ADVERTISEMENT

ಭೀಮಣ್ಣ ಖಂಡ್ರೆ ನಿಧನ: ನುಡಿನಮನ ಸಲ್ಲಿಸಿದ ಗಣ್ಯರು, ಮಠಾಧೀಶರು

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 14:33 IST
Last Updated 17 ಜನವರಿ 2026, 14:33 IST
   

ಬೀದರ್: ಶುಕ್ರವಾರ ರಾತ್ರಿ ನಿಧನರಾದ ಮಾಜಿ ಸಚಿವ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಮಾಜಿ ಅಧ್ಯಕ್ಷ ಭೀಮಣ್ಣ ಖಂಡ್ರೆ (102) ಅವರ ಅಂತ್ಯಕ್ರಿಯೆ ಇಂದು ಪಟ್ಟಣ ಹೊರವಲಯದ ಚಿಕ್ಕಲ್ ಚಾಂದ ಸಮೀಪದ ತೋಟದ ಮನೆಯ ಶಾಂತಿಧಾಮದಲ್ಲಿ ನೆರವೇರಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾಧಿ ಸ್ಥಳದಲ್ಲಿ ಐದು ವಿಭೂತಿ ಇರಿಸಿ ಅಂತ್ಯಕ್ರಿಯೆಯ ವಿಧಿ ವಿಧಾನಗಳಿಗೆ ಚಾಲನೆ ಕೊಟ್ಟರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಸಚಿವರಾದ ಈಶ್ವರ ಬಿ. ಖಂಡ್ರೆ, ಕೆ.ಜೆ. ಜಾರ್ಜ್‌, ಎಚ್.ಕೆ. ಪಾಟೀಲ್, ಲಕ್ಷ್ಮೀ ಹೆಬ್ಬಾಳಕರ್, ಶರಣಪ್ರಕಾಶ ಪಾಟೀಲ್, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ವಿವಿಧ ಮಠಾಧೀಶರು, ರಾಕೀಯ ಪಜ್ಷಗಳು, ಸಂಘ ಸಂಸ್ಥೆಗಳ ಮುಖಂಡರು ಪಾಲ್ಗೊಂಡಿದ್ದರು.

