ADVERTISEMENT

ಹೆಜಮಾಡಿ ಟೋಲ್‌ಗೇಟ್‌–ಉಡುಪಿ ಜಿಲ್ಲಾಡಳಿತದ ನಿಲುವು ಅವೈಜ್ಞಾನಿಕ: ಹೋರಾಟ ಸಮಿತಿ

ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾಗಿ ಮುಂದುವರಿಯುವ ನೈತಿಕತೆ ಸುನಿಲ್‌ಗೆ ಇಲ್ಲ: ಮುನೀರ್‌ ಕಾಟಿಪಳ್ಳ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2022, 16:25 IST
Last Updated 3 ಡಿಸೆಂಬರ್ 2022, 16:25 IST
ಮುನೀರ್‌ ಕಾಟಿಪಳ್ಳ
ಮುನೀರ್‌ ಕಾಟಿಪಳ್ಳ   

ಮಂಗಳೂರು: ಹೆಜಮಾಡಿ ಟೋಲ್‌ಪ್ಲಾಜಾದಲ್ಲಿ ಉಡುಪಿ ನೋಂದಣಿ (ಕೆ.ಎ.20) ವಾಹನಗಳಿಗೆ ಮಾತ್ರ ಹೆಚ್ಚುವರಿ ಸುಂಕದಿಂದ ವಿನಾಯಿತಿ ನೀಡುವುದು ಅವೈಜ್ಞಾನಿಕ ಎಂದು ಸುರತ್ಕಲ್‌ ಟೋಲ್‌ಗೇಟ್‌ ಹೋರಾಟ ಸಮಿತಿ ಟೀಕಿಸಿದೆ.

‘ಇದರಿಂದ ಬ್ರಹ್ಮರಕೂಟ್ಲು, ತಲಪಾಡಿ ಟೋಲ್ ಪ್ಲಾಜಾ ಮೂಲಕ ಸಾಗುವ ವಾಹನಗಳ ಸವಾರರು ತಾವು ಬಳಸದೇ ಇರುವ ಸುರತ್ಕಲ್–ನಂತೂರು ರಸ್ತೆಗೆ ಹೆಚ್ಚುವರಿ ಸುಂಕ ಕಟ್ಟಬೇಕಾಗುತ್ತದೆ. ಇದು ಅವೈಜ್ಞಾನಿಕ ಮಾತ್ರ ಅಲ್ಲ, ಬಲವಂತದ ಸುಲಿಗೆಯೂ ಆಗುತ್ತದೆ’ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

‘ಉಡುಪಿ ಜಿಲ್ಲಾಡಳಿತ ನಡೆಸಿದ ಸಭೆಯ ತೀರ್ಮಾನದ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವರಿ ಸಚಿವ ವಿ.ಸುನಿಲ್‌ ಕುಮಾರ್‌ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಉಡುಪಿ ನೋಂದಣಿಯ ( ಕೆ.ಎ.20) ವಾಹನಗಳಿಗೆ ಮಾತ್ರ ಸುರತ್ಕಲ್ ಟೋಲ್ ಸುಂಕದಿಂದ ಪೂರ್ಣ ವಿನಾಯತಿ ಕೊಡಬೇಕು. ಉಡುಪಿ ಜಿಲ್ಲೆಯ ವಾಹನಗಳ ಓಡಾಟಕ್ಕೆ ಪ್ರತ್ಯೇಕ ಲೇನ್ ನಿರ್ಮಿಸಬೇಕು ಎಂದು ತಿಳಿಸಿದ್ದಾರೆ. ಇದು ತಾರತಮ್ಯದಿಂದ ಕೂಡಿದ ನಿಲುವು’ ಎಂದು ಹೋರಾಟ ಸಮಿತಿ ಹೇಳಿದೆ.

