
ಬೆಂಗಳೂರು:‘ರಾಜಸ್ವ ಸಂಗ್ರಹಣೆ ಎಂಬುದು ಸಾಮಾಜಿಕ ಸ್ವಾಸ್ಥ್ಯದ ಸಮಾಧಿಯ ಮೇಲೆ ನಡೆಯಬಾರದು’ ಎಂದು ಬಿಜೆಪಿ ಶಾಸಕ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.
‘ರಾಜ್ಯದ ಅನೇಕ ಕಡೆಗಳಲ್ಲಿ, ಅದರಲ್ಲೂ ಮುಖ್ಯವಾಗಿ ವಸತಿ ಪ್ರದೇಶಗಳ ಬಳಿ ಬಾರ್‌ಗಳು ಮತ್ತು ಮದ್ಯದಂಗಡಿಗಳು ಬೆಳಿಗ್ಗೆ 10 ಗಂಟೆ ನಂತರ ತೆರೆಯಬೇಕು ಎಂಬ ನಿಯಮವಿದ್ದರೂ ಅದಕ್ಕೂ ಮುನ್ನವೇ ಅಂದರೆ ಮುಂಜಾನೆ 5 ಗಂಟೆಗೆ ಬಾಗಿಲು ತೆರೆಯುತ್ತಿರುವುದು ಆತಂಕದ ವಿಚಾರ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
‘ಬೆಳಗಿನ ಜಾವ ಮನೆಗಳಲ್ಲಿ ಮಕ್ಕಳು ಶಾಲೆಗೆ ಹೋಗುವ, ಗೃಹಿಣಿಯರು ಅಡುಗೆ ಮಾಡಿ ಸಂಸಾರವನ್ನು ತೂಗಿಸುವ ಸಮಯ. ಇಂತಹ ಸಮಯದಲ್ಲಿ ಮನೆಯ ಯಜಮಾನ ಅಥವಾ ಯುವಕರು ಮದ್ಯದಂಗಡಿ ಮುಂದೆ ಸರದಿಯಲ್ಲಿ ನಿಲ್ಲುವ, ಮದ್ಯ ಕುಡಿಯುವ ದೃಶ್ಯ ಆಯಾ ಕುಟುಂಬದ ನೆಮ್ಮದಿಗೆ ಕೊಳ್ಳಿ ಇಟ್ಟಂತೆ ಮಾಡುತ್ತದೆ’ ಎಂದಿದ್ದಾರೆ.
‘ನಿಯಮಗಳ ಪ್ರಕಾರ ಬಾರ್‌ಗಳು ಕಾರ್ಯ ನಿರ್ವಹಿಸಲು ಸಮಯ ನಿಗದಿ ಇದ್ದರೂ, ಬಹುತೇಕ ಕಡೆ ನಿಯಮ ಉಲ್ಲಂಘನೆಯಾಗಿ 24 ಗಂಟೆಗಳ ಕಾಲವೂ ಬಾರ್‌ಗಳು ರಾಜಾರೋಷವಾಗಿ ನಡೆಯುತ್ತಿವೆ. ಇದಕ್ಕೆ ಸಾಕ್ಷಿಯಾಗಿ ಗುರುವಾರ ಬೆಳಿಗ್ಗೆ ನನ್ನ ಕ್ಷೇತ್ರದಲ್ಲಿ ನಾನು ಕೈಗೊಳ್ಳುವ ದಿನಕ್ಕೊಂದು ವಾರ್ಡ್ ನಡಿಗೆ ಕಾರ್ಯಕ್ರಮದ ಸಂದರ್ಭದಲ್ಲಿ ಬೆಳಿಗ್ಗೆ 6.30 ಕ್ಕೆ ಬಾರ್ ತೆರೆದಿರುವುದನ್ನು ಗಮನಿಸಿದೆ. ಅಲ್ಲಿನ ಪರಿಸ್ಥಿತಿ ನೋಡಿ ಬಾರ್‌ನವರನ್ನು ತರಾಟೆಗೆ ತೆಗೆದುಕೊಂಡು ಮುಚ್ಚಿಸಬೇಕಾಯಿತು. ಅಧಿಕಾರಿಗಳು ಅಥವಾ ಬಾರ್ ಮಾಲೀಕರಿಗೆ ನಿಯಮದ ಅರಿವು ಇರಲಿಲ್ಲವೇ’ ಎಂದು ಸುರೇಶ್ ಕುಮಾರ್ ಪ್ರಶ್ನಿಸಿದ್ದಾರೆ.
‘ಕುಡಿತದ ಚಟಕ್ಕೆ ಬಲಿಯಾದವರಿಂದ ಆರ್ಥಿಕವಾಗಿ ಮತ್ತು ಮಾನಸಿಕವಾಗಿ ನಲುಗುತ್ತಿರುವ ಅದೆಷ್ಟೋ ಮಧ್ಯಮ ವರ್ಗದ ಮತ್ತು ಬಡ ಕುಟುಂಬಗಳ ಹೆಣ್ಣು ಮಕ್ಕಳು ಇಂದು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ಅವರ ಕಣ್ಣೀರು ಸರ್ಕಾರದ ಬೊಕ್ಕಸಕ್ಕೆ ಸೇರುವ ಆದಾಯಕ್ಕಿಂತ ಭಾರವಾಗಿದೆ. ಅಂತಹ ನೊಂದ ಜೀವಿಗಳ ಶಾಪ ಜನಪ್ರತಿನಿಧಿಗಳಾದ ನಮಗೆ ತಟ್ಟುವುದು ಬೇಡ. ಆದ್ದರಿಂದ ಬಾರ್‌ಗಳ ಸಮಯ ಪಾಲನೆ ಬಗ್ಗೆ ತಾವು ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು ಮತ್ತು ತಪಾಸಣೆ ನಡೆಸಲು ಅಧಿಕಾರಿಗಳಿಗೆ ಸೂಚಿಸಬೇಕು’ ಎಂದು ಅವರು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.