ಬೆಂಗಳೂರು: ಮಹದೇವಪುರ ಕ್ಷೇತ್ರದ ಕುಂದುಕೊರತೆಗಳ ನಿವಾರಣೆಗೆ ಕಾರ್ಯಪಡೆ ರೂಪಿಸಲಾಗಿದೆ ಎಂದು ಶಾಸಕ ಅರವಿಂದ ಲಿಂಬಾವಳಿ ಹೇಳಿದರು.
ಮಾರತ್ತಹಳ್ಳಿಯ ನ್ಯೂ ಹಾರಿಜನ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಮಹದೇವಪುರ ಕಾರ್ಯಪಡೆಗೆಚಾಲನೆ ನೀಡಿ ಮಾತನಾಡಿದ ಅವರು, ‘ಈ ಯೋಜನೆಯಿಂದ ಆನ್ ಲೈನ್ ಮೂಲಕ ಕ್ಷೇತ್ರದ ಅಭಿವೃದ್ಧಿ, ಸಮಸ್ಯೆಗಳ ಮಾಹಿತಿ ಪರಿಹಾರ ಒದಗಿಸುವುದು ಮುಂದಿನ ಅಭಿವೃದ್ದಿ ಯೋಜನೆಗಳ ಸಮಗ್ರ ಮಾಹಿತಿಗಳನ್ನು ಒದಗಿಸಲಾಗುವುದು. ಕಾರ್ಯಪಡೆಯಲ್ಲಿ 7 ವಿಭಾಗಗಳಿದ್ದು, ತನ್ನದೇ ಆದ ರೀತಿಯಲ್ಲಿ ಕಾರ್ಯನಿರ್ವಹಿಸಲಿದೆ. 2030 ವೇಳೆಗೆ ಮಹದೇವಪುರವನ್ನು ಮಾದರಿ ಕ್ಷೇತ್ರ ಮಾಡುವ ದೃಷ್ಟಿಯಿಂದ ಈ ಕಾರ್ಯಪಡೆ ಕಾರ್ಯ ನಿರ್ವಹಿಸಲಿದೆ’ ಎಂದರು.
ನಂತರ ಮಾತನಾಡಿದ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ, ‘ಜಾಗತಿಕ ಮಟ್ಟದಲ್ಲಿ ಕುಖ್ಯಾತಿ ಗಳಿಸಿರುವ ನಗರದ ಸಂಚಾರದ ದಟ್ಟಣೆಯನ್ನು ಮೊದಲು ನಿಯಂತ್ರಿಸಬೇಕಿದೆ. ಸಂಚಾರ ದಟ್ಟಣೆ, ಪರಿಸರ ಮಾಲಿನ್ಯ ಒಂದಕ್ಕೊಂದು ಬೆಸೆದಿದೆ. ಶಿಸ್ತುಬದ್ಧ ಚಾಲನೆ ಮಾಡಿದರೆ ಶೇ 90ರಷ್ಟು ಸಂಚಾರದಟ್ಟಣೆಯನ್ನು ನಿಯಂತ್ರಿಸಬಹುದು. ಇದು ನಮ್ಮ ದೇಶದ ಸಮಸ್ಯೆ ಮಾತ್ರ ಅಲ್ಲ. ಪ್ರತಿಯೊಂದು ದೇಶದಲ್ಲೂ ಸಂಚಾರದಟ್ಟಣೆ ಸಮಸ್ಯೆ ಇದೆ. ಶಿಸ್ತುಬದ್ದವಾಗಿ ಚಾಲನೆ ಮಾಡುವುದರಿಂದ ದಟ್ಟಣೆಯನ್ನು ನಿಯಂತ್ರಿಸಬಹುದು’ ಎಂದರು.
ಸಂಸದ ಪಿ.ಸಿ.ಮೋಹನ್, ಮುಖ್ಯಮಂತ್ರಿ ಮೂಲಸೌಲಭ್ಯಗಳ ಅಭಿವೃದ್ಧಿ ಸಲಹೆಗಾರ ಆರ್.ಕೆ.ಮಿಶ್ರಾ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಜಯಚಂದ್ರಾರೆಡ್ಡಿ, ಪಾಲಿಕೆ ಸದಸ್ಯರಾದ ಎಸ್.ಮುನಿಸ್ವಾಮಿ, ಶ್ವೇತ ವಿಜಯ್ ಕುಮಾರ್, ಆಶಾ ಸುರೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.