
ಬೆಳಗಾವಿ: 'ಮುಖ್ಯಮಂತ್ರಿ ಪಟ್ಟ ಉಳಿಸಿಕೊಳ್ಳುವ ಭರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅದೇ ಕುರ್ಚಿ ಕಬಳಿಸುವಲ್ಲಿ ಡಿ.ಕೆ.ಶಿವಕುಮಾರ್ ಕಾಲ ಕಳೆಯುತ್ತಿದ್ದಾರೆ. ಪ್ರತಿಪಕ್ಷದವರು ಏನೇ ಪ್ರಶ್ನೆ ಮಾಡಿದರೂ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುತ್ತಾರೆ. ಎಲ್ಲವನ್ನೂ ಕೇಂದ್ರವೇ ಮಾಡುವುದಾದರೆ ಮುಖ್ಯಮಂತ್ರಿ ಏಕೆ ಬೇಕು?' ಎಂದಯ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ಕಿಡಿ ಕಾರಿದರು.
ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಸಿ.ಎಂ ಮತ್ತು ಡಿ.ಸಿ.ಎಂ ಇಬ್ಬರೂ ತಮ್ಮ ತಮ್ಮ ವಾದಗಳಲ್ಲಿ ನಿಸ್ಸೀಮರಾಗಿದ್ದಾರೆ. ರಾಜ್ಯದ ಜನರ ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಸದನದಲ್ಲಿ ರಾಜ್ಯದ ಜ್ವಲಂತ ಸಮಸ್ಯೆಗಳ ಚರ್ಚೆ ಆಗಬೇಕು ಎಂದು ಪಟ್ಟು ಹಿಡಿಯುತ್ತೇವೆ' ಎಂದರು.
'ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಎಲ್ಲ ಸಮಸ್ಯೆಗೆ ಪರಿಹಾರ ಕೊಡುತ್ತೇವೆ ಎಂದು ಸುಳ್ಳು ಭರಸೆ ಕೊಟ್ಟು ಅಧಿಕಾರಕ್ಕೆ ಬಂದರು. ನಿರುದ್ಯೋಗ, ನೀರಾವರಿ, ನೇಕಾರ ಸಮಸ್ಯೆ, ರೈತರ ಸಮಸ್ಯೆಗೆ ಯಾವುದೂ ಈಡೇರಿಲ್ಲ. ಬದಲಾಗಿ, ಇವುಗಳ ಬಗ್ಗೆ ಪ್ರಧಾನಿ ಅವರಿಗೆ ಪತ್ರ ಬರೆಯುವುದು ಅದರಲ್ಲಿ ನಿಸ್ಸೀಮರಾಗಿದ್ದಾರೆ. ಅವರು ರಾಜ್ಯದ ಸಿ.ಎಂ ಎಂಬುದನ್ನೇ ಮರೆತುಬಿಟ್ಟಿದ್ದಾರೆ. ಇದೆಲ್ಲವನ್ನೂ ಖಂಡಿಸಿ ಡಿ.9ರಂದು ರೈತರೊಂದಿಗೆ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುತ್ತೇವೆ. ಆಂತರಿಕ ಕಚ್ಚಾಟದಲ್ಲಿ ತೊಡಗಿ ರೈತರ ಸಮಸ್ಯೆಗಳಿಗೆ ಸ್ಪಂದಿಸದರಿಗೆ ಬುದ್ಧಿ ಕಲಿಸುತ್ತೇವೆ' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.