ADVERTISEMENT

ಅನರ್ಹ ಶಾಸಕರ ಪರ–ವಿರೋಧ ವಾದ; ‘ಹೆಡ್‌ ಮಾಸ್ಟರ್‌ರಂತೆ ನಡೆದುಕೊಂಡ ಸ್ಪೀಕರ್‌’

‘ಸುಪ್ರೀಂ’ನಲ್ಲಿ ಪರ–ವಿರೋಧ ವಾದ; ಇತರರನ್ನು ಹಿಂಬಾಲಿಸಲು ನಾವು ಕುರಿಗಳಲ್ಲ: ಅನರ್ಹ ಶಾಸಕರು

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2019, 6:42 IST
Last Updated 26 ಸೆಪ್ಟೆಂಬರ್ 2019, 6:42 IST
   

ನವದೆಹಲಿ: ‘ಅನ್ಯಾಯ ನಡೆಯುತ್ತಿ ದ್ದರೂ ದನಿ ಎತ್ತದೆ, ಇತರರನ್ನು ಹಿಂಬಾ ಲಿಸಲು ಕುರಿಗಳಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ತಕ್ಷಣ ಪಕ್ಷವನ್ನು ತೊರೆದರು ಎಂದು ಭಾವಿಸುವುದೂ ಸರಿಯಲ್ಲ’ ಎಂದು ಅನರ್ಹ ಶಾಸಕರ ಪರ ವಕೀಲರು ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.

ಶಾಸಕ ಸ್ಥಾನದಿಂದ ಅನರ್ಹಗೊಳಿ ಸಿರುವ ಸ್ಪೀಕರ್‌ ಆದೇಶ ಪ್ರಶ್ನಿಸಲಾದ ಮೇಲ್ಮನವಿಯ ಮುಂದುವರಿದ ವಿಚಾರಣೆ ವೇಳೆ ಬುಧವಾರ ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ್‌ ಪರ ಮಾತನಾಡಿದ ವಕೀಲ ಮುಕುಲ್‌ ರೋಹಟಗಿ, ಅಕ್ಟೋಬರ್‌ 21ರಂದು ನಿಗದಿಯಾಗಿರುವ ಉಪಚುನಾವಣೆ ಪ್ರಕ್ರಿಯೆಯನ್ನು ಪ್ರಕರಣ ಇತ್ಯರ್ಥ ಆಗುವವರೆಗೆ ರದ್ದುಪಡಿಸಬೇಕು. ಇಲ್ಲವೇ ಅನರ್ಹರ ಸ್ಪರ್ಧೆಗೆ ಅವಕಾಶ ನೀಡಬೇಕು ಎಂದು ಕೋರಿದರು.

ಶಾಸಕರು ರಾಜೀನಾಮೆ ನೀಡಿ ದರೂ ಅಂಗೀಕರಿಸದ ಸ್ಪೀಕರ್, ಹೆಡ್‌ ಮಾಸ್ಟರ್‌ ರೀತಿ ವರ್ತಿಸಿದ್ದಾರೆ. ಮುಂಬೈಗೆ ತೆರಳಿದ್ದಾರೆ, ಏನೇನೋ ಮಾಡಿದ್ದಾರೆ ಎಂದೆಲ್ಲ ದೂರಿದ್ದಾರೆ. ಅವರು ಸದನದಲ್ಲಿ ಮಾತ್ರ ಶಾಸಕರ ಮೇಲೆ ನಿಗಾ ಇರಿಸಬೇಕು. ಆದರೆ, ಅವರು ರಾಜಕೀಯ ಪಕ್ಷದ ರಕ್ಷಕರಂತೆ ವರ್ತಿಸಿದ್ದಾರೆ ಎಂದು ದೂರಿದರು.

