ADVERTISEMENT

ಬಡ ಮಕ್ಕಳ ಮಠಕ್ಕೆ ಕರೆತಂದರು ಸಿದ್ಧಗಂಗರು..ಎಸ್‌ಐಟಿ ನಿರ್ದೇಶಕ ಚನ್ನಬಸಪ್ಪ ಮಾತು

ಡಿ.ಎಂ.ಕುರ್ಕೆ ಪ್ರಶಾಂತ
Published 21 ಜನವರಿ 2019, 16:03 IST
Last Updated 21 ಜನವರಿ 2019, 16:03 IST
ಚನ್ನಬಸಪ್ಪ
ಚನ್ನಬಸಪ್ಪ   

ಸಿದ್ಧಗಂಗಾ ತಾಂತ್ರಿಕ ಕಾಲೇಜಿನ (ಎಸ್‌ಐಟಿ) ನಿರ್ದೇಶಕ ಚನ್ನಬಸಪ್ಪ ಅವರು ಶಿವಕುಮಾರ ಸ್ವಾಮೀಜಿ ಅವರ ನಿಕಟವರ್ತಿ ಮತ್ತು ಆಪ್ತ ಬಳಗದವರು. ತಮ್ಮ ಬದುಕಿನ ಮೇಲೆ ಪ್ರಭಾವ ಬೀರಿದ ಸ್ವಾಮೀಜಿ ಅವರ ಬಗ್ಗೆ ಚನ್ನಬಸಪ್ಪ ಅವರು ಇಲ್ಲಿ ಮಾತನಾಡಿದ್ದಾರೆ.

*****

ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕಿನ ಮಾಡ್ರಳ್ಳಿ ನಮ್ಮ ಊರು. ನಮ್ಮ ತಂದೆ ಸಾಧಾರಣ ರೈತರು. 1941 ಮೇ 1 ರಂದು ನಾಲ್ಕನೇ ತರಗತಿ ಓದಲು ಸಿದ್ಧಗಂಗಾ ಮಠಕ್ಕೆ ಬಂದೆ. ಅದಾಗಲೇ ಮಲ್ಲೇದೇವರು ಎಂಬುವವರು ನಮ್ಮ ಭಾಗದಿಂದ ಬಂದು ಮಠದಲ್ಲಿ ಕಲಿತ್ತಿದ್ದರು. ಅವರು ಸ್ವಾಮೀಜಿ ಸಮಕಾಲೀನರು. ನಾನು, ರುದ್ರಾರಾಧ್ಯ, ಸೋಮಶೇಖರಯ್ಯ ಬಂದೆವು. ನಾನು ಮಾತ್ರ ಮಿಡ್ಲಿ ಸ್ಕೂಲ್. ಉಳಿದವರು ಹೈಸ್ಕೂಲ್. ಸಂಸ್ಕೃತ ಪಾಠಶಾಲೆ ಮಾತ್ರ ಇತ್ತು. ಯಾವುದೇ ಶಿಕ್ಷಣ ಸಂಸ್ಥೆಗಳು ಇರಲಿಲ್ಲ.

ADVERTISEMENT

ಊರಿನಿಂದ ಅದೇ ಮೊದಲ ಬಾರಿ ರೈಲು ‌ಹತ್ತಿ ಕ್ಯಾತ್ಸಂದ್ರದಲ್ಲಿ ಇಳಿದು ಮಠಕ್ಕೆ ಹೊರಟೆವು. ಓಣಿಯಂತಹ ರಸ್ತೆ. ಬೆಟ್ಟದ ಮೇಲೆ ಮತ್ತು ಮಠದ ಬಳಿ ಒಂದು ವಿದ್ಯುತ್ ದೀಪ ಅಷ್ಟೇ. ಮಠಕ್ಕೆ ಬರುತ್ತಿದ್ದಂತೆ ನಗಾರಿ ಬಾರಿಸಿದರು. ‘ಊಟಕ್ಕೆ ಬರೋರು ಎಲ್ಲ ಬನ್ರಯ್ಯೋ...’ ಎಂದು ಕೂಗಿದರು. ನೇರವಾಗಿ ಊಟಕ್ಕೆ ಹೋದೆವು. ಮರು ದಿನ ಸ್ವಾಮೀಜಿ ಭೇಟಿ ಮಾಡಿದೆವು. ನಮ್ಮ ತಂದೆ ‘ಬುದ್ಧಿ ಇವನು ಚೆನ್ನಾಗಿ ಓದುತ್ತಾನೆ. ವಿದ್ಯಾಭ್ಯಾಸದಲ್ಲಿ ಇಲ್ಲಿಯವೆಗೂ ಮೊದಲಿಗನಾಗಿದ್ದಾನೆ’ ಎಂದರು.

