
ಬೆಂಗಳೂರು: ಸಿದ್ಧಾಪುರದ ವಸಂತ ನಾಯ್ಕ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಜೋತಿಷಿ ಕಮಲಾಕರ ಹೆಗಡೆ (ಭಟ್ಟ) ಅವರನ್ನು ಬೆಂಬಲಿಸಿ ಬಿಜೆಪಿ ಶಾಸಕ ಎಸ್.ಸುರೇಶ್‌ಕುಮಾರ್ ಅವರು ಬಹಳ ಹಿಂದೆ ಮಾಡಿದ್ದ ಪೋಸ್ಟ್ ಒಂದನ್ನು ವಿಧಾನಪರಿಷತ್ತಿನ ಕಾಂಗ್ರೆಸ್‌ನ ಬಿ.ಕೆ.ಹರಿಪ್ರಸಾದ್ ಅವರು ‘ಎಕ್ಸ್’ನಲ್ಲಿ ಪ್ರಸ್ತಾಪಿಸಿದ್ದಾರೆ. ಇಂತಹ ಅಪರಾಧಿ ಮನಸ್ಥಿತಿಯವರೊಂದಿಗೆ ಸುರೇಶ್ ಅವರಿಗೆ ಏನು ಸಂಬಂಧ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಸುರೇಶ್ ಕುಮಾರ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಕೀಳು ರಾಜಕರಣವನ್ನು ಬಿಡಿ ಎಂದಿದ್ದಾರೆ.

ಸುರೇಶ್‌ಕುಮಾರ್‌ಗೆ ಸಂಬಂಧವೇನು?
ಕಮಲಾಕರ ಹೆಗಡೆ(ಭಟ್ಟ) ಎಂಬ ಜೋತಿಷಿಯ ಅಕ್ರಮ ಸಂಬಂಧಕ್ಕೆ 41 ವರ್ಷದ ಅಮಾಯಕರೊಬ್ಬರು ಬಲಿಯಾಗಿದ್ದಾರೆ. ಜೋತಿಷಿ ಕೇಳಲು ತನ್ನ ಬಳಿ ಬರುತ್ತಿದ್ದ ಮಹಿಳೆಯರನ್ನು ಶೋಷಿಸುತ್ತಿದ್ದ ಈ ಸ್ತ್ರೀಪೀಡಕನನ್ನು ಪ್ರೋತ್ಸಾಹಿಸಿ ಬೆಳೆಸಿದ್ದು ರಾಜಾಜಿನಗರ ಶಾಸಕ ಎಸ್.ಸುರೇಶ್‌ಕುಮಾರ್. ಇಂತಹ ವ್ಯಕ್ತಿಗಳಿಗೆ ಪ್ರೋತ್ಸಾಹ ನೀಡಬಾರದು ಎಂಬುದು ಈ ಹಿಂದೆ ಕಾನೂನು ಸಚಿವರಾಗಿದ್ದಂಥ ಶಾಸಕರಿಗೆ ಗೊತ್ತಾಗುವುದಿಲ್ಲವೇ? ಕಮಲಾಕರ ಭಟ್ಟ ಭಾಗಿಯಾದ ಕೊಲೆ ಪ್ರಕರಣದಲ್ಲಿ ಸುರೇಶ್‌ಕುಮಾರ್ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಪಾತ್ರ ಎನು? ಸದನದಲ್ಲಿ ಮಹಿಳೆಯರನ್ನು ಅವಮಾನಿಸುವವರು ಸಮಾಜದಲ್ಲಿ ಸ್ತ್ರೀ ಪೀಡಕರು ಅತ್ಯಾಚಾರಿಗಳು ಕೊಲೆಗಡುಕರು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗುವವರಿಗೆ ಮತ್ತು ಬಿಜೆಪಿಗೆ ಅವಿನಾಭಾವ ಸಂಬಂಧ ಇರುವುದಾದರೂ ಹೇಗೆ? ಬಿಜೆಪಿಯ ಕರ್ನಾಟಕದ ಘಟಕದಲ್ಲಿ ಇದಕ್ಕಾಗಿಯೇ ಪ್ರತ್ಯೇಕ ಮೋರ್ಚಾ ಇದೆಯೇ? ಅಥವಾ ಅಪರಾಧ ಕೃತ್ಯಗಳಲ್ಲಿ ಭಾಗವಹಿಸುವವರಿಗೆ ಹಾಗೂ ಪ್ರೋತ್ಸಾಹಿಸುವವರಿಗೆ ಮಾತ್ರ ಬಿಜೆಪಿಯಲ್ಲಿ ಸ್ಥಾನ–ಮಾನಗಳು ಸಿಗುತ್ತವೆಯೇ? ವೈಜ್ಞಾನಿಕ ಮನೋಭಾವ ಮತ್ತು ಪ್ರಗತಿಪರ ಚಿಂತನೆ ಬೆಳೆಸಬೇಕು ಎಂದು ಸಂವಿಧಾನದ 51ಎ(ಎಚ್) ವಿಧಿ ಹೇಳುತ್ತದೆ. ಮೂಢನಂಬಿಕೆಯನ್ನು ಬಳಸಿಕೊಂಡು ಅಕ್ರಮ ಎಸಗುವ ‘ಜೀ–ಗುರೂಜಿ’ಗಳನ್ನು ಪ್ರೋತ್ಸಾಹಿಸುವುದು ಈ ವಿಧಿಯ ಉಲ್ಲಂಘನೆ. ಸುರೇಶ್‌ಕುಮಾರ್ ಅವರು ಈ ವಿಧಿಯನ್ನು ಉಲ್ಲಂಘಿಸಿ ಪ್ರೋತ್ಸಾಹಿಸಿದ್ದು ಕಮಲಾಕರ ಭಟ್ಟ ಕೊಲೆ ಮಾಡಲು ಪರೋಕ್ಷವಾಗಿ ಒಂದು ಕಾರಣ. ಸುರೇಶ್ ಅವರು ಈ ಕೊಲೆಯ ನೈತಿಕ ಹೊಣೆ ಹೊರಬೇಕು. ಬಿ.