ಸಿದ್ದರಾಮಯ್ಯ , ಮುಖ್ಯಮಂತ್ರಿ
ನವದೆಹಲಿ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನಗಳ ಅಕ್ರಮ ಹಂಚಿಕೆ ಆರೋಪದ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಮತ್ತು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರಿಗೆ ನೀಡಲಾದ ಸಮನ್ಸ್ ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಸಲ್ಲಿಸಿದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.
ರಾಜಕೀಯ ಸೂಕ್ಷ್ಮ ಪ್ರಕರಣಗಳಲ್ಲಿ, ಕೇಂದ್ರ ತನಿಖಾ ಸಂಸ್ಥೆಯಾದ ಇ.ಡಿಯ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನವನ್ನೂ ಸುಪ್ರೀಂಕೋರ್ಟ್ ವ್ಯಕ್ತಪಡಿಸಿದೆ. ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರಿದ್ದ ಪೀಠವು, ‘ನ್ಯಾಯಾಲಯದ ಹೊರಗೆ ರಾಜಕೀಯ ಹೋರಾಟಗಳನ್ನು ನಡೆಸಬೇಕು. ಅದು ಬಿಟ್ಟು ಇಂತಹ ಹೋರಾಟಗಳಲ್ಲಿ ಇ.ಡಿಯನ್ನು ಏಕೆ ಬಳಸಲಾಗುತ್ತಿದೆ’ ಎಂದು ಕಟುವಾಗಿ ಪ್ರಶ್ನಿಸಿದೆ.
ನ್ಯಾಯಪೀಠದ ಆಕ್ಷೇಪಗಳಿಗೆ ಪ್ರತಿಕ್ರಿಯಿಸಿದ ಇ.ಡಿ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು, ಮೇಲ್ಮನವಿ ವಾಪಸ್ ಪಡೆಯುವುದಾಗಿ ಹೇಳಿದರು. ನಂತರ ನ್ಯಾಯಪೀಠವು ಅರ್ಜಿ ತಿರಸ್ಕರಿಸಿತು.
‘ಹೈಕೋರ್ಟ್ ಏಕಸದಸ್ಯ ನ್ಯಾಯಪೀಠದ ಆದೇಶದಲ್ಲಿ ನಮಗೆ ಯಾವುದೇ ದೋಷ ಕಂಡುಬಂದಿಲ್ಲ. ಕೆಲವು ಕಠಿಣ ಶಬ್ದಗಳ ಬಳಕೆಯನ್ನು ಉಳಿಸಿದ್ದಕ್ಕಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಅವರಿಗೆ ಧನ್ಯವಾದ ಹೇಳಬೇಕು’ ಎಂದು ಪೀಠ ಹೇಳಿತು.
‘ಇ.ಡಿ ನಮಗೆ ಸಮನ್ಸ್ ನೀಡಿರುವುದನ್ನು ಹಾಗೂ ಇಸಿಐಆರ್ (ಎನ್‌ಫೋರ್ಸ್‌ಮೆಂಟ್ ಕೇಸ್ ಇನ್‌ಫಾರ್ಮೇಶನ್ ರಿಪೋರ್ಟ್) ದಾಖಲಿಸಿರುವುದನ್ನು ರದ್ದುಗೊಳಿಸಬೇಕು’ ಎಂದು ಕೋರಿ ಪಾರ್ವತಿ ಮತ್ತು ಸುರೇಶ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್, ಕಳೆದ ಮಾರ್ಚ್ ತಿಂಗಳಲ್ಲಿ ಸಮನ್ಸ್ ರದ್ದುಗೊಳಿಸಿತ್ತು.
‘ ಮುಡಾದ 14 ನಿವೇಶನಗಳನ್ನು ಪಾರ್ವತಿ ಅವರು 2024ರ ಅಕ್ಟೋಬರ್ 1ರಂದೇ ಹಿಂತಿರುಗಿಸಿದ್ದಾರೆ. ಅವರು ನಿವೇಶನಗಳಿಂದ ಪ್ರಯೋಜನ ಪಡೆಯುತ್ತಿಲ್ಲ. ಇದು ಇ.ಡಿ ತನಿಖಾ ವ್ಯಾಪ್ತಿಯಲ್ಲಿ ಇಲ್ಲ. ಅಪರಾಧದಿಂದ ಗಳಿಸಿದ ಸಂಪತ್ತಿದ್ದರೆ ಮಾತ್ರ ಇ.ಡಿ ತನಿಖೆ ನಡೆಸಬಹುದು. ಆದರೆ, ನಿವೇಶನಗಳನ್ನು ಮರಳಿಸಿದ ನಂತರ ಇ.ಡಿ ತನಿಖೆ ಆರಂಭಿಸಿದೆ’ ಎಂದು ಪಾರ್ವತಿಯವರ ಪರ ವಕೀಲರು ಪ್ರತಿಪಾದಿಸಿದ್ದರು.
‘ಲೋಕಾಯುಕ್ತ ಪೊಲೀಸರ ತನಿಖಾ ವ್ಯಾಪ್ತಿಯಲ್ಲಿ ಇ.ಡಿ ಪ್ರವೇಶಿಸಿದೆ. ಈಗಾಗಲೇ, ಲೋಕಾಯುಕ್ತ ಪೊಲೀಸರು ತನಿಖೆಯಲ್ಲಿ ಯಾವುದೇ ಅಕ್ರಮ ಕಂಡು ಬಂದಿಲ್ಲ ಎಂದು ‘ಬಿ’ ರಿಪೋರ್ಟ್ ಸಲ್ಲಿಸಿದ್ದಾರೆ. ಆದ್ದರಿಂದ, ಇ.ಡಿ ದಾಖಲಿಸಿರುವ ಪ್ರಕರಣ ರದ್ದುಗೊಳಿಸಬೇಕು’ ಎಂದು ಕೋರಿದ್ದರು.
