ಬೆಂಗಳೂರು: ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯುವ ಜತೆಗೆ, ಸಮಾಜದ ನೈತಿಕ ಮೌಲ್ಯಗಳನ್ನೂ ಮೈಗೂಡಿಸಿಕೊಳ್ಳಬೇಕು ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಹೇಳಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು ನಗರ, ಗ್ರಾಮಾಂತರ, ದಕ್ಷಿಣ ಜಿಲ್ಲೆ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಯ ಸರ್ಕಾರಿ ನೌಕರರ ಮಕ್ಕಳಿಗೆ ಶನಿವಾರ ಹಮ್ಮಿಕೊಂಡಿದ್ದ ‘ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಉತ್ತಮ ಶಿಕ್ಷಣ ಪಡೆದು ಸುಶಿಕ್ಷಿತರಾದರೆ ಸಾಲದು, ಉತ್ತಮ ಸಮಾಜ ನಿರ್ಮಾಣದತ್ತಲೂ ಚಿತ್ತ ಹರಿಸಬೇಕು. ವಿದ್ಯಾರ್ಥಿಗಳ ಆಸಕ್ತಿಗೆ ಅನುಗುಣವಾಗಿ ಕಲಿಕೆಯ ಕ್ಷೇತ್ರಗಳನ್ನು ಆಯ್ದುಕೊಳ್ಳಲು ಪೋಷಕರು ಅವಕಾಶ ಮಾಡಿಕೊಡಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಆಸಕ್ತಿ ತೋರುವ ಮಕ್ಕಳಿಗೆ ಪೂರಕ ವಾತಾವರಣ ಕಲ್ಪಿಸಬೇಕು. ಸಮಯ ವ್ಯರ್ಥ ಮಾಡದೇ ನಿರಂತರ ಅಧ್ಯಯನ ಮಾಡಿದರೆ ಜೀವನದಲ್ಲಿ ಯಶಸ್ಸು ದೊರೆಯುತ್ತದೆ ಎಂದರು.
ಪ್ರಾಸ್ತಾವಿಕ ಮಾತನಾಡಿದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ಸರ್ಕಾರಿ ನೌಕರರ ಸಂಘ ಪ್ರತಿ ವರ್ಷವೂ ನೌಕರರ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಿ, ಪ್ರೋತ್ಸಾಹ ನೀಡುತ್ತದೆ. ಇದುವರೆಗೂ 50 ಸಾವಿರ ಮಕ್ಕಳು ಸಂಘ ನೀಡುವ ನಗದು ಬಹುಮಾನದ ಪ್ರಯೋಜನ ಪಡೆದಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ 1,040 ಮಕ್ಕಳನ್ನು ಸನ್ಮಾನಿಸಲಾಯಿತು. ‘ಪ್ರಜಾವಾಣಿ’ ಪ್ರಕಾಶನ ಹೊರತಂದ ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮೀಜಿ ಅವರ ‘ನುಡಿ ಬೆಳಗು’ ಕೃತಿಯನ್ನು ಎಲ್ಲರಿಗೂ ನೀಡಲಾಯಿತು.
ಸಂಘದ ಪದಾಧಿಕಾರಿಗಳಾದ ಎಚ್. ಗಿರಿಗೌಡ, ಎಸ್. ಬಸವರಾಜು, ಮಲ್ಲಿಕಾರ್ಜುನ ಬಿ. ಬಳ್ಳಾರಿ, ವಿ.ವಿ. ಶಿವರುದ್ರಯ್ಯ, ಸುರೇಶ್ ಎಸ್. ಶೆಡಳ್ಯಾಳ, ಆರ್. ಮೋಹನ್‌ಕುಮಾರ್, ಕೆ. ಸತೀಶ್, ಹನುಮಂತರಾಯಪ್ಪ, ನಾರಾಯಣಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
ಸರ್ಕಾರಿ ನೌಕರರ ಮಕ್ಕಳು ಭವಿಷ್ಯದಲ್ಲಿ ಉತ್ತಮ ನಾಗರಿಕರಾಗಿ ಸಮಾಜ ಕಟ್ಟುವ ಕೆಲಸ ಮಾಡಬೇಕು. ಪೋಷಕರ ಕನಸು ನನಸು ಮಾಡಬೇಕು ಎನ್ನುವ ಆಶಯ ಇಟ್ಟುಕೊಂಡು ಸಂಘ ಪ್ರೋತ್ಸಾಹ ನೀಡುತ್ತಿದೆಸಿ.ಎಸ್. ಷಡಾಕ್ಷರಿ ಅಧ್ಯಕ್ಷ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.