ಕೆ.ಹರಿಪ್ರಸಾದ್ ಕಾಂಗ್ರೆಸ್
ಕೊಳೆತ ಮನಸ್ಥಿತಿಗೆ ಸಾಕ್ಷಿ
ಈ ಪ್ರಕರಣಕ್ಕೆ ನನ್ನ ಹೆಸರನ್ನು ತಳಕು ಹಾಕುತ್ತಿರುವುದು ನಿಮ್ಮ ಬೌದ್ಧಿಕ ದಿವಾಳಿತನ ಎತ್ತಿ ತೋರಿಸುತ್ತದೆ. ನಮ್ಮ ಜತೆ ಫೋಟೊ ತೆಗೆಸಿಕೊಂಡರು ಅಥವಾ ಪರಿಚಯಸ್ಥರಾಗಿದ್ದರು ಎಂಬ ಒಂದೇ ಕಾರಣಕ್ಕೆ ಅವರ ಖಾಸಗಿ ಬದುಕಿನ ವಿಕೃತಿಗಳಿಗೆ ಮತ್ತು ಅವರ ಎಸಗುವ ಕ್ರಿಮಿನಲ್ ಕೃತ್ಯಗಳಿಗೆ ನಾನು ಉತ್ತರದಾಯಿಯಾಗುತ್ತೇನೆಯೇ? ನಿಮ್ಮ ಪಕ್ಷದ ನಾಯಕರ ಜತೆ ಫೋಟೊ ತೆಗೆಸಿಕೊಂಡವರು ಜೈಲು ಪಾಲಾದ ಉದಾಹರಣೆಗಳಿಲ್ಲವೆ. ಆಗ ನಿಮ್ಮ ನಾಯಕರುಗಳೆಲ್ಲ ನೈತಿಕ ಹೊಣೆ ಹೊತ್ತಿದ್ದಾರೆಯೇ? ಬಹಳ ಹಿಂದೆ ಯಶವಂತಪುರ ಪೆಟ್ರೋಲ್ ಬಂಕ್ ಬಳಿ ನನ್ನ ವಾಹನಕ್ಕೆ ಇಂಧನ ತುಂಬಿಸುತ್ತಿರುವಾಗ ಒಮ್ಮೆ ಮಾತ್ರ ಆ ವ್ಯಕ್ತಿಯ (ಕಮಲಾಕರಭಟ್ಟ) ಪರಿಚಯವಾಗಿತ್ತು. ನೀವು ನನಗೆ ಸಂವಿಧಾನದ ಆರ್ಟಿಕಲ್ 51ಎ(ಎಚ್) ಪಾಠ ಮಾಡಲು ಬಂದಿದ್ದೀರಿ. ಮಾಜಿ ಕಾನೂನು ಸಚಿವನಾಗಿ ಸಂವಿಧಾನದ ಪ್ರತಿಯೊಂದು ಸಾಲಿನ ಮಹತ್ವ ನನಗೆ ಚೆನ್ನಾಗಿ ತಿಳಿದಿದೆ. ವೈಜ್ಞಾನಿಕ ಮನೋಭಾವ ಮತ್ತು ತಾರ್ಕಿಕತೆ ಎಂದರೆ ಘಟನೆಗಳ ಸತ್ಯಾಸತ್ಯತೆಯನ್ನು ಅರಿಯದೇ ಕೇವಲ ರಾಜಕೀಯ ದ್ವೇಷಕ್ಕಾಗಿ ಇಲ್ಲ ಸಲ್ಲದ ಆರೋಪ ಮಾಡುವುದಲ್ಲ. ನಿಮ್ಮದು ಕೊಳೆತ ಮನಸ್ಥಿತಿ. ನಾನು ಜೋತಿಷ್ಯವನ್ನು ತುಂಬಾ ನಂಬುವವನೂ ಅಲ್ಲ ಮೂಢನಂಬಿಕೆ ಬೆಂಬಲಿಸುವವನೂ ಅಲ್ಲ. ಆದರೆ ಧಾರ್ಮಿಕ ನಂಬಿಕೆಗಳಿಗೂ ಕ್ರಿಮಿನಲ್ ಚಟುವಟಿಕೆಗಳಿಗೂ ಇರುವ ವ್ಯತ್ಯಾಸ ತಿಳಿಯದಷ್ಟು ದಡ್ಡನೂ ನಾನಲ್ಲ. ಎಂಇಎಸ್ ಕಾಲೇಜು ಮತ್ತು ರೇಣುಕಾಚಾರ್ಯ ಕಾನೂನು ಕಾಲೇಜಿನಲ್ಲಿ ನಾವಿಬ್ಬರೂ ಒಟ್ಟಿಗೆ ಶಿಕ್ಷಣ ಪಡೆದಿದ್ದೆವು. ಆಗ ನೀವು ಯಾವುದಕ್ಕೆ ಖ್ಯಾತರಾಗಿದ್ದೀರಿ ಎಂಬುದೂ ಗೊತ್ತು. ಭಗವಂತ ನಿಮಗೆ ಸದ್ಭುದ್ಧಿ ನೀಡಲಿ. ಎಸ್.ಸುರೇಶ್ ಕುಮಾರ್ ಬಿಜೆಪಿ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.