‘ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರಿಗೆ 14 ನಿವೇಶನ ಹಂಚಿಕೆ ಮಾಡಿರುವಲ್ಲಿ ಯಾವುದೇ ಅಪರಾಧ ಅಥವಾ ಅಕ್ರಮ ಗಳಿಕೆಗೆ ಕಾರಣವಾದ ಅಂಶಗಳಿಲ್ಲ. ಸುರೇಶ್ ಅವರು 2023ರ ಜೂನ್‌ನಲ್ಲಿ ನಗರಾಭಿವೃದ್ಧಿ ಮಂತ್ರಿಯಾಗಿದ್ದಾರೆ. ಈ ಅಪರಾಧ ಆರೋಪದಲ್ಲಿ ಅವರು ಭಾಗಿಯಾಗಿಲ್ಲ. ಅಷ್ಟಕ್ಕೂ ಮುಡಾ ಮಾಜಿ ಆಯುಕ್ತ ಡಿ.ಬಿ.ನಟೇಶ್ ಅವರಿಗೆ ಇ.ಡಿ ಜಾರಿ ಮಾಡಿದ್ದ ಸಮನ್ಸ್ ಅನ್ನು ಬೇರೊಂದು ಪ್ರಕರಣದಲ್ಲಿ ಇದೇ ಹೈಕೋರ್ಟ್‌ನ ಏಕಸದಸ್ಯ ನ್ಯಾಯಪೀಠ ಈಗಾಗಲೇ ವಜಾ ಮಾಡಿದೆ’ ಎಂಬ ಅಂಶವನ್ನು ಬೈರತಿ ಪರ ವಕೀಲರು ನ್ಯಾಯಪೀಠದ ಗಮನಕ್ಕೆ ತಂದಿದ್ದರು.
ದುರದೃಷ್ಟವಶಾತ್, ಮಹಾರಾಷ್ಟ್ರದಲ್ಲಿ ಈ ರೀತಿಯ ಪ್ರಕರಣಗಳ ಬಗ್ಗೆ ನನಗೆ ಸ್ವಲ್ಪ ಅನುಭವ ಇದೆ. ದಯವಿಟ್ಟು ನಮ್ಮನ್ನು ಏನಾದರೂ ಹೇಳಲು ಒತ್ತಾಯಿಸಬೇಡಿ. ಇಲ್ಲದಿದ್ದರೆ ನಾವು ಜಾರಿ ನಿರ್ದೇಶನಾಲಯದ ಬಗ್ಗೆ ತುಂಬಾ ಕಟುವಾದ ಟೀಕೆಗಳನ್ನು ಮಾಡಬೇಕಾಗುತ್ತದೆ. ಮತದಾರರ ನಡುವೆ ರಾಜಕೀಯ ಹೋರಾಟಗಳು ನಡೆಯಲಿ. ಅದಕ್ಕಾಗಿ ನಿಮ್ಮನ್ನು ಏಕೆ ಬಳಸಲಾಗುತ್ತಿದೆ?ಬಿ.ಆರ್. ಗವಾಯಿ, ಮುಖ್ಯ ನ್ಯಾಯಮೂರ್ತಿ
ಸರಿ, ಮೇಲ್ಮನವಿಯಿಂದ ನಾವು ಹಿಂದೆ ಸರಿಯುತ್ತೇವೆ. ಆದರೆ, ಅದನ್ನು ಪೂರ್ವನಿದರ್ಶನವೆಂದು ಪರಿಗಣಿಸಬೇಡಿಎಸ್.ವಿ. ರಾಜು, ಹೆಚ್ಚುವರಿ ಸಾಲಿಸಿಟರ್ ಜನರಲ್
ಬೆಂಗಳೂರು: ‘ಮುಡಾ ವಿಚಾರದಲ್ಲಿ ಜಾರಿ ನಿರ್ದೇಶನಾಲಯದ ಕಣ್ಣು ತೆರೆಸುವಂತೆ ಸುಪ್ರೀಂ ಕೋರ್ಟ್ ಕ್ರಮ ಕೈಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಇನ್ನಾದರೂ ಎಚ್ಚೆತ್ತುಕೊಂಡು ಸಾಂವಿಧಾನಿಕ ಸಂಸ್ಥೆಗಳಿಗೆ ಇರಬೇಕಾಗಿರುವ ಸ್ವಾಯತ್ತತೆಯನ್ನು ಕೊಟ್ಟು ತಮ್ಮ ಪಾಪ ತೊಳೆದುಕೊಳ್ಳಲಿ’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
‘ಕಳೆದ 10-11 ವರ್ಷಗಳಿಂದ ಕೇಂದ್ರ ಸರ್ಕಾರ ಮತ್ತು ಬಿಜೆಪಿಯು ಐಟಿ, ಸಿಬಿಐ ಮತ್ತು ಇ.ಡಿಯ ದುರ್ಬಳಕೆ ಮೂಲಕ ಸಾಧಿಸುತ್ತಿರುವ ರಾಜಕೀಯ ದ್ವೇಷಕ್ಕೆ ಬಲಿಯಾದ ಎಲ್ಲರಿಗೂ ಈ ತೀರ್ಪು ಸಮಾಧಾನ ಉಂಟು ಮಾಡಿದೆ ಮತ್ತು ನ್ಯಾಯ ವ್ಯವಸ್ಥೆಯ ಮೇಲೆ ಭರವಸೆ ಮೂಡಿಸಿದೆ’ ಎಂದು ತಮ್ಮ ‘ಎಕ್ಸ್’ ಖಾತೆಯಲ್ಲಿ ಪ್ರತಿಪಾದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.