ADVERTISEMENT

ಹುಣಸೂರು: 24 ವರ್ಷಗಳಿಂದ ಅಣ್ಣನ ಹೆಸರಲ್ಲಿ ಶಿಕ್ಷಕನಾಗಿ ಕೆಲಸ: ತಮ್ಮನ ಬಂಧನ

ಆರೋಪಿ ಶಿಕ್ಷಕನಿಗೆ ನ್ಯಾಯಾಂಗ ಬಂಧನ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2022, 19:45 IST
Last Updated 24 ಮಾರ್ಚ್ 2022, 19:45 IST
ಲಕ್ಷ್ಮಣೇಗೌಡ
ಲಕ್ಷ್ಮಣೇಗೌಡ   

ಹುಣಸೂರು: 24 ವರ್ಷಗಳಿಂದ ಮೃತ ಅಣ್ಣನ ಹೆಸರಿನಲ್ಲಿ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಆರೋಪಿ ಶಿಕ್ಷಕ ಲಕ್ಷ್ಮಣೇಗೌಡನನ್ನು‍ ಪೊಲೀಸರು ಬಂಧಿಸಿದ್ದು, ಪಿರಿಯಾ ಪಟ್ಟಣ ಜೆಎಂಎಫ್‌ಸಿ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

ಆರೋಪಿಯ ಅಣ್ಣ ಲೋಕೇಶ್‌ ಗೌಡ ಅವರು ಶಿಕ್ಷಕ ಹುದ್ದೆಗೆ ನೇಮಕಾತಿ ಆದೇಶ ಲಭಿಸಿದ ಕೆಲವೇ ದಿನಗಳ ನಂತರ ಮೃತಪಟ್ಟರು. ಅವರ ನೇಮಕಾತಿ ಪತ್ರ ಸೇರಿದಂತೆ ಎಲ್ಲಾ ದಾಖಲೆಯನ್ನು ಶಿಕ್ಷಣ ಇಲಾಖೆಗೆ ನೀಡಿ ತಾನೇ ಲೋಕೇಶ್‌ ಗೌಡ ಎಂದು ಬಿಂಬಿಸಿಕೊಂಡ ಲಕ್ಷ್ಮಣೇಗೌಡ, ಪಿರಿಯಾ ಪಟ್ಟಣದ ಮುದ್ದನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 1998ರಲ್ಲಿ ಶಿಕ್ಷಕ ವೃತ್ತಿಗೆ ಸೇರಿದರು. ಬಳಿಕ ಜಿಲ್ಲೆಯ ವಿವಿಧ ಶಾಲೆಗಳಲ್ಲಿ 24 ವರ್ಷ ಕಾರ್ಯನಿರ್ವಹಿಸಿದ್ದಾರೆ.

ತಾಲ್ಲೂಕಿನ ಕಟ್ಟೆಮಳಲವಾಡಿಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದಾಗ ಆರೋಪಿ ಕುಟುಂಬ ದಲ್ಲಿ ಉಂಟಾದ ಭಿನ್ನಾಭಿಪ್ರಾಯದಿಂದ ಈ ಸಂಗತಿ ಹೊರಬಿದ್ದಿದೆ. ಸ್ಥಳೀಯ ಪತ್ರಕರ್ತ ಇಂಟೆಕ್ ರಾಜು ಎಂಬುವವರು ಶಿಕ್ಷಣ ಇಲಾಖೆಗೆ 2019ರಜನವರಿಯಲ್ಲಿ ದೂರು ನೀಡಿದ್ದರು. ಇಲಾಖೆ ಕ್ರಮಕೈಗೊಳ್ಳದ ಕಾರಣ ಲೋಕಾಯುಕ್ತಕ್ಕೂ ದೂರು ಸಲ್ಲಿಸಿದ್ದರು. ಆರೋಪಿಯು ಇಲಾಖೆಗೆ ನೀಡಿದ ವಂಶವೃಕ್ಷ ಮತ್ತು ಅಂಕಪಟ್ಟಿ ನಕಲಿ ಎಂಬುದು ವಿಚಾರಣೆಯಲ್ಲಿ ಸಾಬೀತಾಯಿತು.
ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಮಾರ್ಚ್ 21ರಂದು ದೂರು ದಾಖಲಿಸಿ, ಬಂಧಿಸಲಾಯಿತು.

ADVERTISEMENT

‘ಲೋಕಾಯುಕ್ತದ ಆದೇಶದ ಮೇಲೆ ನಾಲ್ಕು ಹಂತಗಳಲ್ಲಿ ವಿಚಾರಣೆ ನಡೆಸಿ ಪ್ರಕರಣಕ್ಕೆ ಅಂತ್ಯ ಹಾಡಿದ್ದೇವೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್ ತಿಳಿಸಿದರು.

ದೂರುದಾರ ಇಂಟೆಕ್ ರಾಜು, ‘ಶಿಕ್ಷಣ ಇಲಾಖೆಗೆ ದೂರು ನೀಡಿದ್ದರೂ ಕ್ರಮ ಕೈಗೊಳ್ಳಲಿಲ್ಲ. ಲೋಕಾಯುಕ್ತರಿಗೆ ದೂರು ಸಲ್ಲಿಸಿದ ಬಳಿಕ ವಿಚಾರಣೆ ಚುರುಕುಗೊಂಡಿತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.