ADVERTISEMENT

‘ಸುನಿಲ್ ಕುಮಾರ್ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದುಕೊಂಡು ಈ ಜಿಲ್ಲೆಯ ಜನರ ಹಿತಾಸಕ್ತಿಗಳನ್ನು ಎತ್ತಿಹಿಡಿಯಬೇಕಿತ್ತು. ಉಡುಪಿ ಜಿಲ್ಲಾಡಳಿತದ ಸಭೆಯಲ್ಲಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಉಚಿತ ಪ್ರಯಾಣದ ಅವಕಾಶವನ್ನು ನಿರಾಕರಿಸಿದ್ದಾರೆ. ಮೂಲಕ ಈ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಮುಂದುವರಿಯುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ’ ಎಂದು ಸಮಿತಿಯ ಸಂಚಾಲಕ ಮುನೀರ್‌ ಕಾಟಿಪಳ್ಳ ಟೀಕಿಸಿದ್ದಾರೆ.

‘ಸುರತ್ಕಲ್ ಅಕ್ರಮ ಟೋಲ್ ಗೇಟ್ ತೆರವು ಸಂಬಂಧ 2022ರಅ.14 ರಂದು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎನ್‌ಎಚ್‌ಎಐ ಅಧಿಕಾರಿಗಳ ಜೊತೆ ಚರ್ಚಿಸಿ ಟೋಲ್‌ಗೇಟ್‌ಗಳ ವಿಲೀನದ ತೀರ್ಮಾನ ಕೈಗೊಳ್ಳಲಾಗಿತ್ತು. ಆ ಸಭೆಗೆ ಸುನಿಲ್ ಗೈರಾಗಿದ್ದರು. ಮುಕ್ಕ–ಬಿ.ಸಿ.ರೋಡ್ ಹೆದ್ದಾರಿ ನಿರ್ಮಾಣಕ್ಕೆ ಹಣಕಾಸು ಒದಗಿಸಿರುವ ಬ್ಯಾಂಕರ್‌ಗ ಜೊತೆಅ.17 ರಂದು ನಡೆಸಲಾದ ಸಭೆಗೆ ಹಾಗೂ ಅ.28 ರಂದು ರಾಜ್ಯ ಸರ್ಕಾರದ ಉನ್ನತ ಅಧಿಕಾರಿಗಳು ಮತ್ತು ಎನ್‌ಎಚ್‌ಎಐ ಅಧಿಕಾರಿಗಳ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ನಡೆದ ಸಭೆಗೂ ಸುನಿಲ್‌ ಗೈರಾಗಿದ್ದರು. ಜಿಲ್ಲಾ ಉಸ್ತುವಾರಿ ಸಚಿವರಿಗೇಆ ಸಭೆಯ ಮಾಹಿತಿ ಇರಲಿಲ್ಲವೇ. ಈ ಎಲ್ಲ ಸಂದರ್ಭಗಳಲ್ಲೂ ಸುನಿಲ್ ತಮಗೂ, ಸುರತ್ಕಲ್ ಅಕ್ರಮ ಟೋಲ್ ಗೇಟ್ ಸಮಸ್ಯೆಗೂ ಸಂಬಂಧವೇ ಇಲ್ಲ ಎಂಬಂತೆ ಮೌನ ವಹಿಸಿದ್ದು ಏಕೆ’ ಎಂದು ಅವರು ಪ್ರಶ್ನಿಸಿದ್ದಾರೆ.

‘ಸುರತ್ಕಲ್ ಅಕ್ರಮ ಟೋಲ್‌ಗೆ ಸಂಬಂಧಿಸಿದ ಸುಂಕವನ್ನು ಹೆಜಮಾಡಿ ಟೋಲ್ ಪ್ಲಾಜಾ ಮೂಲಕ ಸಾಗುವ ಯಾವುದೇ ವಾಹನದಿಂದ ಸಂಗ್ರಹಿಸಿದರೂ ಅದು ಸುಲಿಗೆಯೇ. ಸುರತ್ಕಲ್‌ ಟೋಲ್‌ನಲ್ಲಿ ಮಂಗಳೂರು ನೋಂದಣಿಯ ಖಾಸಗಿ ವಾಹನಗಳಿಗೆ ಉಚಿತ ಓಡಾಟಕ್ಕೆ ಅವಕಾಶ ಇತ್ತು. ಆದರೂ ನಾವು ಅದರ ವಿರುದ್ಧ ಹೋರಾಟ ನಡೆಸಿದ್ದು ವಿಶಾಲ ಮನೋಭಾವ ಮತ್ತು ನ್ಯಾಯಪ್ರಜ್ಞೆಯಿಂದ‌’ ಎಂದು ನೆನಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.