ಹೂವಿನಹಡಗಲಿ (ಬಳ್ಳಾರಿ): ‘ಪಕ್ಕೆಲುಬು’ ಪದ ಉಚ್ಛರಿಸಲಾಗದ ಬಾಲಕನೊಬ್ಬನಿಗೆ ಥಳಿಸಿ, ಅದರ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ತಾಲ್ಲೂಕಿನ ಕುರುವತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಟಿ.ಚಂದ್ರಶೇಖರಪ್ಪ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
‘ಶಾಲಾ ಸಮಯದಲ್ಲಿ ಮೊಬೈಲ್ ಫೋನ್ ಬಳಸಬಾರದೆನ್ನುವ ನಿಯಮವೂ ಉಲ್ಲಂಘನೆಯಾಗಿರುವ ಕಾರಣ ಮುಖ್ಯ ಶಿಕ್ಷಕರಿಗೂ ನೋಟಿಸ್ ಜಾರಿ ಮಾಡಲಾಗುವುದು’ ಎಂದುಕ್ಷೇತ್ರ ಶಿಕ್ಷಣಾಧಿಕಾರಿ ಸಿ.ನಾಗರಾಜ ತಿಳಿಸಿದ್ದಾರೆ.
2ನೇ ತರಗತಿ ವಿದ್ಯಾರ್ಥಿಗೆ ‘ಪಕ್ಕೆಲುಬು’ ಪದ ಹೇಳಲು ಶಿಕ್ಷಕ ಒತ್ತಾಯಿಸುವ ವಿಡಿಯೊ ಇದಾಗಿತ್ತು. ಎಷ್ಟೇ ಪ್ರಯತ್ನಿಸಿದರೂ ಆ ಬಾಲಕ, ಹಿಂದುಮುಂದಾಗಿ ಹೇಳುತ್ತಿದ್ದ. ತಾಳ್ಮೆ ಕಳೆದುಕೊಂಡ ಶಿಕ್ಷಕ ವಿದ್ಯಾರ್ಥಿಯನ್ನು ಅವಾಚ್ಯವಾಗಿ ನಿಂದಿಸುತ್ತಲೇ ‘ಪಕ್ಕೆಲುಬು’ ಪದ ಹೇಳುವಂತೆ ಪೀಡಿಸುತ್ತಾರೆ. ಗಾಬರಿಗೊಂಡ ವಿದ್ಯಾರ್ಥಿ ಸರಿಯಾಗಿ ಹೇಳಲಾಗದೇ ಕಣ್ಣೀರಿಡುವ ವಿಡಿಯೊ ಮೂರ್ನಾಲ್ಕು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
ಪ್ರಾಥಮಿಕ ಶಿಕ್ಷಣ ಸಚಿವ ಎಸ್.ಸುರೇಶಕುಮಾರ್ ಅವರಿದ್ದ ವಾಟ್ಸ್ ಆ್ಯಪ್ ಗ್ರೂಪ್‌ಗೂ ಈ ವಿಡಿಯೊ ತಲುಪಿತ್ತು. ಶಿಕ್ಷಕರ ಪತ್ತೆಗಾಗಿ ಸೈಬರ್ ಠಾಣೆಗೆ ದೂರು ನೀಡುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.