
ಬೆಂಗಳೂರು: ‘ಸ್ವಾಮೀಜಿಗಳು ಒಬ್ಬ ವ್ಯಕ್ತಿ, ರಾಜಕಾರಣಿಯ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸುವುದನ್ನು ಬಿಡಬೇಕು. ಕಾಂಗ್ರೆಸ್‌ನ ಆಂತರಿಕ ಕಲಹದಲ್ಲಿ ಸ್ವಾಮೀಜಿಗಳ ಮಧ್ಯಪ್ರವೇಶ ಅನಗತ್ಯ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ರಾಜಕಾರಣಿಗಳು ರಾಜಕಾರಣ ಮಾಡಿಕೊಳ್ಳುತ್ತಾರೆ. ಧರ್ಮಾಧಿಕಾರಿಗಳು ಮತ್ತು ಸ್ವಾಮೀಜಿಗಳು ಧಾರ್ಮಿಕ ಕೆಲಸಗಳನ್ನು ಮಾಡಬೇಕು. ರಾಜಕಾರಣಿಗಳ ಪರವಾಗಿ ಮಾತನಾಡುವ ವ್ಯಾಮೋಹ ಬಿಡಬೇಕು’ ಎಂದರು.
‘ಜಾತಿ–ಧರ್ಮಗಳ ಹೆಸರು ಹೇಳಿಕೊಂಡು ಧಾರ್ಮಿಕ ಕ್ಷೇತ್ರಗಳನ್ನು ದುರುಪಯೋಗ ಮಾಡಿಕೊಳ್ಳುವುದು, ಅದರ ಆಧಾರದಲ್ಲಿ ರಾಜಕಾರಣ ಮಾಡುವುದು ಯಾರಿಗೂ ಶೋಭೆ ತರುವುದಿಲ್ಲ. ಸಮಾಜದಲ್ಲಿ ಜಾತಿ ಸಂಘರ್ಷಕ್ಕೆ ಯಾರೂ ಕಾರಣ ಆಗಬಾರದು. ಕಾಂಗ್ರೆಸ್ ಪಕ್ಷದ ಕಲಹದಲ್ಲಿ ಜಾತಿ–ಧರ್ಮಗಳನ್ನು ಎಳೆದು ತರಬೇಕಾಗಿಲ್ಲ. ಧರ್ಮಗುರುಗಳಿಗೆ ನಾನು ಮಾಡಿಕೊಳ್ಳುವ ಮನವಿ ಇದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘140 ಜನ ಶಾಸಕರಿದ್ದೂ ಈ ಸರ್ಕಾರ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಎರಡೂವರೆ ವರ್ಷದಲ್ಲಿ ಈ ಸರ್ಕಾರ ಮಾಡಿದ್ದು ಏನೂ ಇಲ್ಲ. ಅಧಿಕಾರಕ್ಕಾಗಿ ಕಿತ್ತಾಡಿಕೊಂಡು ಕೂತಿದ್ದಾರೆ. ಜಾತಿ ರಾಜಕಾರಣ ಜೋರಾಗಿದೆ. ಸ್ವಾಮೀಜಿಗಳು, ಮಠಗಳು ಜಾತಿ ರಾಜಕಾರಣಕ್ಕೆ ಬಳಕೆಯಾಗಬಾರದು’ ಎಂದರು.
‘ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು’ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಸ್ಫಟಿಕಪುರಿ ಮಠದ ನಂಜಾವಧೂತ ಸ್ವಾಮೀಜಿ ಆಗ್ರಹಿಸಿದ್ದರು. ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಅವರು ‘ಸಿದ್ದರಾಮಯ್ಯ ಅವರನ್ನು ಬದಲಿಸಬಾರದು’ ಎಂದು ಒತ್ತಾಯಿಸಿದ್ದರು.
ರಾಜಕಾರಣಕ್ಕೆ ಜಾತಿಯನ್ನು ತಂದೊಡಣೆ ಸಮಾಜದಲ್ಲಿ ಶಾಂತಿ ಕದಡುತ್ತದೆ. ಒಕ್ಕಲಿಗ ಕುರುಬ ಹಿಂದುಳಿದ ವರ್ಗದ ಯಾವುದೇ ಸ್ವಾಮೀಜಿ ಆದರೂ ರಾಜಕಾರಣದಿಂದ ದೂರ ಇರಬೇಕುಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವ
ಒಣಪ್ರತಿಷ್ಠೆಯಿಂದ ಗೊಂದಲ: ಅಶೋಕ
‘ರಾಜ್ಯ ಸರ್ಕಾರದ ನಾಯಕತ್ವ ಬದಲಾವಣೆ ಗೊಂದಲ ಸೃಷ್ಟಿಸಿದ್ದು ಮಾಧ್ಯಮದವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ನಿಜಕ್ಕೂ ಈ ಗೊಂದಲ ನಿರ್ಮಾಣವಾಗಿದ್ದು ಈ ಇಬ್ಬರ ಒಣಪ್ರತಿಷ್ಠೆಯಿಂದ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿದ್ದಾರೆ.
‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು ‘ನವೆಂಬರ್‌ನಲ್ಲಿ ‘ಕ್ರಾಂತಿ’ ಎಂದು ಕರೆ ನೀಡಿ ಹೇಳಿಕೆಗಳ ಮೇಲೆ ಹೇಳಿಕೆ ಕೊಟ್ಟು ಪಕ್ಷದಲ್ಲಿ ಗೊಂದಲದ ವಾತಾವರಣ ಸೃಷ್ಟಿಸಿದ್ದು ಪತ್ರಕರ್ತರಾ’ ಎಂದು ಪ್ರಶ್ನಿಸಿದ್ದಾರೆ. ‘‘ಕೊಟ್ಟ ಮಾತು ಉಳಿಸಿಕೊಳ್ಳವವನು ನಿಜವಾದ ನಾಯಕ’ ‘ಐದಾರು ಜನರ ಮಧ್ಯೆ ನಡೆದಿರುವ ವ್ಯಾಪಾರ’ ‘ಐದು ವರ್ಷ ನಾನೇ ಸಿಎಂ’ ಎಂದೆಲ್ಲಾ ಬಹಿರಂಗ ಹೇಳಿಕೆಗಳ ಮೂಲಕ ಬಿಕ್ಕಟ್ಟು ಸೃಷ್ಟಿಸಿದ್ದು ಪತ್ರಕರ್ತರಾ? ಶಕ್ತಿ ಪ್ರದರ್ಶನಕ್ಕೆಂದು ಶಾಸಕರ ಗುಂಪುಗಳನ್ನು ಕಟ್ಟಿಕೊಂಡು ದೆಹಲಿಗೆ ಹೋಗಿ ಗುಪ್ತ ಸಭೆಗಳನ್ನು ನಡೆಸಿದ್ದು ಪತ್ರಕರ್ತರಾ?’ ಎಂದು ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.