ADVERTISEMENT

ಬೊಕ್ಕಸದ ಹೊರೆ ತಗ್ಗಿಸಿದ ಸುಪ್ರೀಂ ಕೋರ್ಟ್ ತೀರ್ಪು

ಮೇಲ್ಮನವಿ ವಿಳಂಬ– ಉದಾರತೆ ತೋರಲು ಸುಪ್ರೀಂ ನಿರ್ದೇಶನ *ರಾಜ್ಯ ಸರ್ಕಾರಕ್ಕೆ ನಿರಾಳ

ಮಂಜುನಾಥ್ ಹೆಬ್ಬಾರ್‌
Published 11 ಫೆಬ್ರುವರಿ 2026, 0:30 IST
Last Updated 11 ಫೆಬ್ರುವರಿ 2026, 0:30 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ‘ಭೂಸ್ವಾಧೀನಕ್ಕಾಗಿ ನೀಡಲಾದ ಪರಿಹಾರದ ವಿರುದ್ಧ ಸಲ್ಲಿಕೆಯಾಗಿರುವ ಮೇಲ್ಮನವಿಗಳು ಲಿಮಿಟೇಷನ್‌ (ಮಿತಿ) ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ. ಇಂತಹ ಪ್ರಕರಣಗಳಲ್ಲಿ ಮೇಲ್ಮನವಿ ಸಲ್ಲಿಸುವುದು ವಿಳಂಬವಾದಲ್ಲಿ ಹೈಕೋರ್ಟ್‌ಗಳು ಅದನ್ನು ಕ್ಷಮಿಸಬಹುದು‘ ಎಂದು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

 ತೀರ್ಪಿನಿಂದಾಗಿ, ಕರ್ನಾಟಕ ಸರ್ಕಾರಕ್ಕೆ ₹60 ಸಾವಿರ ಕೋಟಿಯಷ್ಟು ಭೂ ಪರಿಹಾರದ ಹೊರೆ ತಗ್ಗಿದಂತಾಗಿದೆ. 2013ರ ಭೂಸ್ವಾಧೀನ ಕಾಯ್ದೆಯ ಸೆಕ್ಷನ್ 74 ಮತ್ತು 1963ರ ಮಿತಿ ಕಾಯ್ದೆಯ ನಿಯಮಗಳ ನಡುವಿನ ಸಂಕೀರ್ಣ ಕಾನೂನಾತ್ಮಕ ಪ್ರಶ್ನೆಗೆ ನ್ಯಾಯಮೂರ್ತಿಗಳಾದ ಎಂ.ಎಂ.ಸುಂದರೇಶ್ ಮತ್ತು ಸತೀಶ್ ಚಂದ್ರ ಶರ್ಮಾ ಅವರಿದ್ದ ನ್ಯಾಯಪೀಠ ಉತ್ತರ ನೀಡಿದೆ. 

2013ರ ಕಾಯ್ದೆಯ ಸೆಕ್ಷನ್ 74 ರ ಅಡಿಯಲ್ಲಿ ನಿಗದಿಪಡಿಸಿದ 120 ದಿನಗಳ ಮಿತಿಯನ್ನು ಮೀರಿದ ಪ್ರಕರಣಗಳನ್ನು ಮಿತಿ ಕಾಯ್ದೆಯ ಸೆಕ್ಷನ್ 5 ರ ಮೂಲಕ ಕ್ಷಮಿಸಬಹುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. 2013ರ ಕಾಯ್ದೆಯ ಸೆಕ್ಷನ್‌ 74ರ ಪ್ರಕಾರ, ಮೇಲ್ಮನವಿ ಸಲ್ಲಿಸಲು ಮಿತಿ ಅವಧಿ 60 ದಿನಗಳಾಗಿದ್ದು, ಇದನ್ನು ಮತ್ತೆ 60 ದಿನಗಳವರೆಗೆ ವಿಸ್ತರಿಸಲು ಅವಕಾಶ ಇದೆ.

