ADVERTISEMENT

ಉದ್ಯೋಗಿಗಳನ್ನು ತೆಗೆದು ಹಾಕುವ ಕ್ರಮ | ಟಿಸಿಎಸ್‌ಗೆ ಸಮನ್ಸ್‌: ಸಂತೋಷ್‌ ಲಾಡ್‌

12,000 ಉದ್ಯೋಗಿಗಳನ್ನು ತೆಗೆದುಹಾಕುವ ಕ್ರಮ

​ಪ್ರಜಾವಾಣಿ ವಾರ್ತೆ
Published 31 ಜುಲೈ 2025, 16:03 IST
Last Updated 31 ಜುಲೈ 2025, 16:03 IST
ಸಂತೋಷ್‌ ಲಾಡ್‌
ಸಂತೋಷ್‌ ಲಾಡ್‌   

ಬೆಂಗಳೂರು: ‘12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವ ಬಗ್ಗೆ ವಿವರಣೆ ನೀಡಿ ಎಂದು ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ಗೆ (ಟಿಸಿಎಸ್‌) ಸಮನ್ಸ್‌ ನೀಡಲಾಗಿದೆ’ ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ತಿಳಿಸಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಟಿಸಿಎಸ್‌ ಕಂಪನಿಯು 12,000 ಉದ್ಯೋಗಿಗಳನ್ನು ತೆಗೆದುಹಾಕುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಯಾವ ಕಾರಣದಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂಬುದರ ಬಗ್ಗೆ ಮಾಹಿತಿ ನೀಡಿ ಎಂದು ಸೂಚಿಸಿದ್ದೇವೆ’ ಎಂದರು.

‘ಟಿಸಿಎಸ್‌ನಂತಹ ಕಂಪನಿಗಳಿಗೆ ಕಾರ್ಮಿಕ ಕಾನೂನುಗಳಿಂದ ವಿನಾಯತಿ ನೀಡಲಾಗಿದೆ. ಐದು ವರ್ಷಗಳಿಂದ ವಿನಾಯತಿಯನ್ನು ವಿಸ್ತರಿಸಿಕೊಂಡೇ ಬರಲಾಗುತ್ತಿದೆ. ಆದರೆ ಕೆಲವಾರು ಷರತ್ತುಗಳು ಅವುಗಳಿಗೂ ಅನ್ವಯವಾಗುತ್ತವೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಇಂತಹ ಕಂಪನಿಗಳು ದೊಡ್ಡ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ತೆಗೆದುಹಾಕಬೇಕು ಎಂದರೆ ನಮಗೆ ಮಾಹಿತಿ ಒದಗಿಸಬೇಕು. ಈ ನಿಯಮದ ಅಡಿಯಲ್ಲೇ ಅವರಿಂದ ವಿವರಣೆ ಕೇಳಲಾಗಿದೆ. ನಮ್ಮ ಇಲಾಖೆಯ ಅಧಿಕಾರಿಗಳು ಟಿಸಿಎಸ್‌ ಪ್ರತಿನಿಧಿಗಳಿಗೆ ಕರೆ ಮಾಡಿ, ಮಾಹಿತಿ ನೀಡಿ ಎಂದು ಸೂಚಿಸಿದ್ದಾರೆ’ ಎಂದು ತಿಳಿಸಿದರು.

10 ತಾಸು ಕೆಲಸಕ್ಕೆ ಅನುಮತಿ ಇಲ್ಲ: ‘ಟಿಸಿಎಸ್‌ ಸೇರಿ ಹಲವು ಐಟಿ ಕಂಪನಿಗಳು ಕೆಲಸದ ಅವಧಿಯನ್ನು 10 ತಾಸಿಗೆ ಹೆಚ್ಚಿಸಲು ಅನುಮತಿ ನೀಡಿ ಎಂದು ಮನವಿ ಸಲ್ಲಿಸಿದ್ದವು. ಕೆಲಸದ ಅವಧಿಯನ್ನು 10 ತಾಸಿಗೆ ಹೆಚ್ಚಿಸಲು ಸಾಧ್ಯವಿಲ್ಲ ಎಂದು ಕಂಪನಿಗಳಿಗೆ ತಿಳಿಸಲಾಗಿದೆ’ ಎಂದು ಸಂತೋಷ್‌ ಲಾಡ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.