ADVERTISEMENT

ಇವಿಎಂ ಕಾರ್ಯವೈಖರಿ: ಜಯಚಂದ್ರ ಸಂಶಯ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2020, 18:25 IST
Last Updated 3 ನವೆಂಬರ್ 2020, 18:25 IST
ಟಿ.ಬಿ.ಜಯಚಂದ್ರ
ಟಿ.ಬಿ.ಜಯಚಂದ್ರ   

ತುಮಕೂರು: ಶಿರಾ ಉಪಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಕಾರ್ಯವೈಖರಿಯ ಬಗ್ಗೆ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಸಂಶಯ ವ್ಯಕ್ತಪಡಿಸಿದ್ದಾರೆ.

ಶಿರಾದಲ್ಲಿ ಮತದಾನ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇದು ನನಗೆ 10ನೇ ಚುನಾವಣೆ. ಆದರೆ ಹಿಂದೆಂದೂ ಕಾಣದ ಭ್ರಷ್ಟಾಚಾರ ಈ ಚುನಾವಣೆಯಲ್ಲಿ ನಡೆದಿದೆ’ ಎಂದು ಆರೋಪಿಸಿದರು.

‘ಇಲ್ಲಿ ಅಧಿಕಾರ ದುರುಪಯೋಗ ಆಗಿದೆ. ನನಗೆ ಇವಿಎಂ ಮೇಲೆ ಸಂಶಯ ಬರುತ್ತಿದೆ. ನಮ್ಮ ಕಾರ್ಯಕರ್ತರು ಸಹ ಈ ಬಗ್ಗೆ ಮಾತನಾಡುತ್ತಿದ್ದಾರೆ. ನಾನು ಗೆದ್ದ ಬಳಿಕ ಇವಿಎಂ ಬಗ್ಗೆ ಮತ್ತಷ್ಟು ಮಾತನಾಡುತ್ತೇನೆ’ ಎಂದು ಹೇಳಿದರು.

ADVERTISEMENT

‘ಶಿರಾ ಕ್ಷೇತ್ರದಲ್ಲಿ ಅಧಿಕಾರಿಗಳು ಬಿಜೆಪಿ ಏಜೆಂಟರಂತೆ ಕೆಲಸ ಮಾಡಿದ್ದು, ಮತಯಂತ್ರಗಳಲ್ಲಿ ಏನೆಲ್ಲ ಪವಾಡ ನಡೆಸಿದ್ದಾರೊ ಗೊತ್ತಿಲ್ಲ. ಈ ಬಗ್ಗೆ ಈಗಾಗಲೇ ನಾನು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇನೆ. ಆದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಆರೋಪ ಮಾಡಿದರು.

‘ಸೋಮವಾರ ಬೆಳಿಗ್ಗೆಯಿಂದ ಸಂಜೆವರೆಗೆ ನೂರಕ್ಕೂ ಹೆಚ್ಚು ಮಂದಿ ಹಾಸನ ಮೂಲದವರು ಮತದಾರರಿಗೆ ಹಣ ಹಂಚುವಾಗ ಸಿಕ್ಕಿ ಬಿದ್ದಿದ್ದಾರೆ. ಜನರು ಅವರನ್ನು ಕೂಡಿ ಹಾಕಿದ್ದರು. ಆದರೆ ಮಾನವೀಯ ದೃಷ್ಟಿಯಿಂದ ಬಿಟ್ಟು ಕಳುಹಿಸಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.