ADVERTISEMENT
ಭೀಮಣ್ಣ ಖಂಡ್ರೆಯವರು ಸಮಾಜವಾದಿ ತತ್ವಗಳಿಂದ ಪ್ರೇರೇಪಿತರಾಗಿದ್ದರು. ನೇರ, ನಿಷ್ಠುರಿಯಾಗಿದ್ದರು. ಶಿಕ್ಷಣ, ಸಹಕಾರ, ರಾಜಕೀಯ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ. ಅವರ ಶತಮಾನೋತ್ಸವ ಕಾರ್ಯಕ್ರಮಕ್ಕೆ ನಾನು ಭಾಲ್ಕಿಗೆ ಬಂದಿದ್ದೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ
ಭೀಮಣ್ಣ ಖಂಡ್ರೆಯವರು ಅವರು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ.ಅವರ ಮಕ್ಕಳಾದ ವಿಜಯಕುಮಾರ್ ಖಂಡ್ರೆ, ಈಶ್ವರ ಬಿ. ಖ.ಡ್ರೆ, ಮೊಮ್ಮಗ ಸಾಗರ ಖಂಡ್ರೆ ರಾಜಕಾರಣದಲ್ಲಿದ್ದಾರೆ. ಎಲ್ಲರೊಂದಿಗೂ ಕೆಲಸ ಮಾಡಿದ್ದೇನೆ. ಅವರ ಅಗಲಿಕೆಯಿಂದ ಪಕ್ಷ ಹಾಗೂ ಸಮಾಜಕ್ಜೆ ದೊಡ್ಡ ನಷ್ಟ ಉಂಟಾಗಿದೆ.
-ಡಿ.ಕೆ. ಶಿವಕುಮಾರ, ಉಪಮುಖ್ಯಮಂತ್ರಿ
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಮೂಲಕ ಸಮಾಜವನ್ನು ಕಟ್ಟಿದವರು ಭೀಮಣ್ಣ ಖಂಡ್ರೆ. ಅವರ ಅಗಲಿಕೆಯಿಂದ ವೀರಶೈವ ಲಿಂಗಾಯತ ಸಮಾಜದ ದೊಡ್ಡ ಕೊಂಡಿ ಕಳಚಿದೆ.
-ಬಿ.ವೈ.ವಿಜಯೇಂದ್ರ, ಅಧ್ಯಕ್ಷ, ರಾಜ್ಯ ಬಿಜೆಪಿ
ಶಾಮನೂರು ಶಿವಶಂಕರಪ್ಪ ಅವರ ನಿಧನದ ಕೆಲವೇ ದಿನಗಳ ನಂತರ ಭೀಮಣ್ಣ ಖಂಡ್ರೆ ಅವರ ಅಗಲಿಕೆ ಲಿಂಗಾಯತ ಸಮಾಜಕ್ಕಾದ ದೊಡ್ಡ ಆಘಾತ. ಸಜ್ಜನ, ಧೀಮಂತ ರಾಜಕಾರಣಿಯಾಗಿ ಸಮಾಜಕ್ಕೆ ಕೊಟ್ಟಿರುವ ಕೊಡುಗೆ ಬಹಳ ದೊಡ್ಡದು.
- ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ
ಬಡವರ ಬಗ್ಗೆ ವಿಶೇಷ ಕಾಳಜಿ, ತತ್ವನಿಷ್ಠೆ ಹೊಂದಿ ಈ ನಾಡಿಗೆ ದೊಡ್ಡ ಸೇವೆ ಸಲ್ಲಿಸಿದ್ದಾರೆ. ಶತಾಯುಷಿಗಳಾಗಿ ಆದರ್ಶ ಬದುಕು ಬದುಕಿದವರು ಭೀಮಣ್ಣ ಖಂಡ್ರೆ ಅವರು. ಶಾಸಕ, ಸಚಿವರಾಗಿ ಹಾಗೂ ಪಕ್ಷ ರಾಜಕಾರಣ, ಶಿಕ್ಷಣ, ಸಹಕಾರ ರಂಗಕ್ಕೆ ದೊಡ್ಡ ನಾಯಕತ್ಬ ಕೊಟ್ಟವರು ಭೀಮಣ್ಣ ಖಂಡ್ರೆ
-ಎಚ್.ಕೆ. ಪಾಟೀಲ್, ಸಂಸದೀಯ ಮತ್ತು ಕಾನೂನು ಸಚಿವ
ಸಮಾಜ ಸೇವೆಯ ಜೊತೆ ಅನೇಕ ಸಾಮಾಜಿಕ ಕೆಲಸ ಮಾಡಿದ್ದಾರೆ. ರಜಾಕಾರರ ವಿರುದ್ಧ ಹೋರಾಡಿದ ಅವರು ಕರ್ನಾಟಕ ಏಕೀಕರಣಕ್ಕೂ ಶ್ರಮಿಸಿದ್ದರು.
-ಶಶೀಲ್ ನಮೋಶಿ, ವಿಧಾನ ಪರಿಷತ್ ಸದಸ್ಯ
ಇಂದು ಅವರು ನಮ್ಮಿಂದ ಅಗಲಿ ಹೋಗಿದ್ದಾರೆ. ಸಾರ್ಥಕವಾದ ಬದುಕು ಬದುಕಿದ್ದಾರೆ. ಬಾಲ್ಯದಿಂದಲೇ ಸಂಘರ್ಷದ ಬದುಕು ಸವೆಸಿದ್ದರು. ಹರಿದು ಹಂಚಿ ಹೋಗಿದ್ದ ಕರ್ನಾಟಕವನ್ನು ಒಂದುಗೂಡಿಸಲು ಹೋರಾಟ ನಡೆಸಿದ್ದರು. ಅದರ ಪ್ರತಿಫಲವಾಗಿ ಬೀದರ್ ಜಿಲ್ಲೆ ಕರ್ನಾಟಕದಲ್ಲಿ ಉಳಿಯುವಂತೆ ಮಾಡಿದರು.
-ಈಶ್ವರ ಬಿ. ಖಂಡ್ರೆ, ಪರಿಸರ-ಅರಣ್ಯ ಸಚಿವ
ಭೀಮಣ್ಣ ಖಂಡ್ರೆ ಅವರದ್ದು ಶಿಸ್ತಿನ ಬದುಕಾಗಿತ್ತು. ಮಾತು ಸ್ಫೂಟ, ಹೃದಯ ಬಹಳ ಸ್ವಚ್ಛವಾದುದು. ನುಡಿದಂತೆ ನಡೆದುಕೊಳ್ಳುತ್ತಿದ್ದರು.
- ಇಳಕಲ್ ಮಹಾಂತ ತೀರ್ಥ ಸ್ವಾಮೀಜಿ
ಭೀಮಣ್ಣ ಖಂಡ್ರೆಯವರು ನೈತಿಕ ರಾಜಕಾರಣಿಯಾಗಿದ್ದರು. ಅವರು ಬಹಳ ಶುದ್ಧ ಹಸ್ತದಿಂದ ರಾಜಕಾರಣ ಮಾಡಿದ್ದರು. ಇಂದಿನ ರಾಜಕಾರಣಿಗಳಿಗೆ ಅವರು ಮಾದರಿ.
-ನಿಜಗುಣಪ್ರಭು ಸ್ವಾಮೀಜಿ, ಬೈಲೂರು ನಿಷ್ಕಲಮಂಟಪ
ಬಸವಾದಿ ಪರಂಪರೆಯ ಅನುಯಾಯಿಯಾಗಿದ್ದ ಭೀಮಣ್ಣ ಖಂಡ್ರೆಯವರು ಸಾತ್ವಿಕ ಜೀವನ ಸವೆಸಿದ್ದರು. ಬಸವತತ್ವ ಪ್ರಚಾರಕ್ಕಾಗಿ ಶ್ರಮಿಸಿದ್ದ ಅವರ ಅಗಲಿಕೆ ದೊಡ್ಡ ನಷ್ಟ.
-ಮಾತೆ ಗಂಗಾದೇವಿ, ಕೂಡಲಸಂಗಮ ಬಸವಧರ್ಮ ಪೀಠದ ಪೀಠಾಧ್ಯಕ್ಷೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.