ADVERTISEMENT

ಅರಮನೆ ಮೈದಾನಕ್ಕೆ ಟಿಡಿಆರ್: ತೀರ್ಪು ಕಾಯ್ದಿರಿಸಿದ ಸುಪ್ರೀಂ

​ಪ್ರಜಾವಾಣಿ ವಾರ್ತೆ
Published 1 ಮೇ 2025, 16:33 IST
Last Updated 1 ಮೇ 2025, 16:33 IST
<div class="paragraphs"><p>ಸುಪ್ರೀಂ ಕೋರ್ಟ್</p></div>

ಸುಪ್ರೀಂ ಕೋರ್ಟ್

   

ನವದೆಹಲಿ: ಬೆಂಗಳೂರಿನ ಬಳ್ಳಾರಿ ರಸ್ತೆ ಮತ್ತು ಜಯಮಹಲ್ ರಸ್ತೆಗಳ ವಿಸ್ತರಣೆಗಾಗಿ ಸ್ವಾಧೀನಪಡಿಸಿಕೊಂಡಿರುವ ಅರಮನೆ ಮೈದಾನದ 15 ಎಕರೆಗೂ ಹೆಚ್ಚು ಭೂಮಿಗೆ ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕು (ಟಿಡಿಆರ್) ನೀಡುವ ಪ್ರಕರಣದ ತೀರ್ಪನ್ನು ಸುಪ್ರೀಂ ಕೋರ್ಟ್‌ ಗುರುವಾರ ಕಾಯ್ದಿರಿಸಿದೆ. 

ನ್ಯಾಯಮೂರ್ತಿಗಳಾದ ಎಂ.ಎಂ.ಸುಂದರೇಶ್‌ ಮತ್ತು ಅರವಿಂದ್ ಕುಮಾರ್ ಅವರ ಪೀಠವು ಒಂದು ವಾರದೊಳಗೆ ಟಿಡಿಆರ್ ಠೇವಣಿ ಇಡಬೇಕು ಎಂದು ಈ ಹಿಂದೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ₹3400 ಕೋಟಿಯ ಟಿಡಿಆರ್ ಅನ್ನು ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯ ಸರ್ಕಾರ ಠೇವಣಿ ಇಟ್ಟಿತ್ತು. ಈ ಟಿಡಿಆರ್‌ಗಳನ್ನು ರಾಜವಂಶಸ್ಥರಿಗೆ ಹಸ್ತಾಂತರ ಮಾಡಬಾರದು ಎಂದು ರಾಜ್ಯ ಸರ್ಕಾರವು ಮಧ್ಯಂತರ ಅರ್ಜಿಯಲ್ಲಿ ಮನವಿ ಮಾಡಿತ್ತು. 

ADVERTISEMENT

ಅರಮನೆ ಮೈದಾನ ಒಟ್ಟು 472 ಎಕರೆ 16 ಗುಂಟೆ ಜಾಗ ಹೊಂದಿದೆ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಕಾನೂನುಬದ್ಧ ಉತ್ತರಾಧಿಕಾರಿ ಮತ್ತು ಇತರರು ಸಲ್ಲಿಸಿದ ನ್ಯಾಯಾಂಗ ನಿಂದನೆ ಅರ್ಜಿಗಳು ಮತ್ತು ಇತರ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಡಿಸೆಂಬರ್‌ನಲ್ಲಿ ಆದೇಶ ಹೊರಡಿಸಿತ್ತು. ಆ ಆದೇಶದ ಪ್ರಕಾರ ಕರ್ನಾಟಕ ಸ್ಟಾಂಪ್‌ ಕಾಯ್ದೆಯ ಸೆಕ್ಷನ್‌ 45 ಬಿ ಗೆ ಅನುಗುಣವಾಗಿ ಅರಮನೆ ಮೈದಾನಕ್ಕೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಚಾಲ್ತಿಯಲ್ಲಿರುವ ಮಾರ್ಗಸೂಚಿ ಮೌಲ್ಯಕ್ಕೆ ಅನುಗುಣವಾಗಿ ರಸ್ತೆ ವಿಸ್ತರಣೆ ಉದ್ದೇಶಕ್ಕಾಗಿ ಅರಮನೆ ಜಾಗವನ್ನು ಮೌಲ್ಯೀಕರಿಸಿ, ವರ್ಗಾವಣೆ ಮಾಡಬಹುದಾದ ಟಿಡಿಆರ್‌ ನೀಡುವಂತೆ ನಿರ್ದೇಶನ ನೀಡಿತ್ತು.

ರಸ್ತೆ ವಿಸ್ತರಣೆ ಉದ್ದೇಶಕ್ಕಾಗಿ ಬಳಕೆಯಾಗುವ 15.36 ಎಕರೆ ಭೂಮಿಗೆ ಪರಿಹಾರವಾಗಿ ₹3,014 ಟಿಡಿಆರ್‌ ಕೋಟಿ ನೀಡಬೇಕು ಎಂದು ಸುಪ್ರೀಂಕೋರ್ಟ್‌ ಡಿಸೆಂಬರ್‌ನಲ್ಲಿ ಆದೇಶ ನೀಡಿತ್ತು. ಸಣ್ಣ ಜಾಗಕ್ಕೆ ಭಾರಿ ಮೊತ್ತವನ್ನು ಪಾವತಿಸಬೇಕಾದ ಹೊರೆಯಿಂದ ತಪ್ಪಿಸಿಕೊಳ್ಳಲು ಸುಗ್ರೀವಾಜ್ಞೆಯ ಆಸರೆ ಪಡೆಯಲು ಸರ್ಕಾರ ತೀರ್ಮಾನಿಸಿತ್ತು.  ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಕಾಯ್ದೆ–1996 ಕ್ಕೆ ಸಂಬಂಧಪಟ್ಟ ಸಿವಿಲ್‌ ಮೇಲ್ಮನವಿಯನ್ನು ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು ಎಂದು ಸರ್ಕಾರವು ಮೇಲ್ಮನವಿ ಸಲ್ಲಿಸಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.