ADVERTISEMENT

ಶಿಥಿಲ ಶಾಲಾ ಕಟ್ಟಡ ನೆಲಸಮಕ್ಕೆ ಸೂಚನೆ

ಮರು ನಿರ್ಮಾಣ, ದುರಸ್ತಿಗೆ ₹750 ಕೋಟಿ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2019, 20:15 IST
Last Updated 9 ಅಕ್ಟೋಬರ್ 2019, 20:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಸಂಪೂರ್ಣ ಶಿಥಿಲಗೊಂಡ ಶಾಲಾ ಕೊಠಡಿಗಳನ್ನು ತಕ್ಷಣವೇ ನೆಲಸಮಗೊಳಿಸಿ, ಹೊಸದಾಗಿ ಕೊಠಡಿಗಳನ್ನು ನಿರ್ಮಿಸಬೇಕೆಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಸೂಚನೆ ನೀಡಿದ್ದಾರೆ.

ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ಬುಧವಾರ ನಡೆಸಿದ ವಿಡಿಯೊ ಸಂವಾದದಲ್ಲಿ ಅವರು ಈ ನಿರ್ದೇಶನ ನೀಡಿದರು. ನೆರೆ ಪೀಡಿತ ಪ್ರದೇಶ ಸೇರಿ ರಾಜ್ಯದ ಬಹಳಷ್ಟು ಕಡೆಗಳಲ್ಲಿ ಸರ್ಕಾರಿ ಶಾಲೆಗಳ ಕೊಠಡಿಗಳು ಸಂಪೂರ್ಣ ಶಿಥಿಲಗೊಂಡಿವೆ.

ನೆರೆ ಪೀಡಿತ ಪ್ರದೇಶಗಳಲ್ಲಿ ಹಾನಿಯಾಗಿರುವ ಶಾಲಾ ಕೊಠಡಿಗಳ ಮೂಲ ಸೌಕರ್ಯ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳಲು ಜಿಲ್ಲಾಧಿಕಾರಿಗಳು ಮತ್ತು ಡಿಡಿಪಿಐಗಳಿಗೆ ಆದೇಶ
ನೀಡಿದರು.

ADVERTISEMENT

ರಾಜ್ಯ ಸರ್ಕಾರ ವಿಕೋಪ ಪರಿಹಾರ ನಿಧಿಯಿಂದ₹ 500 ಕೋಟಿ ಅನುದಾನ ಒದಗಿಸಿದೆ. ಶಿಕ್ಷಣ ಇಲಾಖೆ ಈ ಸಾಲಿಗೆ ಒದಗಿಸಿರುವ ಹಾಗೂ ಈಗಾಗಲೇ ಜಿಲ್ಲಾ ಪಂಚಾಯತ್‌ಗಳ ಖಾತೆಗಳಲ್ಲಿ ಇರುವ ₹250 ಕೋಟಿ ಅನುದಾನ ಸೇರಿ ಒಟ್ಟು ₹750 ಕೋಟಿಯನ್ನು ಈ ಕಾರ್ಯಕ್ಕೆ ಬಳಕೆ ಮಾಡಿ. ಶಾಲಾ ಕೊಠಡಿಗಳ, ಅಂಗನವಾಡಿಗಳ ನಿರ್ಮಾಣಕ್ಕೆ ಪ್ರಥಮ ಆದ್ಯತೆ ನೀಡಬೇಕು ಎಂದು ಸೂಚಿಸಿದರು. ಇದೇ 22 ಮತ್ತು 23 ರಂದು ಬೆಳಗಾವಿ, ಚಿಕ್ಕೋಡಿ, ವಿಜಯಪುರ ಜಿಲ್ಲೆಗಳಿಗೆ ಭೇಟಿ ನೀಡಿ ಅಲ್ಲಿನ ಶಾಲೆಗಳನ್ನು ವೀಕ್ಷಿಸುವುದಾಗಿಯೂ ಅವರು ತಿಳಿಸಿದರು.

ಸಚಿವರ ನಿರ್ದೇಶನ

*ಮಳೆ ಮತ್ತು ಪ್ರವಾಹದಿಂದ ಹಾನಿಯಾದ ಶಾಲಾ ಕಟ್ಟಡಗಳನ್ನು ಮಾತ್ರ ದುರಸ್ತಿಗೆ ಪರಿಗಣಿಸಬೇಕು. ಗೋಡೆ, ಮೇಲ್ಛಾವಣಿ ದುರಸ್ತಿ, ವಿಶೇಷವಾಗಿ ಹೆಣ್ಣು ಮಕ್ಕಳ ಶೌಚಾಲಯ ನಿರ್ಮಾಣಕ್ಕೂ ಪ್ರಾಮುಖ್ಯತೆ ನೀಡಬೇಕು. ತರಗತಿಗಳಿಗೆ ತೊಂದರೆ ಆಗದಂತೆ ಕಾಮಗಾರಿ ಪೂರ್ಣಗೊಳಿಸಬೇಕು.

* ಸ್ಥಳೀಯ ಶಾಸಕರನ್ನು ಸಂಪರ್ಕಿಸಿ ಶಾಸಕರ ನಿಧಿಯಿಂದ ಅನುದಾನಕ್ಕೂ ಕೋರಿಕೆ ಸಲ್ಲಿಸಬೇಕು.

* ಸಂಘ ಸಂಸ್ಥೆಗಳ ಸಿಎಸ್‌ಆರ್‌ ಅನುದಾನದಲ್ಲಿ ಹಣ ಪಡೆಯಲು
ಪ್ರಯತ್ನಿಸಬೇಕು.

* ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆಪ್ರತಿ ವಾರದ ಆರ್ಥಿಕ ಮತ್ತು ಭೌತಿಕ ಪ್ರಗತಿಯನ್ನು ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಉಪ ನಿರ್ದೇಶಕರು ಕಡ್ಡಾಯವಾಗಿ ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.