ADVERTISEMENT

ಕೃಷ್ಣಾ ನದಿಯ ನಡುಗಡ್ಡೆಯಲ್ಲಿರುವ ರೋಗಿಗೆ ಡ್ರೋಣ್‌ನಿಂದ ಮಾತ್ರೆ ರವಾನೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2020, 12:25 IST
Last Updated 21 ಆಗಸ್ಟ್ 2020, 12:25 IST
ಲಿಂಗಸುಗೂರು ತಾಲ್ಲೂಕಿನ ಕೃಷ್ಣಾನದಿ ನಡುಗಡ್ಡೆ ಕರಕಲಗಡ್ಡಿಗೆ ಡ್ರೋಣ್‌ ಬಳಸಿ ರೋಗಿಯೊಬ್ಬರಿಗೆ ಮಾತ್ರೆಗಳನ್ನು ಶುಕ್ರವಾರ ಕಳುಹಿಸಲಾಯಿತು
ಲಿಂಗಸುಗೂರು ತಾಲ್ಲೂಕಿನ ಕೃಷ್ಣಾನದಿ ನಡುಗಡ್ಡೆ ಕರಕಲಗಡ್ಡಿಗೆ ಡ್ರೋಣ್‌ ಬಳಸಿ ರೋಗಿಯೊಬ್ಬರಿಗೆ ಮಾತ್ರೆಗಳನ್ನು ಶುಕ್ರವಾರ ಕಳುಹಿಸಲಾಯಿತು   

ಲಿಂಗಸುಗೂರು (ರಾಯಚೂರು ಜಿಲ್ಲೆ): ತಾಲ್ಲೂಕಿನ ಕೃಷ್ಣಾನದಿಯ ಕರಕಲಗಡ್ಡಿ ನಡುಗಡ್ಡೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ರೋಗಿಗೆ ಡ್ರೋಣ್‌ ಮೂಲಕ ಮಾತ್ರೆ ಹಾಗೂ ಔಷಧಿಗಳನ್ನು ಶುಕ್ರವಾರ ಯಶಸ್ವಿಯಾಗಿ ತಲುಪಿಸಲಾಯಿತು.

ಕರಕಲಗಡ್ಡಿಯಲ್ಲಿ ಒಂದೇ ಕುಟುಂಬದ ನಾಲ್ಕು ಜನರು ಉಳಿದುಕೊಂಡಿದ್ದಾರೆ. ತಿಪ್ಪಣ್ಣ ಎನ್ನುವವರು ಪಾರ್ಶ್ವವಾಯುವಿನಿಂದ ಬಳಲುತ್ತಿದ್ದಾರೆ. ವೈದ್ಯರ ಸಲಹೆಯಂತೆ ಅವರು ನಿರಂತರ ತೆಗೆದುಕೊಳ್ಳುತ್ತಿದ್ದ ಮಾತ್ರೆಗಳು ಖಾಲಿಯಾಗಿದ್ದವು. ಮಾತ್ರೆಗಳನ್ನು ಕಳುಹಿಸುವ ವ್ಯವಸ್ಥೆ ಮಾಡುವಂತೆ ಉಪವಿಭಾಗಾಧಿಕಾರಿಗೆ ನಡುಗಡ್ಡೆ ಜನರು ಗುರುವಾರ ಮನವಿ ಮಾಡಿದ್ದರು.

ನಾರಾಯಣಪುರ ಜಲಾಶಯದಿಂದ 2.72 ಲಕ್ಷ ಕ್ಯುಸೆಕ್‌ ನೀರನ್ನು ಹೊರಬಿಡಲಾಗುತ್ತಿದ್ದು, ಕೃಷ್ಣಾ ನದಿಯಲ್ಲಿ ಪ್ರವಾಹ ರಭಸವಾಗಿದೆ. ಹೀಗಾಗಿ ನಡುಗಡ್ಡೆಗೆ ಬೋಟ್‌ ಹಾಕುವುದು ಅಪಾಯಕಾರಿ ಎಂದು ಎನ್‌ಡಿಆರ್‌ಎಫ್‌ ತಂಡದವರು ತಿಳಿಸಿದ್ದರು.

