ADVERTISEMENT

ಶಿಕ್ಷಕರ ವರ್ಗ: ತಿದ್ದುಪಡಿ ಕಾಯ್ದೆ ಕರಡು ಪ್ರಕಟ

​ಪ್ರಜಾವಾಣಿ ವಾರ್ತೆ
Published 3 ಜೂನ್ 2021, 22:48 IST
Last Updated 3 ಜೂನ್ 2021, 22:48 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: 2019–20ನೇ ಸಾಲಿನಲ್ಲಿ ಕಡ್ಡಾಯ ಮತ್ತು ಹೆಚ್ಚುವರಿ ವರ್ಗಾವಣೆಗೆ ಒಳಗಾಗಿ ತೊಂದರೆ ಅನುಭವಿಸುತ್ತಿರುವ ಶಿಕ್ಷಕರಿಗೆ ವಿಶೇಷ ಕೌನ್ಸೆಲಿಂಗ್‌ ಮೂಲಕ ಒಂದು ಬಾರಿ ವರ್ಗಾವಣೆಗೆ ಅವಕಾಶ ಮಾಡಿಕೊಡುವ ‘ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಕಾಯ್ದೆ–2020’ಯ ತಿದ್ದುಪಡಿಯ ಕರಡನ್ನು ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ.

ಈ ತಿದ್ದುಪಡಿಯಿಂದ, ಕಡ್ಡಾಯ ಅಥವಾ ಹೆಚ್ಚುವರಿ ವರ್ಗಾವಣೆಗೆ ಒಳಗಾದವರಿಗೆ, ವರ್ಗಾವಣೆಗೂ ಮೊದಲು ಕೆಲಸ ನಿರ್ವಹಿಸುತ್ತಿದ್ದ ಸ್ಥಳ ಆಯ್ಕೆ ಮಾಡಿಕೊಳ್ಳಲು (ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸಂಬಂಧಪಟ್ಟ ತಾಲ್ಲೂಕು, ಪ್ರೌಢ ಶಾಲಾ ಶಿಕ್ಷಕರಿಗೆ ಸಂಬಂಧಪಟ್ಟ ಜಿಲ್ಲೆ) ಅವಕಾಶ ಆಗಲಿದೆ. ವರ್ಗಾವಣೆಗೂ ಮೊದಲು ತಾಲ್ಲೂಕು ಅಥವಾ ಜಿಲ್ಲೆಯಲ್ಲಿ ಖಾಲಿ ಹುದ್ದೆಗಳ ಲಭ್ಯತೆಗೆ ಅನುಗುಣವಾಗಿ ಸ್ಥಳ ಆಯ್ಕೆ ಮಾಡಿಕೊಳ್ಳಬೇಕು.

ಇಂಥ ಶಿಕ್ಷಕರಿಗೆ ವರ್ಗಾವಣೆ ಕೌನ್ಸೆಲಿಂಗ್‌ನ್ನು ಈ ಹಿಂದೆ (2019–20ರಲ್ಲಿ) ನಡೆದ ಹಂತದಲ್ಲಿಯೇ ನಡೆಸಬೇಕು. ವಿಶೇಷ ಕೌನ್ಸೆಲಿಂಗ್‌ಗೆ ಲಭ್ಯವಿರುವ ಖಾಲಿ ಹುದ್ದೆಗಳ ಪಟ್ಟಿ ಪ್ರಕಟಿಸಿದ ನಂತರ ಇದಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಬೇಕು. ಬಳಿಕ 2019–20ರಲ್ಲಿನ ಕೌನ್ಸೆಲಿಂಗ್‌ ಕ್ರಮಾಂಕ ಪರಿಗಣಿಸಿ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಿ, ಆಕ್ಷೇಪಣೆ ಆಹ್ವಾನಿಸಿ ಅಂತಿಮಗೊಳಿಸಬೇಕು ಎಂದು ನಿಯಮದಲ್ಲಿದೆ.

ADVERTISEMENT

ಹೆಚ್ಚುವರಿ ವರ್ಗಾವಣೆಯಾದವರಿಗೆ ವಲಯದ ನಿರ್ಬಂಧ ಇಲ್ಲ. ಕಡ್ಡಾಯ ವರ್ಗಾವಣೆಗೊಂಡ ಶಿಕ್ಷಕರು ‘ಬಿ’ ಅಥವಾ ‘ಸಿ’ ವಲಯದ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ‘ಬಿ’ ಅಥವಾ ‘ಸಿ’ ವಲಯದಲ್ಲಿ ಖಾಲಿ ಹುದ್ದೆ ಲಭ್ಯವಿಲ್ಲದೇ ಇದ್ದರೆ ‘ಎ’ ವಲಯದ ಲಭ್ಯ ಶಾಲೆ ಆಯ್ಕೆ ಮಾಡಿಕೊಳ್ಳಬಹುದು ಎಂದೂ ಸ್ಪಷ್ಟಪಡಿಸಲಾಗಿದೆ. ತಿದ್ದುಪಡಿಗೆ ಆಕ್ಷೇಪಣೆ ಸಲ್ಲಿಸಲು ಏಳು ದಿನಗಳ ಅವಕಾಶ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.