ADVERTISEMENT

ಭೂಸ್ವಾಧೀನ ಪ್ರಕರಣಗಳಲ್ಲಿ ವಿಳಂಬ ಅರ್ಜಿಗಳನ್ನು ಪರಿಗಣಿಸುವಾಗ, ಹೈಕೋರ್ಟ್‌ಗಳು ಉದಾರ ಮತ್ತು ಪ್ರಾಯೋಗಿಕ ದೃಷ್ಟಿಕೋನ ಅಳವಡಿಸಿಕೊಳ್ಳಬೇಕು ಎಂದು ನ್ಯಾಯಪೀಠ ನಿರ್ದೇಶಿಸಿದೆ.

ಅನೇಕ ಪ್ರಕರಣಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆಯನ್ನು 1894ರ ಭೂ ಸ್ವಾಧೀನ ಕಾಯ್ದೆಯಡಿ  ಆರಂಭಿಸಲಾಗಿತ್ತು. ಆದರೆ, ಭೂ ಪರಿಹಾರ ನಿಗದಿಪಡಿಸಿರಲಿಲ್ಲ. ಅದೇ ಹೊತ್ತಿಗೆ 2013ರ ಕಾಯ್ದೆ ಜಾರಿಗೆ ಬಂದಿತ್ತು. ಇವುಗಳಿಗೆ ಯಾವ ಕಾಯ್ದೆ ಅನ್ವಯಿಸುತ್ತದೆ ಎಂಬ ಗೊಂದಲ ಉಂಟಾಗಿತ್ತು. ಇದಕ್ಕೆ ಸ್ಪಷ್ಟನೆ ನೀಡಿರುವ ನ್ಯಾಯಪೀಠ, ‘ಇಂತಹ ಪ್ರಕರಣಗಳಲ್ಲಿ 2013ರ ಕಾಯ್ದೆಯಡಿ ಪರಿಹಾರ ನಿರ್ಣಯಿಸಬೇಕು‘ ಎಂದು ಸೂಚಿಸಿದೆ. 

ರಾಜ್ಯದ 530 ಮೇಲ್ಮನವಿಗಳ ವಿಚಾರಣೆ  

ಬೆಂಗಳೂರಿನ ಬಿನ್ನಿ ಮಿಲ್‌ ರಸ್ತೆ ವಿಸ್ತರಣೆಗಾಗಿ ಎಸ್‌.ವಿ.ಗ್ಲೋಬಲ್‌ ಮಿಲ್‌ ಲಿಮಿಟೆಡ್‌ನ 3.16 ಎಕರೆ ಸ್ವಾಧೀನಪಡಿಸಿಕೊಳ್ಳಲು ಬಿಬಿಎಂಪಿ 2010ರಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. 2013ರ ನವೆಂಬರ್‌ನಲ್ಲಿ ಅಂತಿಮ ಅಧಿಸೂಚನೆ ಪ್ರಕಟವಾಗಿತ್ತು. 2014ರ ಜನವರಿ 14ರಂದು ಜಾಗ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆದರೆ, ಹೊಸ ಕಾಯ್ದೆ 2014ರ ಜನವರಿ 1ರಂದು ಜಾರಿಗೆ ಬಂದಿತ್ತು. ಆಗ ಚದರ ಅಡಿಗೆ ₹4,620 ನಿಗದಿಪಡಿಸಲಾಗಿತ್ತು. 

2013ರ ಕಾಯ್ದೆಯ ಸೆಕ್ಷನ್‌ 64ರ ಅಡಿಯಲ್ಲೇ ಭೂಪರಿಹಾರ ನಿಗದಿಪ‍ಡಿಸಬೇಕು ಎಂದು ಒತ್ತಾಯಿಸಿ ಕಂಪನಿಯು ನ್ಯಾಯಾಲಯದ ಮೊರೆ ಹೋಗಿತ್ತು. ನ್ಯಾಯಾಲಯವು ಚದರ ಅಡಿಗೆ ₹8,624 ನಿಗದಿಪಡಿಸಿ 2018ರಲ್ಲಿ ಆದೇಶ ಹೊರಡಿಸಿತ್ತು. ಈ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರವು ಹೈಕೋರ್ಟ್‌ ಮೊರೆ ಹೋಗಿತ್ತು. ರಾಜ್ಯ ಸರ್ಕಾರವು 120 ದಿನಗಳು ದಾಟಿದ ಬಳಿಕವಷ್ಟೇ ಮೇಲ್ಮನವಿ ಸಲ್ಲಿಸಿದೆ ಎಂಬ ಕಾರಣ ನೀಡಿ ಹೈಕೋರ್ಟ್‌ ಈ ಅರ್ಜಿಯನ್ನು ವಜಾಗೊಳಿಸಿತ್ತು. ಆ ಬಳಿಕ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು.

