ಬೆಂಗಳೂರು: ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಬೆಳಗಾವಿ, ಕಲಬುರಗಿ, ರಾಯಚೂರು ಜಿಲ್ಲೆಯ ಶಾಸಕರಿಂದ ಸೋಮವಾರ ಅಭಿಪ್ರಾಯ ಸಂಗ್ರಹಿಸಿದರು.
ಶಾಸಕರಾದ ಆಸೀಫ್ ಸೇಠ್, ವಿಶ್ವಾಸ್ ವೈದ್ಯ, ಲಕ್ಷ್ಮಣ ಸವದಿ, ಅಜಯ್ ಸಿಂಗ್ ಮತ್ತಿತರರು ಸುರ್ಜೇವಾಲಾ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದರು. ಕ್ಷೇತ್ರದಲ್ಲಿ ಸಾಧನೆ, ಕಳೆದ ಎರಡು ವರ್ಷಗಳಲ್ಲಿ ಮಾಡಿದ ಕಾಮಗಾರಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮುಂತಾದ ವಿಷಯಗಳ ಬಗ್ಗೆ ಸುರ್ಜೇವಾಲಾ ಅವರಿಗೆ ಮಾಹಿತಿ ನೀಡಿದರು.
ಸುರ್ಜೇವಾಲಾ ಅವರನ್ನು ಭೇಟಿ ಮಾಡಿದ ಲಕ್ಷ್ಮಣ ಸವದಿ, ‘ಮುಖ್ಯಮಂತ್ರಿ ಸ್ಥಾನ ಬದಲಾವಣೆ ವಿಚಾರ ಗೊಂದಲ ಉಂಟು ಮಾಡುತ್ತಿದೆ. ಈ ಬಗ್ಗೆ ಹೈಕಮಾಂಡ್ ಗಮನಹರಿಸಬೇಕು. ಕಾರ್ಯಕರ್ತರು, ಮುಖಂಡರ ಗೊಂದಲ ನಿವಾರಿಸಬೇಕು’ ಎಂದು ಮನವಿ ಮಾಡಿದ್ದಾರೆ ಎಂದು ಗೊತ್ತಾಗಿದೆ.
‘ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಕೆಲವು ಸಚಿವರು ಇನ್ನಷ್ಟು ಚುರುಕಿನಿಂದ ಕೆಲಸ ಮಾಡಬೇಕು. ಗ್ಯಾರಂಟಿಗಳಿಂದ ಜನಸಾಮಾನ್ಯರಿಗೆ ಅನುಕೂಲ ಆಗಿದೆ. ಮತ್ತೊಂದು ಕಡೆ ಶಾಸಕರ ಅನುದಾನಕ್ಕೆ ಕಷ್ಟವಾಗುತ್ತಿದೆ. ನನ್ನ ಕ್ಷೇತ್ರದಲ್ಲಿಯೂ ಸಮಸ್ಯೆಗಳಿವೆ. ಬಿಜೆಪಿಯಲ್ಲಿ ನಾನು ಉಪ ಮುಖ್ಯಮಂತ್ರಿ ಆಗಿದ್ದವನು. ಸಂಪುಟ ಪುನರ್ ರಚನೆಯ ವೇಳೆ ಆದ್ಯತೆ ನೀಡಬೇಕು’ ಎಂದೂ ತಮ್ಮ ಕೋರಿಕೆ ಮುಂದಿಟ್ಟಿದ್ದಾರೆ ಎಂದು ಗೊತ್ತಾಗಿದೆ.
ಸುರ್ಜೇವಾಲ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಲಕ್ಷ್ಮಣ ಸವದಿ, ‘ಕ್ಷೇತ್ರದ ಅಭಿವೃದ್ಧಿ, ಪಕ್ಷ ಸಂಘಟನೆ ಬಗ್ಗೆ ಚರ್ಚೆ ನಡೆಯಿತು. ಮುಂದಿನ ದಿನಗಳಲ್ಲಿ ಹೇಗೆ ಪಕ್ಷ ಸಂಘಟನೆ ಮಾಡಬೇಕು, ಸ್ಥಳೀಯ ಚುನಾವಣೆ, ವಿಧಾನಸಭೆ ಚುನಾವಣೆ ಗೆಲ್ಲಲು ಏನೆಲ್ಲಾ ಕಾರ್ಯತಂತ್ರ ರೂಪಿಸಬೇಕು ಎಂಬ ಬಗ್ಗೆ ವಿಚಾರವಿನಿಮಯ ಮಾಡಿದ್ದೇವೆ’ ಎಂದರು.
‘ಕಲ್ಯಾಣ ಕರ್ನಾಟಕ ಅಭಿವೃದ್ಧಿ, ಪಕ್ಷ ಸಂಘಟನೆ ಕುರಿತು ಚರ್ಚೆ ಮಾಡಿದರು’ ಎಂದು ಅಜಯ್ ಸಿಂಗ್ ತಿಳಿಸಿದರೆ, ‘ಮುಖ್ಯಮಂತ್ರಿಯವರು ಅನುದಾನ ಚೆನ್ನಾಗಿ ನೀಡುತ್ತಿದ್ದಾರೆ. ಆದರೆ, ಜನರಿಂದ ಬಹಳಷ್ಟು ಬೇಡಿಕೆಗಳಿವೆ. ಹೀಗಾಗಿ, ಇನ್ನೊಂದಷ್ಟು ಅನುದಾನದ ಅಗತ್ಯವಿದೆ ಎಂದು ಮನವಿ ಮಾಡಿದ್ದೇನೆ’ ಎಂದು ಆಸೀಫ್ ಸೇಠ್ ತಿಳಿಸಿದರು.
ವಿಧಾನ ಪರಿಷತ್ ಸ್ಥಾನದ ಆಕಾಂಕ್ಷಿಯಾಗಿರುವ ನಟರಾಜ್ ಗೌಡ ಅವರು ಸುರ್ಜೇವಾಲಾ ಅವರನ್ನು ಭೇಟಿ ಮಾಡಿ, ತಮ್ಮ ಅಪೇಕ್ಷೆ ತಿಳಿಸಿದರು. ‘ಪರಿಷತ್‌ನಲ್ಲಿ ಖಾಲಿ ಇರುವ 4 ಸ್ಥಾನಗಳಿಗೆ ಈಗಾಗಲೇ ಆಯ್ಕೆ ಮಾಡಿರುವ ಕೆಲವರು ಪಕ್ಷದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿಲ್ಲ. ನಾನು ಕಳೆದ 10 ವರ್ಷಗಳಿಂದ ಪಕ್ಷದಲ್ಲಿ ಕೆಲಸ ಮಾಡುತ್ತಿದ್ದೇನೆ’ ಎಂದೂ ಹೇಳಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.