು ಪ್ರತಿನಿಧಿಸುವ ವಿಚಾರಧಾರೆಯ ವಿರುದ್ಧ ಕೆರಳಬೇಕು’ ಎಂದು ಪ್ರಿಯಾಂಕ್ ಟೀಕಿಸಿದ್ದಾರೆ.
ಸುಪ್ರೀಂ ಕೋರ್ಟ್ ಸಭಾಂಗಣದಲ್ಲಿ ಸೋಮವಾರ ಗವಾಯಿ ಅವರ ಮೇಲೆ ರಾಕೇಶ್ ಕಿಶೋರ್ ಶೂ ಎಸೆಯಲು ಯತ್ನಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.