ಸ್ವಾಮೀಜಿ ಹಾಗೋ ಎಂದು, ಲೆಕ್ಕ, ಕಾಗುಣಿತ ಹೀಗೆ ಕೆಲವು ಪರೀಕ್ಷೆಗಳನ್ನು ಮಾಡಿದರು. ಉತ್ತಮವಾಗಿ ಉತ್ತರಿಸಿದೆ ಭೇಷ್ ಎಂದರು. ಪಾಠ ಸರಿಯಾಗಿ ಓದುತ್ತಿರಲಿಲ್ಲ ಅಂದರೆ ಕಿವಿ ಹಿಂಡುತ್ತಿದ್ದರು. ಬೆಳಿಗ್ಗೆ ಮತ್ತು ಸಂಜೆ ಆಗ ಪ್ರಾರ್ಥನೆ ನಡೆಯುತ್ತಿತ್ತು. ಇಂಗ್ಲಿಷ್ ಮತ್ತು ಸಂಸ್ಕೃತವನ್ನು ಸ್ವಾಮೀಜಿ ಹೇಳಿಕೊಡುತ್ತಿದ್ದರು.

ಕ್ಯಾತ್ಸಂದ್ರಕ್ಕೆ ನಾಲ್ಕನೇ ತರಗತಿಗೆ ಬರುತ್ತಿದ್ದೆ. ನಂತರ ಮಠದ ಅಂಗಳದಲ್ಲಿಯೇ ಪ್ರಾಥಮಿಕ ಶಾಲೆ ಆರಂಭವಾಯಿತು. ನಾನು ಆ ಶಾಲೆಯ ಮೊದಲ ಬ್ಯಾಚಿನ ವಿದ್ಯಾರ್ಥಿ. ಮಠದಲ್ಲಿ ಹೆಚ್ಚು ಅಂದರೆ 100 ವಿದ್ಯಾರ್ಥಿಗಳು ಇದ್ದೆವು. ಹೈಸ್ಕೂಲ್‌ಗೆ ಬರಿಗಾಲಿನಲ್ಲಿ ನಡೆದು ನಗರಕ್ಕೆ ಹೋಗುತ್ತಿದ್ದೆವು.

ಆಗ ಸ್ವಾಮೀಜಿ ಕುದುರೆ, ಎತ್ತಿನಗಾಡಿಯಲ್ಲಿ ಭಕ್ತರ ಮನೆಗಳಿಗೆ ಹೋಗುತ್ತಿದ್ದರು. ಭಕ್ತರು ಅವರ ಶಕ್ತಾನುಸಾರ ರಾಗಿ, ಭತ್ತ ಹೀಗೆ ದವಸ ಧಾನ್ಯ ಕೊಡುತ್ತಿದ್ದರು. ಸ್ವಾಮೀಜಿ, ಬಡವರ ಮನೆಗಳಿಗೆ ಹೋಗಿ ‘ಎಷ್ಟು ಮಕ್ಕಳು ಇದ್ದಾರೋ. ಶಿಕ್ಷಣ ಕೊಡಿಸುತ್ತೀಯಾ. ಅವರನ್ನು ಮಠಕ್ಕೆ ಕಳುಹಿಸು’ ಎಂದು ಕರೆತರುತ್ತಿದ್ದರು.

ಅಡುಗೆ ಮನೆ ಸಣ್ಣದು. ಅಲ್ಲಿಯೇ ಅಡುಗೆ ತಯಾರಿ ಮತ್ತು ಊಟ. ಸ್ವಾಮೀಜಿಯೇ ಎಷ್ಟೋ ಸಲ ಮುದ್ದೆ ಮಾಡಿದ್ದು ಇದೆ. ಈಗ 9 ಸಾವಿರ ವಿದ್ಯಾರ್ಥಿಗಳು ಇದ್ದಾರೆ. ‌ಆಗ ಕಡಿಮೆ ಮಕ್ಕಳು ಇದ್ದ ಕಾರಣ ಎಲ್ಲರೂ ಅವರಿಗೆ ಪರಿಚಿತರೆ.

ತುಮಕೂರು ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎಸ್ಸಿ ಪೂರ್ಣಗೊಳಿಸಿದೆ. ಬೆಂಗಳೂರು ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೀಟು ಸಿಕ್ಕಿತ್ತು. ಆದರೆ ಓದಲು ಶಕ್ತಿ ಇರಲಿಲ್ಲ. ಒಂದು ವೇಳೆ ಎಂಜಿನಿಯರಿಂಗ್‌ಗೆ ಹೋಗಿದ್ದರೆ ಮಠದಿಂದಲೇ ನೆರವು ಸಿಗುತ್ತಿತ್ತು. ಆಗ ಪ್ರಾಂಶುಪಾಲರಾಗಿದ್ದ ನಾಗಪ್ಪ ಅವರು ಎಂಜಿನಿಯರಿಂಗ್ ಏಕೆ ಹೋಗುವೆ ಗಣಿತ ಓದು ಎಂದು ಪ್ರೋತ್ಸಾಹಿಸಿದರು.

