ADVERTISEMENT

ನೂರಾರು ಮರ ಕಡಿಸಿದ ತಹಶೀಲ್ದಾರ್‌: ಮಹಿಳೆ ಗೋಳಾಟ ವೈರಲ್‌

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಮರ ಕಡಿದ ವಿಡಿಯೊ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2020, 4:48 IST
Last Updated 9 ಮಾರ್ಚ್ 2020, 4:48 IST
   
""

ಗುಬ್ಬಿ: ತಾಲ್ಲೂಕಿನ ತಿಪ್ಪೂರು ಗ್ರಾಮದ ಸಿದ್ದಮ್ಮ ಅವರಿಗೆ ಸೇರಿದ 170 ಅಡಿಕೆ ಮರ ಮತ್ತು 25 ತೆಂಗಿನ ಮರಗಳನ್ನು ತಾಲ್ಲೂಕು ಆಡಳಿತ ಕಡಿದು ಹಾಕಿದೆ ಎಂಬ ವಿಡಿಯೊ ಮತ್ತು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಜಿಲ್ಲಾಧಿಕಾರಿ ಆದೇಶ ಉಲ್ಲಂಘಿಸಿ ಮಹಿಳಾ ದಿನಾಚರಣೆಯ ದಿನವೇ ಮಹಿಳೆಯ ಮೇಲೆ ತಹಶೀಲ್ದಾರ್ ಮತ್ತು ಕಂದಾಯ ನಿರೀಕ್ಷಕ, ಗ್ರಾಮ ಲೆಕ್ಕಿಗರು ದೌರ್ಜನ್ಯ ಎಸಗಿದ್ದಾರೆ ಎಂದು ಜನರು ಆರೋಪಿಸುತ್ತಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ತಹಶೀಲ್ದಾರ್ ಎಂ.ಮಮತಾ, ‘ನಾವು ಯಾವುದೇ ರೈತರ ಜಮೀನಲ್ಲಿರುವ ಅಡಿಕೆ ಮತ್ತು ತೆಂಗಿನ ಮರಗಳನ್ನು ಕಡಿದಿಲ್ಲ. ಮುಜರಾಯಿ ಇಲಾಖೆ ಸೇರಿದ ಉಡುಸಲಮ್ಮ ದೇವಸ್ಥಾನದಲ್ಲಿ ಮಾ.12 ರಂದು ಜಾತ್ರಾ ಮಹೋತ್ಸವ ಇದೆ. ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರಿಂದ ಜಿಲ್ಲಾಧಿಕಾರಿ ಅವರು ಈ ಆವರಣ ತೆರವುಗೊಳಿಸಿ ಜಾತ್ರೆ ನಡೆಯಲು ಅವಕಾಶ ಮಾಡಿಕೊಡಿ ಎಂಬ ಸೂಚಿಸಿದ್ದರು. ಆ ಮೇರೆಗೆ ದೇವಸ್ಥಾನಕ್ಕೆ ಸೇರಿರುವ ಜಾಗದಲ್ಲಿದ್ದ ಮರಗಳನ್ನು ಮಾತ್ರ ತೆರವುಗೊಳಿಸಲಾಗಿದೆ’ ಎಂದು ತಿಳಿಸಿದರು. ತೆರವಿಗೂ ಮುನ್ನ ಮರ ಬೆಳೆಸಿದ್ದ ದೇವಾಲಯದ 4 ಮಂದಿ ಅರ್ಚಕರಿಂದ ಒಪ್ಪಿಗೆ ಪತ್ರಕ್ಕೆ ಸಹಿ ಪಡೆಯಲಾಗಿದೆ. ಈ ವೇಳೆಯಲ್ಲಿ ಯಾವ ಮಹಿಳೆಯು ಸಹ ಬಂದು ಕೇಳಿರಲಿಲ್ಲ. ಇದು ನಡೆದಿರುವುದು ಮಾ.6 ರಂದು. ಆದರೆ ಮಹಿಳಾ ದಿನಾಚರಣೆಯ ದಿನ ವಿಡಿಯೊ ಚಿತ್ರೀಕರಣ ಮಾಡಿ ತಪ್ಪು ಸಂದೇಶ ಹರಡುತ್ತಿದ್ದಾರೆ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.