ADVERTISEMENT

ಅರಮನೆ ಮೈದಾನದ ಭೂಸ್ವಾಧೀನ: ₹3400 ಕೋಟಿ ಟಿಡಿಆರ್‌ ಬಳಕೆಗೆ SC ತಡೆ

‘ಸುಪ್ರೀಂ’ ದ್ವಿಸದಸ್ಯ ಪೀಠದ ತೀರ್ಪು ಅಮಾನತು l ರಾಜ್ಯ ಸರ್ಕಾರಕ್ಕೆ ನಿರಾಳ

​ಪ್ರಜಾವಾಣಿ ವಾರ್ತೆ
Published 29 ಮೇ 2025, 17:06 IST
Last Updated 29 ಮೇ 2025, 17:06 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಬೆಂಗಳೂರಿನ ಬಳ್ಳಾರಿ ರಸ್ತೆ ಮತ್ತು ಜಯಮಹಲ್ ರಸ್ತೆಗಳ ವಿಸ್ತರಣೆಗಾಗಿ ಸ್ವಾಧೀನಪಡಿಸಿಕೊಂಡಿರುವ ಅರಮನೆ ಮೈದಾನದ 15.36 ಎಕರೆಗೆ ₹3,400 ಕೋಟಿ ಮೌಲ್ಯದ ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕು (ಟಿಡಿಆರ್) ಪ್ರಮಾಣಪತ್ರಗಳನ್ನು ಮೈಸೂರಿನ ರಾಜವಂಶಸ್ಥರಿಗೆ ಹಸ್ತಾಂತರಿಸುವಂತೆ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠ ನೀಡಿದ್ದ ತೀರ್ಪನ್ನು ತ್ರಿಸದಸ್ಯ ಪೀಠ ಗುರುವಾರ ಅಮಾನತುಗೊಳಿಸಿದೆ. ಇದರಿಂದಾಗಿ, ರಾಜ್ಯ ಸರ್ಕಾರಕ್ಕೆ ನಿರಾಳವಾಗಿದೆ. 

ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ದೀಪಂಕರ್ ದತ್ತ ಮತ್ತು ಎನ್. ಕೋಟೀಶ್ವರ್ ಸಿಂಗ್ ಅವರ ಪೀಠವು ಎಲ್ಲ ಟಿಡಿಆರ್ ಪ್ರಮಾಣಪತ್ರಗಳನ್ನು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಿಯಲ್ಲಿ ಠೇವಣಿ ಇಡಬೇಕು. ಒಂದು ವೇಳೆ ಅದನ್ನು ಬಿಡುಗಡೆ ಮಾಡಿದ್ದರೆ ಯಾರೂ ಅದನ್ನು ಬಳಸುವಂತಿಲ್ಲ ಅಥವಾ ಯಾವುದೇ ಮೂರನೇ ವ್ಯಕ್ತಿ ಹಕ್ಕು ಪ್ರತಿಪಾದಿಸುವಂತಿಲ್ಲ ಎಂದು ಸೂಚಿಸಿದೆ. 

ಟಿಡಿಆರ್ ಪ್ರಮಾಣಪತ್ರಗಳ ಬಿಡುಗಡೆಗೆ ಸಂಬಂಧಿಸಿದಂತೆ ಮೇ 22ರಂದು ನೀಡಿದ್ದ ತೀರ್ಪಿನ ವಿರುದ್ಧ ರಾಜ್ಯ ಸರ್ಕಾರ ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿಯನ್ನು ಜುಲೈ 21ರಂದು ವಿಚಾರಣೆ ನಡೆಸಲಾಗುತ್ತದೆ ಎಂದು ಪೀಠ ಹೇಳಿದೆ. 

ADVERTISEMENT

‘ಒಂದು ವೇಳೆ ಮರುಪರಿಶೀಲನಾ ಅರ್ಜಿ ತಿರಸ್ಕರಿಸಿದರೆ, ಮಧ್ಯಂತರ ನಿರ್ದೇಶನಗಳು ಅಂತಹ ಆದೇಶ ಹೊರಡಿಸಿದ ದಿನಾಂಕದಿಂದ ನಾಲ್ಕು ವಾರಗಳವರೆಗೆ ಅಥವಾ ತ್ರಿಸದಸ್ಯ ಪೀಠವು ಅದನ್ನು ವಿಚಾರಣೆ ಮಾಡುವವರೆಗೆ ಜಾರಿಯಲ್ಲಿರಲಿವೆ’ ಎಂದು ಪೀಠ ಸ್ಪಷ್ಟಪಡಿಸಿದೆ. 