ADVERTISEMENT

‘ಇತರರ ಪ್ರಭಾವಕ್ಕೆ ಒಳಗಾಗಿ ರಾಜೀನಾಮೆ ಸಲ್ಲಿಸಲಾಗಿದೆ ಎಂದು ದೂರುತ್ತ ಅನರ್ಹಗೊಳಿಸಿದರೆ ಹೇಗೆ’ ಎಂದು ಅವರು ಪ್ರಶ್ನಿಸಿದ ಅವರು, ವಾಸ್ತವದಲ್ಲಿ 17 ಜನ ಶಾಸಕರು ಪರಿಸ್ಥಿತಿಗೆ ಅನುಗುಣವಾಗಿ ರಾಜೀನಾಮೆ ಸಲ್ಲಿಸಿದ್ದಾರೆ ಎಂದರು.

ವಿಚಾರಣೆ ವೇಳೆ ಅನರ್ಹರ ಪರ ಮುಕುಲ್‌ ರೋಹಟ್ಗಿ, ವಿ.ಗಿರಿ, ಸಿ.ಎ. ಸುಂದರಂ, ಕೆ.ವಿ. ವಿಶ್ವನಾಥನ್‌, ಸಜ್ಜನ್‌ ಪೂವಯ್ಯ ವಾದ ಮಂಡಿಸಿದರೆ, ಸ್ಪೀಕರ್‌ ಪರ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಹಾಗೂ ಕಾಂಗ್ರೆಸ್‌ ಪರ ದೇವದತ್ತ ಕಾಮತ್‌ ಮಾತನಾಡಿದರು.

ಗುರುವಾರ ವಿಚಾರಣೆ ಮುಂದು ವರಿಯಲಿದ್ದು, ಕಾಂಗ್ರೆಸ್‌ ಪರ ಕಪಿಲ್‌ ಸಿಬಲ್‌ ವಾದ ಮಂಡಿಸಲಿದ್ದಾರೆ.

ರಾಜೀನಾಮೆ ನಂತರ ಅನರ್ಹತೆ ಅಸಾಧ್ಯ

ನವದೆಹಲಿ: ‘ಪಕ್ಷ ತ್ಯಜಿಸಿದವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬಹುದು. ಆದರೆ, ರಾಜೀನಾಮೆ ನೀಡಿದವರನ್ನು ಅನರ್ಹಗೊಳಿಸಲು ಅಸಾಧ್ಯ’ ಎಂದು ಸ್ಪೀಕರ್‌ ಪರ ವಕೀಲ ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.

ಬುಧವಾರ ನಡೆದ ಅನರ್ಹ ಶಾಸಕರ ಮೇಲ್ಮನವಿಯ ವಿಚಾರಣೆ ವೇಳೆ ಸ್ಪೀಕರ್ ಪರ ಮಾತನಾಡಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ರಾಜೀನಾಮೆ ನೀಡಿದವರನ್ನು ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಅನರ್ಹಗೊಳಿಸಲಾಗದು ಎಂದರು.

ಶಾಸಕ ಸ್ಥಾನ ತ್ಯಜಿಸಿದವರನ್ನು ಅನರ್ಹಗೊಳಿಸುವ ಪದ್ಧತಿ ಇಲ್ಲ. ಶಾಸಕನಾಗಿದ್ದೂ ಪಕ್ಷ ತ್ಯಜಿಸಲು ಮುಂದಾದಲ್ಲಿ ಅನರ್ಹಗೊಳಿಸಬಹುದು ಎಂದು ಅವರು ಒತ್ತಿ ಹೇಳಿದರು.

ಸ್ಪೀಕರ್ ಪರ ತುಷಾರ್‌ ಮೆಹ್ತಾ ವಾದ...