ಇನ್ನೊಂದೆಡೆ, ವಿವಿಧ ಸಾರ್ವಜನಿಕ ಹಾಗೂ ಮೂಲಸೌಕರ್ಯ ಯೋಜನೆಗಳಿಗಾಗಿ ಸಾವಿರಾರು ಎಕರೆ ಜಾಗ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಭೂಸ್ವಾಧೀನ ಅಧಿಕಾರಿಗಳು ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಪರಿಹಾರ ಕೋರಿ ಭೂಮಾಲೀಕರು ಸಿವಿಲ್‌ ನ್ಯಾಯಾಲಯಗಳ ಮೊರೆ ಹೋಗಿದ್ದರು. ಭೂ ಪರಿಹಾರ ಮೊತ್ತವನ್ನು ನ್ಯಾಯಾಲಯಗಳು ಹೆಚ್ಚಿಸಿದ್ದವು. ಈ ಆದೇಶಗಳನ್ನು ಪ್ರಶ್ನಿಸಿ ಸರ್ಕಾರವು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಆದಾಗ್ಯೂ, 120 ದಿನಗಳನ್ನು ಮೀರಿದ ವಿಳಂಬವನ್ನು 2013 ರ ಕಾಯ್ದೆಯಡಿಯಲ್ಲಿ ಕ್ಷಮಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಹೆಚ್ಚಿನ ಮೇಲ್ಮನವಿಗಳನ್ನು ಹೈಕೋರ್ಟ್ ವಜಾಗೊಳಿಸಿತ್ತು. 

ಕೃಷ್ಣಾ ಮೇಲ್ದಂಡೆ ಯೋಜನೆ, ಸಿಂಗಟಾಲೂರು ಏತ ನೀರಾವರಿ ಯೋಜನೆ, ರಾಜ್ಯ ಹೆದ್ದಾರಿ ಯೋಜನೆಗಳು ಮತ್ತು ಇತರ ಪ್ರಮುಖ ಅಭಿವೃದ್ಧಿ ಯೋಜನೆಗಳ ಭೂಸ್ವಾಧೀನ ಪ್ರಕರಣಗಳಲ್ಲೂ ಇದೇ ರೀತಿ ಆಗಿತ್ತು. ರಾಜ್ಯ ಸರ್ಕಾರದ 530 ಮೇಲ್ಮನವಿಗಳು ಹಾಗೂ ಬೇರೆ ರಾಜ್ಯಗಳ ಕೆಲವೊಂದು ಮೇಲ್ಮನವಿಗಳನ್ನು ಒಟ್ಟಾಗಿ ವಿಚಾರಣೆ ನಡೆಸಿದ ನ್ಯಾಯಪೀಠವು ಈ ತೀರ್ಪು ನೀಡಿದೆ. 

ವ್ಯಾಪಕ ಪರಿಣಾಮ: ಕೃಷ್ಣ ಬೈರೇಗೌಡ 

‘ಈ ತೀರ್ಪು ರಾಜ್ಯದ ಆರ್ಥಿಕ ಸ್ಥಿತಿಗತಿಗಳ ಮೇಲೆ ವ್ಯಾಪಕ ಪರಿಣಾಮ ಬೀರಲಿದೆ. ಕರ್ನಾಟಕ ಸರ್ಕಾರದ ಕಾನೂನು ಹೋರಾಟದಿಂದಾಗಿ ಸರ್ಕಾರಿ ಬೊಕ್ಕಸದ ಸಾವಿರಾರು ಕೋಟಿ ರೂಪಾಯಿ ಹಣದ ರಕ್ಷಣೆ ಆಗಿದೆ. ಸರ್ಕಾರಕ್ಕೆ ಉಂಟಾಗುತ್ತಿದ್ದ ಹೊರೆ ತಗ್ಗಿದೆ‘ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. 

