ನವದೆಹಲಿ: ಉಚ್ಚಾಟಿತ ಶಾಸಕ ಬಸನಗೌಡ ಆರ್ ಪಾಟೀಲ ಯತ್ನಾಳ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಕ್ಕರೆ ಸಚಿವ ಶಿವಾನಂದ ಎಸ್. ಪಾಟೀಲ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.
‘ನ್ಯಾಯಾಲಯದ ಹೊರಗೆ ನಿಮ್ಮ ರಾಜಕೀಯ ಹೋರಾಟಗಳನ್ನು ನಡೆಸಿ. ಇಲ್ಲಿ ಅಲ್ಲ ಎಂದು ಹಲವಾರು ಸಲ ಹೇಳಿದ್ದೇನೆʼ ಎಂದು ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ವಿಚಾರಣೆಯ ಸಂದರ್ಭದಲ್ಲಿ ಹೇಳಿದರು.
ಆಗ ಶಿವಾನಂದ ಪಾಟೀಲ ಪರ ವಕೀಲರು, ʼಕಕ್ಷಿದಾರರು ಸಂಪುಟ ದರ್ಜೆಯ ಸಚಿವರುʼ ಎಂದು ಗಮನ ಸೆಳೆದರು. ಆಗ ಸಿಜೆಐ, ‘ಹಾಗಿದ್ದರೆ ಏನು? ₹̄25 ಸಾವಿರ ದಂಡದೊಂದಿಗೆ ಅರ್ಜಿ ವಜಾಗೊಳಿಸಲಾಗಿದೆ’ ಎಂದು ಪ್ರಕಟಿಸಿದರು. ಸಚಿವರ ಪರ ವಕೀಲರು, ‘ಆದರೆ, ವಿಷಯ ಏನೆಂದರೆ’ ಎಂದರು. ‘ಸರಿ. ₹1 ಲಕ್ಷ. ನೀವು ಮಂತ್ರಿ ಎಂಬುದನ್ನು ಮರೆತಿದ್ದೇನೆ’ ಎಂದು ಸಿಜೆಐ ಛೇಡಿಸಿದರು. ವಕೀಲರು ಮತ್ತೆ ಮನವಿ ಮಾಡಲು ಮುಂದಾದರು. ಆಗ ಸಿಜೆಐ, ‘ಸರಿ ₹1 ಕೋಟಿ’ ಎಂದರು. ವಕೀಲರು ಮೈಲಾರ್ಡ್ ಎಂದಷ್ಟೇ ಹೇಳಿದರು. ₹10 ಕೋಟಿ ದಂಡ ಎಂದು ಗವಾಯಿ ಹೇಳಿದರು. ಆಗ ಸಚಿವರ ಪರ ವಕೀಲರು, ‘ಅರ್ಜಿ ಹಿಂಪಡೆಯುತ್ತೇನೆ’ ಎಂದರು. ಪೀಠವು ನಂತರ ದಂಡ ಮನ್ನಾ ಮಾಡಿ ಮೇಲ್ಮನವಿ ಹಿಂಪಡೆಯಲು ಅನುಮತಿ ನೀಡಿತು.
ಯತ್ನಾಳ ವಿರುದ್ಧದ ಮೊಕದ್ದಮೆಯನ್ನು ಹೈಕೋರ್ಟ್ 2024ರ ಸೆಪ್ಟೆಂಬರ್ 28ರಂದು ರದ್ದುಗೊಳಿಸಿತ್ತು. ಭಾರತೀಯ ನ್ಯಾಯ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್) ಅಡಿಯಲ್ಲಿ ಕಾರ್ಯವಿಧಾನ ಅನುಸರಿಸದ ಕಾರಣ ಮಾನನಷ್ಟ ಮೊಕದ್ದಮೆ ರದ್ದುಗೊಳಿಸಲಾಗಿದೆ ಎಂದು ಹೇಳಿತ್ತು.
2023ರ ವಿಧಾನಸಭಾ ಚುನಾವಣೆಗೆ ಮುನ್ನ ನಡೆದ ಸಮಾವೇಶದಲ್ಲಿ ಯತ್ನಾಳ ಮಾನಹಾನಿಕರ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಶಿವಾನಂದ ಪಾಟೀಲ ಮೊಕದ್ದಮೆ ಹೂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.