* ಶಾಸಕರು ಪಕ್ಷಗಳ ನಿಯಮಗಳಿಗೆ ಬದ್ಧರಾಗಿರಬೇಕು
* ಪಕ್ಷ ತೊರೆದಲ್ಲಿ ರಾಜೀನಾಮೆ ನೀಡಿ ಚುನಾವಣೆ ಎದುರಿಸಬೇಕು
* ಸ್ಪೀಕರ್‌ ಅಧಿಕಾರದ ಬಗ್ಗೆ ವಿಸ್ತೃತ ವಿಚಾರಣೆಯ ಅಗತ್ಯವಿದೆ
* ಏಕಕಾಲಕ್ಕೆ ರಾಜೀನಾಮೆ, ಅನರ್ಹತೆ ಪ್ರಶ್ನೆ–ಸ್ಪೀಕರ್‌ಗೆ ಸವಾಲು

ಅನರ್ಹರ ಪರ ಮುಕುಲ್‌ ರೋಹಟ್ಗಿ ವಾದ...

* ರಾಜೀನಾಮೆ ನೀಡಿದರೂ ಇಲ್ಲಸಲ್ಲದ ಕಾರಣ ನೀಡಿದ ಸ್ಪೀಕರ್‌
* ಕೋರ್ಟ್ ಸೂಚನೆ ಮೇರೆಗೆ ಕಲಾಪಕ್ಕೆ ಹಾಜರಾಗದ ಶಾಸಕರು
* ಯಾರೂ ಶಾಸಕರನ್ನು ರಾಜೀನಾಮೆಗೆ ಪ್ರೇರೇಪಿಸಿಲ್ಲ, ಬೆದರಿಸಿಲ್ಲ
* ರಾಜೀನಾಮೆ ಆಯಾ ಸದಸ್ಯನ ವಿವೇಚನೆಗೆ ಬಿಟ್ಟ ವಿಚಾರ
* ಪಕ್ಷದ ಬೆಳವಣಿಗೆಗೆ ಬೇಸತ್ತು ಬೇರೆ ಪಕ್ಷ ಸೇರಬಹುದು
* ನಿಯಮ ಉಲ್ಲಂಘಿಸಿ ಸ್ಪೀಕರ್‌ ಅನರ್ಹತೆಯ ಆದೇಶ
* ರಾಜೀನಾಮೆ ತಿರಸ್ಕರಿಸಿದ್ದಕ್ಕೆ ಸೂಕ್ತ ಕಾರಣ ನೀಡದ ಸ್ಪೀಕರ್‌
* ಅನರ್ಹತೆಯ ಹಣೆಪಟ್ಟಿ ಹೊತ್ತು ಸ್ಪರ್ಧಿಸುವುದು ಅಸಾಧ್ಯ
* ಜಾಧವ್ ರಾಜೀನಾಮೆ ಸ್ವೀಕರಿಸಿ ಇತರರ ಅನರ್ಹತೆ
* ಸರ್ಕಾರದ ಅಳಿವು–ಉಳಿವು ಸ್ಪೀಕರ್‌ಗೆ ಸಂಬಂಧಿಸಿದ್ದಲ್ಲ
* ನಾಗೇಂದ್ರ, ಜಾಧವ್ ಬಗ್ಗೆ ಸ್ಪೀಕರ್‌ ಭಿನ್ನ ಧೋರಣೆ
* ಅನರ್ಹರು ಸ್ಪರ್ಧೆಗೆ ಚುನಾವಣಾ ಆಯೋಗದ ಸಮ್ಮತಿ

ಸುಧಾಕರ್‌ ಪರ ಸಿ.ಎ. ಸುಂದರಂ ವಾದ...

