ADVERTISEMENT

ಗೃಹ ಸಚಿವರಿಗೆ ಶಾಸಕ ತನ್ವೀರ್‌ ಸೇಠ್‌ ಪತ್ರ: ಹಲ್ಲೆ ಪ್ರಕರಣದ ತನಿಖೆಗೆ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2020, 19:51 IST
Last Updated 6 ಮಾರ್ಚ್ 2020, 19:51 IST
ತನ್ವೀರ್ ಸೇಠ್
ತನ್ವೀರ್ ಸೇಠ್   

ಮೈಸೂರು: ತಮ್ಮ ಮೇಲೆ ನಡೆದ ಹಲ್ಲೆ ‍ಪ್ರಕರಣದ ತನಿಖೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಶಾಸಕ ತನ್ವೀರ್‌ ಸೇಠ್‌, ಈ ಬಗ್ಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.

ತಮ್ಮ ಮೇಲೆ ಹಲ್ಲೆ ನಡೆಸಿ ಸಿಕ್ಕಿಬಿದ್ದ ಹಲ್ಲೆಕೋರನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಆ ಕೃತ್ಯದ ಹಿಂದಿನ ಉದ್ದೇಶ, ಸಂಘಟನೆ, ಪ್ರಮುಖರ ಪಾತ್ರದ ಕುರಿತು ಯಾವುದೇ ಅಂಶವನ್ನು ಪತ್ತೆ ಹಚ್ಚುವಲ್ಲಿ ವಿಫಲರಾಗಿದ್ದಾರೆ ಎಂದು ಅವರು ದೂರಿದ್ದಾರೆ. ಈ ಕೃತ್ಯದ ಹಿಂದಿನ ಸಂಚನ್ನು ಕೂಡಲೇ ಪತ್ತೆ ಹಚ್ಚಬೇಕು ಹಾಗೂ ತಮಗೆ ನ್ಯಾಯ ಒದಗಿಸಿಕೊಡಬೇಕು ಎಂದು ಅವರು ಪ‍ತ್ರದಲ್ಲಿ ಒತ್ತಾಯಿಸಿದ್ದಾರೆ.

ನವೆಂಬರ್ 17ರಂದು ಮೈಸೂರಿನ ಬನ್ನಿಮಂಟಪದಲ್ಲಿ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತನ್ವೀರ್‌ ಅವರ ಹತ್ಯೆ ಯತ್ನ ನಡೆದಿತ್ತು. ಹಲ್ಲೆ ನಡೆಸಿದ ಮೇಲೆ ಫರ್ಹಾನ್ ಪಾಷಾ ಎಂಬಾತ ಸಿಕ್ಕಿಬಿದ್ದಿದ್ದ. ನಂತರ, ‌ಡಿಸಿಪಿ ಆಗಿದ್ದ ಮುತ್ತುರಾಜ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಂ, ಅಬೀದ್‌ ಪಾಷಾ, ನೂರ್‌ಖಾನ್, ಮುಜೀಬ್, ಮುಜಾಮಿಲ್, ಮತಿನ್‌ಬೇಗ್‌ ಮತ್ತು ಇರ್ಫಾನ್‌ ಎಂಬುವವರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ADVERTISEMENT

ಮೈಸೂರಿನಲ್ಲಿ ಚಿಕಿತ್ಸೆ ಪಡೆದು ವಿಶ್ರಾಂತಿಗಾಗಿ ದುಬೈಗೆ ತೆರಳಿದ್ದ ಶಾಸಕ ತನ್ವೀರ್‌, ಹತ್ತು ದಿನಗಳ ಹಿಂದಷ್ಟೇ ವಾಪಸ್ಸಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.