‘ಕೆಲವೊಂದು ಪ್ರಕರಣಗಳಲ್ಲಿ ಸರ್ಕಾರಿ ವಕೀಲರು ಸಿವಿಲ್‌ ನ್ಯಾಯಾಲಯಗಳಲ್ಲಿ ಸರಿಯಾದ ವಾದ ಮಂಡಿಸಿರಲಿಲ್ಲ. ಜತೆಗೆ,  ಹೈಕೋರ್ಟ್‌ಗಳಲ್ಲಿ ಸಮಯಕ್ಕೆ ಸರಿಯಾಗಿ ಮೇಲ್ಮನವಿಗಳನ್ನು ಸಲ್ಲಿಸಿರಲಿಲ್ಲ. ಇದರಿಂದಾಗಿ, ಮೇಲ್ಮನವಿಗಳು ವಜಾಗೊಂಡಿದ್ದವು. ಈ ಪ್ರಕರಣಗಳಲ್ಲಿ, ಅಧಿಕಾರಿಗಳು ಮತ್ತು ವಕೀಲರ ನಡುವೆ ವ್ಯವಸ್ಥಿತ ಒಳ ಒಪ್ಪಂದಗಳು ನಡೆದಿರುವ ಸಾಧ್ಯತೆಯಿದೆ. ಇದರ ಪರಿಣಾಮವಾಗಿ, ನ್ಯಾಯಾಲಯಗಳು ದುಪ್ಪಟ್ಟು ಪರಿಹಾರ ಆದೇಶಗಳನ್ನು ಹೊರಡಿಸಿದ್ದವು. ಇದರಿಂದಾಗಿ ಸರ್ಕಾರದ ಖಜಾನೆಗೆ ಸಾವಿರಾರು ಕೋಟಿ ರೂಪಾಯಿಗಳ ಭಾರೀ ನಷ್ಟವಾಗುವ ಸಾಧ್ಯತೆ ಇತ್ತು. ಇಂತಹ ಷಡ್ಯಂತ್ರಗಳು ರಾಜ್ಯದಾದ್ಯಂತ ನಡೆದಿರುವುದು ಬೆಳಕಿಗೆ ಬಂದಿದ್ದು, ಇದರಿಂದಾಗಿ ಭವಿಷ್ಯದಲ್ಲಿಯೂ ಸಾವಿರಾರು ಕೋಟಿ ರೂಪಾಯಿಗಳ ನಷ್ಟ ಉಂಟಾಗುತ್ತಿತ್ತು. ಇದರಿಂದ ಉಂಟಾಗುವ ಗಂಭೀರ ಆರ್ಥಿಕ ಪರಿಣಾಮದ ಪರಾಮರ್ಶೆ ನಡೆಸಿ  ಸರ್ಕಾರವು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು‘ ಎಂದು ಅವರು ತಿಳಿಸಿದರು. 

‘ಮೇಲ್ಮನವಿಗಳ ಸಲ್ಲಿಸುವ ಸಂದರ್ಭದ ವಿಳಂಬಗಳ ಕಾರಣಗಳನ್ನು ಪರಿಶೀಲಿಸಿ ತಪ್ಪಿತಸ್ಥ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲು ಉನ್ನತ ಮಟ್ಟದ ವಿಚಾರಣಾ ಸಮಿತಿಯನ್ನು 2025ರ ಸೆಪ್ಟೆಂಬರ್‌ನಲ್ಲಿ ರಚಿಸಲಾಗಿದೆ. ಸಮಿತಿಯು ಶೀಘ್ರ ವರದಿ ಸಲ್ಲಿಸಲಿದೆ‘ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.