* ಪಕ್ಷ ವಿರೋಧಿ ಚಟುವಟಿಕೆ ನಡೆಸಿದರೆ ಕ್ರಮಕ್ಕೆ ಅವಕಾಶ
* ಪಕ್ಷದಲ್ಲಿದ್ದರೂ ಅನರ್ಹತೆಯ ಶಿಕ್ಷೆ ವಿಧಿಸಿರುವ ಸ್ಪೀಕರ್‌
* ರಾಜೀನಾಮೆ ಸಲ್ಲಿಸಿದವರು ಕಳಂಕಿತರು ಎಂಬ ಅರ್ಥವಲ್ಲ
* ಅನರ್ಹತೆ ನಿರ್ಧಾರ ಬೆಂಬಲಿಸದ ಸ್ಪೀಕರ್ ಪರ ವಕೀಲರು
* ಶಾಸಕರ ಹಕ್ಕನ್ನು ಕಸಿದುಕೊಳ್ಳಲು ಅಧಿಕಾರ ಸ್ಪೀಕರ್‌ಗಿಲ್ಲ
* ಸ್ಪೀಕರ್‌ ಕೈಗೊಂಡ ಅನರ್ಹತೆ ನಿರ್ಧಾರ ಎತ್ತಿ ಹಿಡಿಯಬಾರದು
* ತೀರ್ಪು ಪ್ರಕಟಣೆವರೆಗೆ ಚುನಾವಣೆ ಮುಂದೂಡಬೇಕು

ಶ್ರೀಮಂತ ಪಾಟೀಲ್‌, ಶಂಕರ್‌ ಪರ ವಿ.ಗಿರಿ ವಾದ...

* ರಾಜೀನಾಮೆ ನೀಡದಿದ್ದರೂ ಅನರ್ಹತೆಯ ಕ್ರಮ
* ಶಂಕರ್ ಅವರ ಪಕ್ಷ ಮೈತ್ರಿ ಸರ್ಕಾರದ ಭಾಗ ಆಗಿರಲಿಲ್ಲ
* ವಿಲೀನ ಪ್ರಕ್ರಿಯೆಗೆ ಒಪ್ಪದೆ ಸ್ಪಷ್ಟನೆ ಕೋರಿದ್ದ ಸ್ಪೀಕರ್‌
* ಕಾಂಗ್ರೆಸ್‌ ಜೊತೆ ಪೂರ್ಣಗೊಳ್ಳದ ವಿಲೀನ ಪ್ರಕ್ರಿಯೆ
* ಆದರೂ ಕಾಂಗ್ರೆಸ್ ಶಾಸಕನೆಂದು ಅನರ್ಹಗೊಳಿಸಿ ಆದೇಶ
* ಲಿಖಿತ ಸ್ಪಷ್ಟನೆ ನೀಡುವಂತೆ ಕಾಂಗ್ರೆಸ್‌ಗೆ ಸೂಚನೆ
* ವಿಲೀನದ ಆದೇಶ ನೀಡಲಾಗಿಲ್ಲ–ಸ್ಪೀಕರ್‌ ಪರ ವಕೀಲ
* ಅನಾರೋಗ್ಯದಿಂದ ಕಲಾಪಕ್ಕೆ ಗೈರಾದ ಶ್ರೀಮಂತ ಪಾಟೀಲ
* ವೈದ್ಯರ ಸಲಹೆಯ ಮೇರೆಗೆ ಮುಂಬೈ ಆಸ್ಪತ್ರೆಯಲ್ಲಿ ಚಿಕಿತ್ಸೆ

ಆನಂದ್ ಸಿಂಗ್ ಪರ ಸಜ್ಜನ್ ಪೂವಯ್ಯ...

* ಮುಂಬೈಗೆ ಹೋದವರಿಗೂ ಆನಂದ್ ಸಿಂಗ್‌ಗೂ ಸಂಬಂಧ ಇಲ್ಲ
* ಸರ್ಕಾರದದ ಆದೇಶ ವಿರೋಧಿಸಿ ರಾಜೀನಾಮೆ ಸಲ್ಲಿಕೆ
* ಜಿಂದಾಲ್‌ಗೆ ಭೂಮಿ ನೀಡಿದ್ದನ್ನು ಪ್ರಶ್ನಿಸಿದ್ದಕ್ಕೆ ಅನರ್ಹತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.