ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವುದು ಪ್ರತಿಷ್ಠೆಯಲ್ಲ, ಕರ್ತವ್ಯ: ಸುರೇಶ್ ಕುಮಾರ್‌

​ಪ್ರಜಾವಾಣಿ ವಾರ್ತೆ
Published 5 ಜುಲೈ 2021, 19:47 IST
Last Updated 5 ಜುಲೈ 2021, 19:47 IST
ಎಸ್‌.ಸುರೇಶ್‌ ಕುಮಾರ್
ಎಸ್‌.ಸುರೇಶ್‌ ಕುಮಾರ್   

ಮೈಸೂರು: ‘ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವುದು ಸರ್ಕಾರ ಹಾಗೂ ಶಿಕ್ಷಣ ಇಲಾಖೆಗೆ ಪ್ರತಿಷ್ಠೆ ವಿಚಾರವಲ್ಲ. ಇದು ನಮ್ಮ ಕರ್ತವ್ಯ’ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್ ಕುಮಾರ್‌ ಸೋಮವಾರ ಇಲ್ಲಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪರೀಕ್ಷೆ ಎಂಬುದು ಶಿಕ್ಷೆಯಲ್ಲ. ಕಲಿಕೆ ಯಾವ ಹಂತದಲ್ಲಿದೆ ಎಂಬುದು ಮಕ್ಕಳಿಗೆ ತಿಳಿಯಬೇಕು. ಪಿಯುಸಿನಲ್ಲಿ ಯಾವ ವಿಷಯ ತೆಗೆದುಕೊಳ್ಳಬೇಕು ಎಂಬ ಬಗ್ಗೆಯೂ ತಿಳಿವಳಿಕೆ ಮೂಡಬೇಕು. ಆ ಉದ್ದೇಶದಿಂದ ಪರೀಕ್ಷೆ ಮಾಡುತ್ತಿದ್ದೇವೆ’ ಎಂದು ಸ್ಪಷ್ಟಪಡಿಸಿದರು.

ಇಂದು ಸಭೆ: ‘ರಾಜ್ಯದ ಎಲ್ಲ ಡಿಡಿಪಿಐ ಮತ್ತು ಬಿಇಒಗಳ ಜತೆ ಮಂಗಳವಾರ ಸಭೆ ನಡೆಸಲಿದ್ದೇನೆ. ಇನ್ನೊಂದು ದಿನ ರಾಜ್ಯದ ಮಕ್ಕಳ ಜತೆ ಸಂವಾದ ನಡೆಯಲಿದೆ. ಎರಡು ಸೆಟ್‌ ಮಾದರಿ ಪ್ರಶ್ನೆ ಪತ್ರಿಕೆ ಮತ್ತು ಒಎಂಆರ್ ಶೀಟ್ ಮಾಹಿತಿಯನ್ನು ಈಗಾಗಲೇ ಶಾಲೆಗಳಿಗೆ ಕೊಡಲಾಗಿದೆ. ಶಾಲಾ ಹಂತದಲ್ಲಿ ತರಬೇತಿ ಕೂಡಾ ಕೊಟ್ಟಿದ್ದೇವೆ’ ಎಂದರು.

ADVERTISEMENT

‘ಶಿಕ್ಷಣ ಸಚಿವರು ಹಟಕ್ಕೆ ಬಿದ್ದು ಪರೀಕ್ಷೆ ಮಾಡುತ್ತಿದ್ದಾರೆ’ ಎಂದು ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಹೇಳಿರುವ ಬಗ್ಗೆ ಪ್ರತಿಕ್ರಿಯೆಗೆ ಗರಂ ಆದ ಸಚಿವರು, ‘ಅವರು ದೊಡ್ಡವರು. ಏನೆಂದು ಪ್ರತಿಕ್ರಿಯಿಸಲಿ’ ಎನ್ನುತ್ತಾ ನಿರ್ಗಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.