ಚನ್ನಬಸಪ್ಪ ಏನು ಕೆಲಸ ಕೊಟ್ಟರೂ ಪ್ರಾಮಾಣಿಕವಾಗಿ ಸರಿಯಾಗಿ ಮಾಡುತ್ತಾನೆ ಎನ್ನುವುದು ಸ್ವಾಮೀಜಿ ಅವರಿಗೆ ನನ್ನ ಬಗ್ಗೆ ಇದ್ದ ಅಭಿಪ್ರಾಯ. ಆಗಲೇ ಮಠದಲ್ಲಿ ಹುಡುಗರಿಗೆ ಪಾಠ ಹೇಳಿಕೊಡುತ್ತಿದ್ದೆ. ಆಗ ಉಪನ್ಯಾಸಕ ಆಗಬೇಕಾದರೆ ಎಂಎಸ್ಸಿ ಪೂರ್ಣವಾಗಬೇಕಿತ್ತು. ಆದರೆ ನಾನು ಬಿಎಸ್ಸಿಯಲ್ಲಿ ಫಸ್ಟ್‌ಕ್ಲಾಸ್ ಬಂದಿದ್ದರಿಂದ ತುಮಕೂರು ಪ್ರಥಮ ದರ್ಜೆ ಕಾಲೇಜಿನಲ್ಲಿ ಗಣಿತ ಉಪನ್ಯಾಸಕನಾಗಿ ಕೆಲಸ ಸಿಕ್ಕಿತು.ನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಹೋದೆ. ₹ 100 ಸಂಬಳ.

ಹಳೇ ಮೈಸೂರು ಬ್ಯಾಂಕ್ ಹಿಂಭಾಗದಲ್ಲಿ ಮಂಗಳೂರಿನವರ ಒಂದು ಹೋಟೆಲ್ ಇತ್ತು. ತಿಂಗಳಿಗೆ ₹ 45 ಕೊಟ್ಟು ಊಟ, ವಸತಿ ವ್ಯವಸ್ಥೆ ಮಾಡಿಕೊಂಡೆ. ಎಂಎಲ್‌ಸಿ ಕೆಂಪಹೊನ್ನಯ್ಯ ಅವರು ಮಠದ ಭಕ್ತರು. ಅವರ ಮಗಳದ್ದು ಬಿಎ ಆಗಿತ್ತು. ಮದುವೆಗೆ ಹುಡುಗನನ್ನು ಹುಡುಕುತ್ತಿದ್ದರು. ಮಠದಲ್ಲಿ ಒಬ್ಬ ಹುಡುಗ ಇದ್ದಾನೆ. ಓದಿದ್ದಾನೆ ಎನ್ನುವುದು ತಿಳಿದು ನನ್ನ ಬಳಿಗೆ ಮದುವೆ ಪ್ರಸ್ತಾಪ ತಂದರು. ಸ್ವಾಮೀಜಿ ಸಹ ಒಪ್ಪಿದರು. ಮದುವೆ ಆಯಿತು.

ಸೆಂಟ್ರಲ್ ಕಾಲೇಜಿನಲ್ಲಿ ಗಣಿತ ವಿಭಾಗದಲ್ಲಿ ಒಟ್ಟು 13 ಜನ ಇದ್ದೆವು. ನಾನೇ ಕೊನೆಯವರು. ಎಲ್ಲರೂ ನನ್ನ ಚಿರಂಜೀವಿ ಎಂದು ಕರೆಯುತ್ತಿದ್ದರು. ಬನರಾಸ್ ವಿಶ್ವವಿದ್ಯಾಲಯದಲ್ಲಿ ಖಾಸಗಿಯಾಗಿ ಎಂಎಸ್ಸಿ ಕಟ್ಟಿದೆ. ಮೊದಲ ವರ್ಷ 48 ಪರ್ಸೆಂಟ್ ಬಂದಿತು. ಸೆಕೆಂಡ್ ಕ್ಲಾಸ್‌ಗೆ ಬೆಲೆ ಇಲ್ಲ ಎನಿಸಿತು. ಎರಡನೇ ವರ್ಷ ಕಾಶಿಗೆ ಹೋದೆ. ಅಲ್ಲೇ ಗಟ್ಟಿಯಾಗಿ ಕುಳಿತು ಓದಬೇಕು ಎಂದು. ಎಲ್ಲರೂ ಮದುವೆಗೆ ಮುಂಚೆ ಕಾಶಿಗೆ ಹೋದರೆ ನಾನು ಮದುವೆಯಾದ ತಿಂಗಳಲ್ಲಿ ಕಾಶಿಗೆ ಹೋದೆ! ಎರಡನೇ ವರ್ಷ ಫಸ್ಟ್ ಕ್ಲಾಸ್ ಫಸ್ಟ್ ರ‍್ಯಾಂಕ್ ಬಂದೆ. ಆಗ ಫಸ್ಟ್ ಕ್ಲಾಸ್ ಫಸ್ಟ್ ರ‍್ಯಾಂಕ್ ಎಂದು ಗ್ರೇಡ್ ಇತ್ತು.

