ನವದೆಹಲಿ: ಬೆಂಗಳೂರಿನಲ್ಲಿ ಬಗರ್‌ಹುಕುಂ ಜಮೀನು ಅಕ್ರಮ ಮಂಜೂರಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮಾಣಪತ್ರ ಸಲ್ಲಿಸುವಂತೆ ಕರ್ನಾಟಕ ಲೋಕಾಯುಕ್ತಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ನಿರ್ದೇಶನ ನೀಡಿದೆ.
ಈ ಪ್ರಕರಣ ಸಂಬಂಧ ಭ್ರಷ್ಟಾಚಾರ ನಿಗ್ರಹ ದಳದಿಂದ ತನಿಖೆ ನಡೆಸಲು ಹೈಕೋರ್ಟ್ 2018ರಲ್ಲಿ ಆದೇಶ ನೀಡಿತ್ತು. ಬಗರ್‌ಹುಕುಂ ಮಂಜೂರಾತಿ ಸಮಿತಿಗೆ ಬಿಜೆಪಿ ಶಾಸಕ ಆರ್.ಅಶೋಕ ಅಧ್ಯಕ್ಷರಾಗಿದ್ದರು. ತಮ್ಮ ವಿರುದ್ಧ ಎಸಿಬಿ ದಾಖಲಿಸಿದ್ದ ಎಫ್‌ಐಆರ್ ರದ್ದುಗೊಳಿಸುವಂತೆ ಅಶೋಕ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಬೆಂಗಳೂರು ಉತ್ತರ ತಾಲ್ಲೂಕು ಸಮಿತಿ ಅಧ್ಯಕ್ಷರಾಗಿದ್ದ ಅಶೋಕ ಅವರು ಸೋಮನಹಳ್ಳಿಯಲ್ಲಿ 8 ಎಕರೆ ಭೂಮಿಯನ್ನು ಅಕ್ರಮವಾಗಿ ಹಂಚಿಕೆ ಮಾಡಿದ್ದರು ಎಂದು ಆರೋಪಿಸಿ ಎಫ್‌ಐಆರ್ ದಾಖಲಿಸಲಾಗಿತ್ತು. ಪ್ರಕರಣದ ವಿಚಾರಣೆಯನ್ನು ಏಪ್ರಿಲ್ 22ಕ್ಕೆ ಮುಂದೂಡಲಾಗಿದೆ. ರಾಜ್ಯ ಸರ್ಕಾರದ ಪರವಾಗಿ ವಕೀಲ ಡಿ.ಎಲ್. ಚಿದಾನಂದ ವಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.