ADVERTISEMENT

ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಅವರುರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎನ್‌.ಕಟ್ಟಿಮನಿ ಅವರಿಗೆ ಡ್ರೋಣ್‌ ಬಳಕೆಗೆ ಸಹಕರಿಸಲು ತಿಳಿಸಿದ್ದರು. ಕೃಷಿ ತಾಂತ್ರಿಕ ಕಾಲೇಜಿನ ಡೀನ್‌ ವೀರನಗೌಡ, ಸಹಾಯಕ ಪ್ರಾಧ್ಯಾಪಕರಾದ ಅಭಿಷೇಕ್‌, ಸುನೀಲ್‌ ಶಿರವಾಳ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಡ್ರೋಣ್‌ ಕಾರ್ಯಾಚರಣೆ ನಡೆಸಿದರು.

ಕೃಷ್ಣಾನದಿ ಪ್ರವಾಹದಿಂದ ಕರಕಲಗಡ್ಡಿ, ಮ್ಯಾದರಗಡ್ಡಿ ಎರಡು ನಡುಗಡ್ಡೆಗಳಿಗೆ ಸಂಪರ್ಕ ಕಡಿತವಾಗಿದೆ. ಮ್ಯಾದರಗಡ್ಡಿಯಲ್ಲಿದ್ದ 13 ಜನರ ಪೈಕಿ ನಾಲ್ಕು ಜನರನ್ನು ಸುರಕ್ಷಿತ ಜಾಗಕ್ಕೆ ಮೂರು ದಿನಗಳ ಹಿಂದೆಯೇ ಸ್ಥಳಾಂತರ ಮಾಡಲಾಗಿದೆ. ಆನಂತರ ಪ್ರವಾಹ ಏರಿಕೆ ಆಗಿದ್ದರಿಂದ ಕಾರ್ಯಾಚರಣೆ ಸ್ಥಗಿತ ಮಾಡಲಾಯಿತು.

ನಡುಗಡ್ಡೆಯಲ್ಲೇ ಕೃಷಿ ಜಮೀನುಗಳಿದ್ದು, ಅಲ್ಲಿಯೇ ಕೆಲವು ಕುಟುಂಬಗಳು ವಾಸಿಸುತ್ತಿವೆ. ಪ್ರತಿವರ್ಷ ಪ್ರವಾಹ ಬಂದಾಗೊಮ್ಮೆ ಅಧಿಕಾರಿಗಳು ಮನವೊಲಿಸಿ ನಡುಗಡ್ಡೆಯಿಂದ ಜನರನ್ನು ಸುರಕ್ಷಿತ ಜಾಗಕ್ಕೆ ಕರೆತರುವುದು ವಾಡಿಕೆಯಾಗಿದೆ. ನಡುಗಡ್ಡೆ ಹೊರಗಡೆ ಕೃಷಿ ಜಮೀನು ಹಾಗೂ ಮನೆಗಳನ್ನು ನಿರ್ಮಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು ಎನ್ನುವುದು ಅಲ್ಲಿರುವ ಜನರ ಬೇಡಿಕೆಯಾಗಿದ್ದು, ಇದುವರೆಗೂ ಈಡೇರಿಲ್ಲ. ಅಧಿಕಾರಿಗಳು ಭರವಸೆ ನೀಡುತ್ತಾ ಬಂದಿದ್ದಾರೆ.

‌ಡ್ರೋಣ್‌ ಮೂಲಕ ನಡುಗಡ್ಡೆ ಜನರಿಗೆ ಮಾತ್ರೆಗಳನ್ನು ತಲುಪಿಸುವ ವಿಡಿಯೋ ಇದೀಗ ವೈರಲ್‌ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.