ಈ ನಡುವೆ ಪೂರ್ವ ಜರ್ಮನಿ ಸರ್ಕಾರ 50 ಜನರಿಗೆ ಸ್ಕಾಲರ್‌ಶಿಪ್ ಕೊಡಲು ಮುಂದಾಯಿತು. 48 ಜನರು ಉತ್ತರ ಭಾರತದವರು, ಮದ್ರಾಸಿನವರೊಬ್ಬರು ಮತ್ತು ನಾನು ಆಯ್ಕೆಯಾದೆವು. ಅಲ್ಲಿ ಎರಡು ವರ್ಷ ವ್ಯಾಸಂಗ ಮಾಡಿದೆ. ಅಲ್ಲಿಂದ ಬರುವರಷ್ಟರಲ್ಲಿ ವೇತನ ₹ 200 ಆಗಿತ್ತು

ಅದೇ ಸಮಯಕ್ಕೆ ಸುರತ್ಕಲ್ ಎಂಜಿನಿಯರಿಂಗ್ ಕಾಲೇಜು ಆರಂಭವಾಯಿತು. ಗಣಿತ ವಿಷಯವಾಗಿ ಸಹಾಯಕ ಪ್ರಾಧ್ಯಾಪಕರು ಬೇಕು ಎಂದು ಜಾಹೀರಾತು ನೀಡಿದ್ದರು. ನನಗೆ 28 ವರ್ಷ. ವಿಭಾಗದ ಮುಖ್ಯಸ್ಥನಾಗಿ ಆಯ್ಕೆಯಾದೆ.

ಸುರತ್ಕಲ್‌ಗೆ ಹೊರಟಾಗ ತುಂಬಾ ಜನರು ಇಲ್ಲೇ ಸೈನ್ಸ್ ಕಾಲೇಜಿದೆ, ಕೆಲಸ ಮಾಡಲಿ ಅಂದರು. ಆದರೆ ಸ್ವಾಮೀಜಿ ಬೇಡ ಇವನು ಅಲ್ಲಿ ಕೆಲಸ ಮಾಡಲಿ ಮತ್ತಷ್ಟು ಒಳ್ಳೆಯದಾಗುತ್ತದೆ ಎಂದು ಪ್ರೋತ್ಸಾಹಿಸಿದರು. 31 ವರ್ಷ ಅಲ್ಲಿ ಕೆಲಸ ಮಾಡಿದೆ. 1991ರಲ್ಲಿ ಇಲ್ಲಿಗೆ ಬಂದೆ. ಎಸ್‌ಐಟಿ ಪ್ರಾಂಶುಪಾಲನಾದೆ. 15 ವರ್ಷ ಕೆಲಸ ಮಾಡಿ ನಿವೃತ್ತನಾದೆ. ಇನ್ನೇನು ಕೆಲಸ ಕೊಡೋದಿದೆ ಇವನಿಗೆ ಎಂದು ಸ್ವಾಮೀಜಿ ನಿರ್ದೇಶಕನನ್ನಾಗಿ ಮಾಡಿದರು.

ಐಎಸ್‌ಐಟಿಯಲ್ಲಿ ನನ್ನ ಸೇರಿ ಪಿಎಚ್‌.ಡಿ ಮಾಡಿದವರು ಮೂರೇ ಜನ. ಉಪನ್ಯಾಸಕರು ಪಿಎಚ್‌.ಡಿ ಮಾಡಲು ಮೂರು ನಾಲ್ಕು ವರ್ಷ ರಜೆ ಕೊಟ್ಟು ಕಳುಹಿಸಿದರೆ ಅನುಕೂಲವಾಗುತ್ತದೆ ಎಂದು ಸ್ವಾಮೀಜಿ ಅವರಿಗೆ ಹೇಳಿದೆ. ಅವರು ತಕ್ಷಣವೇ ಒಪ್ಪಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.