ADVERTISEMENT

ಗೋವಾಕ್ಕೆ ವಿದ್ಯುತ್ ಮಾರ್ಗ: ಅನುಮತಿ ನೀಡದಂತೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2021, 21:40 IST
Last Updated 6 ಏಪ್ರಿಲ್ 2021, 21:40 IST
ಸೌಮ್ಯಾ ರೆಡ್ಡಿ
ಸೌಮ್ಯಾ ರೆಡ್ಡಿ   

ಬೆಂಗಳೂರು: ‘ಗೋವಾ ರಾಜ್ಯಕ್ಕೆ ಹೆಚ್ಚುವರಿ ವಿದ್ಯುತ್ ಒದಗಿಸಲು ಪಶ್ಚಿಮಘಟ್ಟದ ಮೂಲಕ ಹಾದು ಹೋಗಲಿರುವ ವಿದ್ಯುತ್ ಮಾರ್ಗಕ್ಕೆ ಅನುಮತಿ ನೀಡಬಾರದು’ ಎಂದು ಶಾಸಕಿ ಸೌಮ್ಯಾ ರೆಡ್ಡಿ ಅವರು ಮುಖ್ಯಮಮತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಧಾರವಾಡ ಜಿಲ್ಲೆಯ ನರೇಂದ್ರದಿಂದ ಗೋವಾಕ್ಕೆ ವಿದ್ಯುತ್ ಮಾರ್ಗ ನಿರ್ಮಿಸಲು ಗೋವಾ ತಮ್ನಾರ್ ಟ್ರಾನ್ಸ್‌ಮಿಷನ್ ಪ್ರಾಜೆಕ್ಟ್ ಲಿಮಿಟೆಡ್ ಎಂಬ ಬಳಕೆದಾರ ಸಂಸ್ಥೆ ಗೋವಾ ಮತ್ತು ಕರ್ನಾಟಕದ ಅರಣ್ಯ ಭೂಮಿ ಪರಿವರ್ತನೆಗೆ ಅರ್ಜಿ ಸಲ್ಲಿಸಿದೆ.

‘ಧಾರವಾಡ ಜಿಲ್ಲೆಯಲ್ಲಿ ಅಂದಾಜು 4.7 ಹೆಕ್ಟೇರ್, ಬೆಳಗಾವಿ ಜಿಲ್ಲೆಯಲ್ಲಿ 101 ಹೆಕ್ಟೇರ್, ಉತ್ತರ ಕನ್ನಡ ಜಿಲ್ಲೆಯಲ್ಲಿ 70 ಹೆಕ್ಟೇರ್ ಸೇರಿ 177 ಹೆಕ್ಟೇರ್ ಅರಣ್ಯ ಪ್ರದೇಶ ಪರಿವರ್ತನೆಗೆ ಕೋರಲಾಗಿದೆ. ಬಹುಪಾಲು ಜಾಗ ಬೆಳಗಾವಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿದೆ. ದಾಂಡೇಲಿಯ ಆನೆಧಾಮ, ಭೀಮಗಢ ಅಭಯಾರಣ್ಯ, ಕಾಳಿ ಹುಲಿ ಸಂರಕ್ಷಿತ ಪ್ರದೇಶ, ದಾಂಡೇಲಿ ಅಭಯಾರಣ್ಯದ ಮೂಲಕ ಈ ಮಾರ್ಗ ಹಾದು ಹೋಗಲಿದೆ. ಆನೆ, ಹುಲಿ, ಚಿರತೆ, ಕೆನ್ನಾಯಿ, ಕಾಳಂಗಿ ಸರ್ಪ, ಮಂಗಟ್ಟೆ (ಹಾರ್ನ್‌ಬಿಲ್) ಸೇರಿ ಇನ್ನೂ ಅಳಿವಿನಂಚಿನಲ್ಲಿರುವ ಅನೇಕ ವನ್ಯಜೀವಿಗಳ ಆಶ್ರಯ ತಾಣ ಇದಾಗಿದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

‘ಅರಣ್ಯ ಭೂಮಿ ಪರಿವರ್ತನೆಗೆಸರ್ಕಾರ ಅವಕಾಶ ನೀಡಿದರೆ 60 ಸಾವಿರಕ್ಕೂ ಹೆಚ್ಚು ಮರಗಳ ಹನನವಾಗಲಿದೆ. ಅರಣ್ಯ ನಾಶವಾಗುವ ಕಾರಣಕ್ಕೆ ಗೋವಾ ರಾಜ್ಯದಲ್ಲೇ ಈ ಯೋಜನೆಗೆ ವಿರೋಧ ವ್ಯಕ್ತವಾಗುತ್ತಿದೆ. ಇನ್ನೂ ಪರಿಶೀಲನೆ ಹಂತದಲ್ಲಿರುವ ಪ್ರಸ್ತಾವನೆಯನ್ನು ಸರ್ಕಾರ ತಿರಸ್ಕರಿಸಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.