ADVERTISEMENT

ಕೊಡವ ಸಮುದಾಯವನ್ನು ಬುಡಕಟ್ಟು ಜಾತಿಗೆ ಸೇರಿಸುವ ಸಮೀಕ್ಷೆ ಪರಿಶೀಲಿಸಿ: ಸೂಚನೆ

ಕೊಡವ ಸಮುದಾಯವನ್ನು ಬುಡಕಟ್ಟು ಜಾತಿಗಳ ಪಟ್ಟಿಗೆ ಸೇರಿಸಲು ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2021, 20:24 IST
Last Updated 20 ಜುಲೈ 2021, 20:24 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಕೊಡವ ಸಮುದಾಯವನ್ನು ಬುಡಕಟ್ಟು ಜಾತಿಗಳ ಪಟ್ಟಿಗೆ ಸೇರಿಸುವ ಉದ್ದೇಶದಿಂದ ಕರ್ನಾಟಕ ಬುಡಕಟ್ಟು ಸಂಶೋಧನಾ ಸಂಸ್ಥೆ ನಡೆಸಿರುವ ಸಮೀಕ್ಷೆ ಸರಿಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಈ ಸಂಬಂಧ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿವೇವಾರಿ ಮಾಡಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ‘ಈಗಾಗಲೇ ನಡೆಸಿರುವ ಸಮೀಕ್ಷೆಯಲ್ಲಿ ಲೋಪ ಕಂಡು ಬಂದರೆ ಹೊಸ ಸಮೀಕ್ಷೆಗೆ ಆದೇಶಿಸಲು ಸರ್ಕಾರ ಮುಕ್ತವಾಗಿದೆ’ ಎಂದು ತಿಳಿಸಿತು.

2016ರ ಡಿಸೆಂಬರ್ 1ರಂದು ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶದಲ್ಲಿ ನಿಗದಿಪಡಿಸಿರುವ ನಿಯಮಗಳ ಪ್ರಕಾರ ಸಮೀಕ್ಷೆ ನಡೆಸಿಲ್ಲ ಎಂದು ಆರೋಪಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಅರ್ಜಿ ಸಲ್ಲಿಸಿತ್ತು. ‘ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿ ಆಧರಿಸಿ ಸಮೀಕ್ಷೆ ನಡೆಸಬೇಕು. ಆದರೆ, ಸಮೀಕ್ಷೆಗೆ ಸಿದ್ಧಪಡಿಸಿದ್ದ ನಮೂನೆಯೇ ದೋಷಯುಕ್ತವಾಗಿತ್ತು. ಅದರ ಆಧಾರದಲ್ಲಿ ನಡೆಸಿರುವ ಸಮೀಕ್ಷೆಯಿಂದ ಯಾವ ಪ್ರಯೋಜನವೂ ಆಗದು’ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.

ADVERTISEMENT

2021ರ ಜೂನ್‌ 5ರಂದು ಸಮೀಕ್ಷಾ ವರದಿ ಸರ್ಕಾಕಕ್ಕೆ ಸಲ್ಲಿಕೆಯಾಗಿದೆ ಎಂಬುದನ್ನು ಗಮನಿಸಿದ ಪೀಠ, ‘ಕೊಡವ ಸಮುದಾಯವನ್ನು ಬುಡಕಟ್ಟು ಸಮುದಾಯಗಳ ಪಟ್ಟಿಗೆ ಸೇರಿಸಲು ಸಮೀಕ್ಷಾ ವರದಿಯ ಹೊರತಾಗಿಯೂ ಹಲವು ಅಂಶಗಳನ್ನು ಪರಿಗಣಿಸಬೇಕಾಗುತ್ತದೆ. ಜೊತೆಗೆ ತನ್ನ ಆದೇಶದ ಪ್ರಕಾರ ಸಮೀಕ್ಷೆ ನಡೆದಿದೆಯೇ ಎಂಬುದನ್ನೂ ಸರ್ಕಾರ ಪರಿಶೀಲಿಸಬೇಕಾಗುತ್ತದೆ’ ಎಂದು ತಿಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.