ಮುಖ್ಯ ಸಿವಿಲ್ ಮೇಲ್ಮನವಿಯ ವಿಚಾರಣೆಯನ್ನು ಆಗಸ್ಟ್‌ 18ರಂದು ನಡೆಸುವುದಾಗಿಯೂ ಪೀಠ ತಿಳಿಸಿದೆ. ನ್ಯಾಯಮೂರ್ತಿ ಸೂರ್ಯಕಾಂತ್‌ ನೇತೃತ್ವದ ಪೀಠವು ಈ ಅರ್ಜಿಯ ವಿಚಾರಣೆ ನಡೆಸಲಿದೆ. 

ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆಯಲ್ಲಿ ಸಂದರ್ಭದಲ್ಲಿ ಮೇ 22ರಂದು ನೀಡಿದ್ದ ತೀರ್ಪನ್ನು ಮಾರ್ಪಡಿಸುವಂತೆ ಕೋರಿ ಕರ್ನಾಟಕ ಸರ್ಕಾರದ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಅರ್ಜಿ ಸಲ್ಲಿಸಿದ್ದರು.

ಅವರ ವಾದ ಆಲಿಸಿದ ನಂತರ ಪೀಠವು ಈ ಆದೇಶ ನೀಡಿತು. ರಾಜ್ಯ ಸರ್ಕಾರದ ಪರವಾಗಿ ಅಡ್ವೊಕೇಟ್‌ ಜನರಲ್‌ ಕೆ. ಶಶಿಕಿರಣ್‌ ಶೆಟ್ಟಿ ಹಾಜರಿದ್ದರು.  

ರಾಜವಂಶಸ್ಥರ ಪರವಾಗಿ ಹಿರಿಯ ವಕೀಲರಾದ ಎ.ಕೆ. ಗಂಗೂಲಿ, ಗೋಪಾಲ್ ಶಂಕರನಾರಾಯಣನ್ ಮತ್ತು ಇತರರು ವಾದ ಮಂಡಿಸಿ, ‘ರಾಜ್ಯ ಸರ್ಕಾರ ಎತ್ತಿರುವ ವಾದಗಳನ್ನು ಹಲವಾರು ಬಾರಿ ಪರಿಗಣಿಸಲಾಗಿದೆ ಮತ್ತು ತಿರಸ್ಕರಿಸಲಾಗಿದೆ’ ಎಂದು ಪೀಠದ ಗಮನಕ್ಕೆ ತಂದರು. 

‘ರಾಜ್ಯ ಸರ್ಕಾರವು 2014ರ ಆದೇಶ ಮಾರ್ಪಡಿಸಲು ಪ್ರಯತ್ನಿಸಿತು ಮತ್ತು ಮೂರು ವಿಭಿನ್ನ ಪೀಠಗಳು ಅದನ್ನು ವಜಾಗೊಳಿಸಿವೆ. ಕೆಲವು ಕಾನೂನುಗಳು ಇರಬೇಕು’ ಎಂದು ಗಂಗೂಲಿ ಕೇಳಿದರು.

ದ್ವಿಸದಸ್ಯ ಪೀಠ ನೀಡಿದ್ದ ತೀರ್ಪಿನ ವಿರುದ್ಧ ಮತ್ತೊಂದು ಪೀಠಕ್ಕೆ ಮೇಲ್ಮನವಿ ಸಲ್ಲಿಸಲು ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ಶಂಕರನಾರಾಯಣನ್‌ ಹೇಳಿದರು. 

‘ಮಧ್ಯಂತರ ಕ್ರಮವಾಗಿ, ನ್ಯಾಯಾಂಗ ನಿಂದನೆ ವಿಚಾರಣೆಯಲ್ಲಿ ನೀಡಿರುವ ತೀರ್ಪಿನ ಅನುಸಾರ ನೀಡಲಾದ ಎಲ್ಲ ಟಿಡಿಆರ್‌ಗಳನ್ನು ಮುಂದಿನ ಆದೇಶದವರೆಗೆ ರಿಜಿಸ್ಟ್ರಿಯಲ್ಲೇ ಠೇವಣಿ ಇಡಬೇಕು’ ಎಂದು ಪೀಠ ಹೇಳಿದೆ.

ನ್ಯಾಯಾಲಯವು ಮೇ 22ರ ತೀರ್ಪು ಸೇರಿದಂತೆ ಹಿಂದಿನ ಆದೇಶಗಳಿಗೆ ತಡೆ ನೀಡಿದೆ. ‘2024ರ ಡಿಸೆಂಬರ್ 10, 2022ರ ಮೇ 17 ಹಾಗೂ 2024ರ ಮಾರ್ಚ್‌ 19ರ ಆದೇಶಗಳಿಗೂ ತಡೆ ನೀಡಲಾಗಿದೆ ಎಂದು ಪೀಠ ಸ್ಪಷ್ಟಪಡಿಸಿದೆ. 

ಈ ಮಧ್ಯಂತರ ಆದೇಶವು ಕಕ್ಷಿದಾರರ ಹಕ್ಕುಗಳಿಗೆ ಯಾವುದೇ ಹಾನಿ ಮಾಡುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.