ಬೆಂಗಳೂರು: ಪಕ್ಷ ಸಂಘಟನೆ ಮತ್ತು ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಕುರಿತಂತೆ ಸೋಮವಾರದಿಂದ (ಜುಲೈ 7) ಮೂರು ದಿನ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಪಕ್ಷದ ಶಾಸಕರಿಂದ ಅಭಿಪ್ರಾಯ ಸಂಗ್ರಹಿಸಲಿದ್ದಾರೆ.
ಈ ಬಾರಿ ಸುರ್ಜೇವಾಲಾ ಅವರು ಒಟ್ಟು 61 ಶಾಸಕರಿಂದ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಈ ಅವಧಿಯಲ್ಲಿ ಕಲಬುರಗಿ, ಬೆಳಗಾವಿ, ರಾಯಚೂರು, ಯಾದಗಿರಿ, ಕೊಪ್ಪಳ, ದಾವಣಗೆರೆ, ಚಿತ್ರದುರ್ಗ, ಉತ್ತರ ಕನ್ನಡ, ತುಮಕೂರು ಶಿವಮೊಗ್ಗ, ಹುಬ್ಬಳ್ಳಿ-ಧಾರವಾಡ ಜಿಲ್ಲೆಗಳ ಶಾಸಕರೊಂದಿಗೆ ಅವರು ಸಭೆ ನಡೆಸಲಿದ್ದಾರೆ.
ಕಳೆದ ಎರಡು ವರ್ಷದಲ್ಲಿ ತಮ್ಮ ಕ್ಷೇತ್ರದಲ್ಲಿ ಮಾಡಿರುವ ಸಾಧನೆ, ಭವಿಷ್ಯದ ಯೋಜನೆಗಳು, ಕ್ಷೇತ್ರದಲ್ಲಿ ಕೆಲಸ ಮಾಡಲು ಉಂಟಾಗುತ್ತಿರುವ ಅಡ್ಡಿಗಳು, ಸರ್ಕಾರ ಹಾಗೂ ಉಸ್ತುವಾರಿ ಸಚಿವರ ಸ್ಪಂದನೆ, ಅಧಿಕಾರಿಗಳ ಸಹಕಾರದ ಬಗ್ಗೆ ಸಿದ್ಧ ಪ್ರಶ್ನಾವಳಿ ಮೂಲಕ ಸುರ್ಜೆವಾಲಾ ಅವರು ಮಾಹಿತಿ ಸಂಗ್ರಹಿಸಲಿದ್ದಾರೆ.
ಸರ್ಕಾರದ ಆಡಳಿತ ವೈಫಲ್ಯದ ಬಗ್ಗೆ ಶಾಸಕರಾದ ಬಿ.ಆರ್. ಪಾಟೀಲ ಮತ್ತು ರಾಜು ಕಾಗೆ ಅವರು ಬಹಿರಂಗವಾಗಿ ಆರೋಪ ಮಾಡಿದ ಬೆನ್ನಲ್ಲೇ ಹಲವು ಶಾಸಕರು ಅನುದಾನ ಕೊರತೆ, ಸಚಿವರ ಅಸಹಕಾರ, ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಅಸಮಾಧಾನ ತೋಡಿಕೊಂಡಿದ್ದರು. ಈ ಕಾರಣಕ್ಕೆ ರಾಜ್ಯಕ್ಕೆ ಬಂದಿದ್ದ ಸುರ್ಜೇವಾಲಾ ಅವರು ಜೂನ್ 30ರಿಂದ ಮೂರು ದಿನ ಬೆಂಗಳೂರು, ಮೈಸೂರು ವಿಭಾಗದ 42 ಶಾಸಕರೊಂದಿಗೆ ಸಭೆ ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.