
ಸುಪ್ರೀಂ ಕೋರ್ಟ್
ನವದೆಹಲಿ: ಓಬಳಾಪುರಂ ಗಣಿ ಕಂಪನಿಯ (ಓಎಂಸಿ) ಗಣಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಗುತ್ತಿಗೆ ಪಡೆದ ಪ್ರದೇಶಗಳು ಮತ್ತು ಮೀಸಲು ಅರಣ್ಯ ಪ್ರದೇಶಗಳ ಗಡಿಗಳನ್ನು ಗುರುತಿಸಲು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸುಧಾಂಶು ಧುಲಿಯಾ ನೇತೃತ್ವದ ಸಮಿತಿಗೆ ಮತ್ತೆ ಆರು ವಾರಗಳ ಅವಕಾಶವನ್ನು ಸುಪ್ರೀಂ ಕೋರ್ಟ್ ಮಂಗಳವಾರ ನೀಡಿದೆ.
ಓಎಂಸಿ ಗಣಿ ಅಕ್ರಮ ಪ್ರಕರಣದಲ್ಲಿ ವಿವಿಧ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿ ಜಾಯ್‌ಮಲ್ಯ ಬಾಗ್ಚಿ ಅವರ ಪೀಠವು ಸಮಿತಿಯ ಮನವಿಯನ್ನು ಪರಿಗಣಿಸಿತು. ‘ಸಮಿತಿಯು ಈಗಾಗಲೇ ತನ್ನ ಕಾರ್ಯ ಆರಂಭಿಸಿದೆ. ಆದರೆ, ತನ್ನ ವರದಿಯನ್ನು ಅಂತಿಮಗೊಳಿಸಲು ಹೆಚ್ಚಿನ ಸಮಯ ಬೇಕಾಗುತ್ತದೆ‘ ಎಂದು ಮನವಿ ಸಲ್ಲಿಕೆಯಾಗಿತ್ತು.
ಸಮಿತಿಗೆ ನಿಯೋಜಿಸಲಾದ ಜವಾಬ್ದಾರಿಯ ಸ್ವರೂಪ ಪರಿಗಣಿಸಿ ತನ್ನ ವರದಿ ಸಲ್ಲಿಸಲು ಆರು ವಾರಗಳ ಸಮಯ ನೀಡಲು ಒಲವು ತೋರಿದ್ದೇವೆ ಎಂದು ಪೀಠ ಹೇಳಿತು.
ಆಂಧ್ರಪ್ರದೇಶ ಸರ್ಕಾರದ ಪರವಾಗಿ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ ಹಾಜರಾದರು. ಕರ್ನಾಟಕವನ್ನು ಹೆಚ್ಚುವರಿ ಅಡ್ವೊಕೇಟ್ ಜನರಲ್ ನಿಶಾಂತ್ ಪಾಟೀಲ್ ಪ್ರತಿನಿಧಿಸಿದರು.
ನ್ಯಾಯಮೂರ್ತಿ ಧುಲಿಯಾ ನೇತೃತ್ವದ ಸಮಿತಿಯನ್ನು 2025ರ ಸೆಪ್ಟೆಂಬರ್‌ನಲ್ಲಿ ರಚಿಸಿದ್ದ ಸುಪ್ರೀಂ ಕೋರ್ಟ್, ವರದಿ ಸಲ್ಲಿಕೆಗೆ ಮೂರು ತಿಂಗಳ ಕಾಲಾವಕಾಶ ನೀಡಿತ್ತು.
ಆಂಧ್ರಪ್ರದೇಶದಲ್ಲಿರುವ ಓಬಳಾಪುರಂ ಗಣಿ ಕಂಪನಿಯ ಗಣಿ ಗುತ್ತಿಗೆ ಪ್ರದೇಶಗಳನ್ನು ಖರೀದಿಸಿದ್ದ ರಾಜ್ಯದ ಆಗಿನ ಸಚಿವ ಜಿ. ಜನಾರ್ದನ ರೆಡ್ಡಿ ಕುಟುಂಬ, ಅಂತರ ರಾಜ್ಯ ಗಡಿ ಗುರುತುಗಳನ್ನೇ ಸ್ಫೋಟಿಸಿ, ರಾಜ್ಯದ ಭೂಪ್ರದೇಶವನ್ನು ಅತಿಕ್ರಮಿಸಿ ಅಕ್ರಮ ಗಣಿಗಾರಿಕೆ ನಡೆಸಿದ ಆರೋಪ 2007ರಲ್ಲಿ ಕೇಳಿಬಂದಿತ್ತು.
ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸಿದ್ದ ಹಿಂದಿನ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ ಅವರು ವರದಿ ಸಲ್ಲಿಸಿದ್ದರು. ಸುಪ್ರೀಂ ಕೋರ್ಟ್ ಆದೇಶದಂತೆ ತನಿಖೆ ನಡೆಸಿದ್ದ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ), ಅಕ್ರಮ ಗಣಿಗಾರಿಕೆಯಿಂದ ಅಂತರ ರಾಜ್ಯ ಗಡಿ ಗುರುತುಗಳು ನಾಶವಾಗಿರುವುದನ್ನು ದೃಢಪಡಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.