ADVERTISEMENT

ತನ್ವೀರ್‌ ಸೇಠ್‌ ಪ್ರಕರಣ: ಬಿಎಸ್‌ವೈ–ಸಿದ್ದರಾಮಯ್ಯ ನಡುವೆ ವಾಕ್ಸಮರ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2019, 12:37 IST
Last Updated 19 ನವೆಂಬರ್ 2019, 12:37 IST
   

ಬೆಂಗಳೂರು: ಮಾಜಿ ಸಚಿವ ತನ್ವೀರ್‌ ಸೇಠ್‌ ಮೇಲಿನ ಹಲ್ಲೆ ವಿಚಾರವಾಗಿ ಮಾತನಾಡಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯನವರು ಅಧಿಕಾರದಲ್ಲಿದ್ದಾಗ ಪಿಎಫ್‌ಐ ಸಂಘಟನೆ ಸದಸ್ಯರ ಮೇಲಿನ ಮೊಕದ್ದಮೆಗಳನ್ನು ಹಿಂಪಡೆದಿದ್ದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತನ್ವೀರ್‌ ಸೇಠ್‌ ಮೇಲಿನ ಹಲ್ಲೆ ವಿಚಾರವಾಗಿ ಸೋಮವಾರ ಟ್ವಿಟ್‌ ಮಾಡಿದ್ದ ಸಿದ್ದರಾಮಯ್ಯ , 'ಶಾಸಕ‌ ತನ್ವೀರ್ ಸೇಠ್ ಮೇಲೆ ನಡೆದಿರುವ ಮಾರಣಾಂತಿಕ ಹಲ್ಲೆ ರಾಜ್ಯದಲ್ಲಿ ಕುಸಿದುಬಿದ್ದಿರುವ ಶಾಂತಿ ಮತ್ತು ಸುವ್ಯವಸ್ಥೆಗೆ ಸಾಕ್ಷಿ. ಅವರು ಶೀಘ್ರ ಗುಣಮುಖರಾಗಲಿ‌ ಎಂದು ಹಾರೈಸುತ್ತೇನೆ. ತಪ್ಪಿತಸ್ಥರನ್ನು ತಕ್ಷಣ ಬಂಧಿಸಿ, ಶಿಕ್ಷಿಸುವ ಜೊತೆಗೆ ಸಾರ್ವಜನಿಕ ಜೀವನದಲ್ಲಿರುವ ಗಣ್ಯರಿಗೆ ಸೂಕ್ತ ಭದ್ರತೆ ನೀಡಬೇಕೆಂದು ಆಗ್ರಹಿಸುತ್ತೇನೆ,' ಎಂದಿದ್ದರು.

ಸಿದ್ದರಾಮಯ್ಯನವರ ಟ್ವಿಟ್‌ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಬಿಎಸ್‌ವೈ, ’ಈ ಹಿಂದೆ ಮೈಸೂರು ಮತ್ತು ಶಿವಮೊಗ್ಗ ನಗರಗಳಲ್ಲಿ ನಡೆದಿದ್ದ ಗಲಭೆಗಳಿಗೆ ಪಿಎಫ್‌ಐ ಕಾರಣವಾಗಿತ್ತು. ಆ ಸಂಘಟನೆ ಸದಸ್ಯರ ಮೇಲಿನ ಕ್ರಿಮಿನಲ್‌ ಮೊಕದ್ದಮೆಗಳನ್ನು ಸಿದ್ದರಾಮಯ್ಯ ಹಿಂಪಡೆದಿದ್ದರು. ಈಗ ತನ್ವೀರ್‌ ಸೇಠ್‌ ಮೇಲೆ ನಡೆದಿರುವ ಮಾರಣಾಂತಿಕ ಹಲ್ಲೆಗೆ ಸಿದ್ದರಾಮಯ್ಯ ಪರೋಕ್ಷ ಬೆಂಬಲ ನೀಡುತ್ತಿದ್ದಾರಾ? ಎಂಬ ಪ್ರಶ್ನೆಗೆ ಅವರೇ ಉತ್ತರಿಸಬೇಕು,’ ಎಂದಿದ್ದಾರೆ. ತನ್ವೀರ್‌ ಸೇಠ್‌ ಮೇಲೆ ನಡೆದ ಹಲ್ಲೆಯಲ್ಲಿ ಪಿಎಫ್‌ಐ ಸಂಘಟನೆ ಸದಸ್ಯರ ಕೈವಾಡವಿದೆ ಎಂಬ ಸಂಶಯಗಳು ವ್ಯಕ್ತವಾಗಿವೆ.

ADVERTISEMENT

ಬಿಎಸ್‌ವೈಹೇಳಿಕೆಗೆ ಮಂಗಳವಾರ ಟ್ವಿಟ್‌ ಮೂಲಕವೇ ಸ್ಪಷ್ಟೀಕರಣ ನೀಡಿರುವ ಸಿದ್ದರಾಮಯ್ಯ, ’ನಾವು ಯಾವ ಕೋಮುವಾದಿ ಸಂಘಟನೆಯನ್ನು ಪೋಷಿಸಿಕೊಂಡು ಬಂದಿಲ್ಲ. ಕೋಮುವಾದಿ ಚಟುವಟಿಕೆಗಳಲ್ಲಿ ಭಾಗವಹಿಸುವ ಯಾವುದೇ ಸಂಘಟನೆಗಳಾದರೂ ಅವುಗಳ ಮೇಲೆ ಕಠಿಣ ಕಾನೂನು ಕ್ರಮ‌ ಜರುಗಿಸಲಿ. ರಾಜ್ಯದ ಮುಖ್ಯಮಂತ್ರಿಯಾಗಿರುವ ಯಡಿಯೂರಪ್ಪನವರು ಶಾಸಕರೊಬ್ಬರ ಮೇಲಿನ ಹಲ್ಲೆ ವಿಚಾರದಲ್ಲಿ ರಾಜಕೀಯ ದುರುದ್ದೇಶದಿಂದ ಕೂಡಿದ ಹೇಳಿಕೆ ನೀಡುವುದು ಸರಿಯಲ್ಲ,’ ಎಂದಿದ್ದಾರೆ.

ಒಟ್ಟಿನಲ್ಲಿ, ತನ್ವೀರ್‌ ಸೇಠ್‌ ಅವರ ಮೇಲಿನ ಹಲ್ಲೆ ವಿಚಾರ ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳಿಬ್ಬರ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.