ADVERTISEMENT

ಶಿಕ್ಷಕರ ವರ್ಗಾವಣೆ: ಸುಗ್ರೀವಾಜ್ಞೆಗೆ ಸಂಪುಟ ಒಪ್ಪಿಗೆ

ಒಂದು ಬಾರಿಗೆ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2021, 18:52 IST
Last Updated 26 ಏಪ್ರಿಲ್ 2021, 18:52 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಕಡ್ಡಾಯ ಮತ್ತು ಹೆಚ್ಚುವರಿ ವರ್ಗಾವಣೆಗೆ ಒಳಗಾಗಿ ತೊಂದರೆ ಅನುಭವಿಸುತ್ತಿರುವ ಶಿಕ್ಷಕರಿಗೆ ಕೌನ್ಸೆಲಿಂಗ್‌ ಮೂಲಕ ಒಂದು ಬಾರಿಗೆ ವರ್ಗಾವಣೆಗೆ ಅವಕಾಶ ಮಾಡಿಕೊಡುವ ಕಾಯ್ದೆ ತಿದ್ದುಪಡಿಗೆ ಸಚಿವ ಸಂಪುಟ ಸಭೆ ಸೋಮವಾರ ಒಪ್ಪಿಗೆ ನೀಡಿದೆ.

ಇದಕ್ಕಾಗಿ ಸುಗ್ರೀವಾಜ್ಞೆ ಮೂಲಕ ‘ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಕಾಯ್ದೆ–2020’ಕ್ಕೆ ತಿದ್ದುಪಡಿ ಮಾಡಲು ಒಪ್ಪಿಗೆ ನೀಡಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ಅವರು ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸುಗ್ರೀವಾಜ್ಞೆಗೆ ರಾಜ್ಯಪಾಲರ ಒಪ್ಪಿಗೆ ಸಿಕ್ಕಿದ ಬಳಿಕ ವರ್ಗಾವಣೆ ಪ್ರಕ್ರಿಯೆ ಆರಂಭಿಸಲಾಗುವುದು. 2020–21ನೇ ಸಾಲಿನ ವರ್ಗಾವಣೆ ಪ್ರಕ್ರಿಯೆ ಸಂದರ್ಭದಲ್ಲಿ 70 ಸಾವಿರಕ್ಕೂ ಹೆಚ್ಚು ಶಿಕ್ಷಕರು ಅರ್ಜಿ ಸಲ್ಲಿಸಿದ್ದರು. ಅದಕ್ಕೂ ಹಿಂದಿನ ವರ್ಷಗಳಲ್ಲಿ ಕಡ್ಡಾಯ ಮತ್ತು ಹೆಚ್ಚುವರಿ ವರ್ಗಾವಣೆ ಶಿಕ್ಷೆಗೆ ಒಳಗಾದ ಶಿಕ್ಷಕರಿಗೆ ವಿಶೇಷ ಆದ್ಯತೆಯಡಿ ತಮಗೆ ಬೇಕಾದ ಸ್ಥಳಕ್ಕೆ ವರ್ಗಾವಣೆ ಪಡೆದುಕೊಳ್ಳುವ ಅವಕಾಶ ಕಾಯ್ದೆಯಲ್ಲಿ ಇರಲಿಲ್ಲ. ಇದನ್ನು ಪ್ರಶ್ನಿಸಿ ಕೆಲವರು ಕೋರ್ಟ್ ಮೊರೆ ಹೋಗಿದ್ದರು.

ADVERTISEMENT

ವರ್ಗಾವಣೆ ಶಿಕ್ಷೆಗೆ ಒಳಗಾದವರಿಗೆ ಒಂದು ಬಾರಿ ಅನುಕೂಲ ಮಾಡಿಕೊಡಲು ಅವರಿಗೆ ಸೂಕ್ತವೆನಿಸುವ ಶಾಲೆಗಳಿಗೆ ವರ್ಗಾವಣೆ ಮಾಡಲು ಅವಕಾಶ ಕಲ್ಪಿಸುವುದಾಗಿ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್ ಭರವಸೆ ನೀಡಿದ್ದರು. ಇದರ ಅನುಸಾರ, ಕಳೆದ ನವೆಂಬರ್‌ 11 ರಂದು ಹೊರಡಿಸಿದ್ದ ಅಧಿಸೂಚನೆಯಲ್ಲಿ ರಾಜ್ಯ ಸರ್ಕಾರ ಈ ರೀತಿಯ ಅವಕಾಶ ಕಲ್ಪಿಸಿತ್ತು. ಆದರೆ, ಅದಕ್ಕೆ ಕೆಎಟಿ ಮತ್ತು ಹೈಕೋರ್ಟ್‌ ತಡೆ ನೀಡಿತ್ತು. ಹೀಗಾಗಿ, ಸುಗ್ರೀವಾಜ್ಞೆ ಮೂಲಕ ತಿದ್ದು‍ಪಡಿ ಅನುಷ್ಠಾನ ಮಾಡಲು ಸರ್ಕಾರ ಮುಂದಾಗಿದೆ.

ಪ್ರಮುಖ ನಿರ್ಣಯಗಳು:

* ಸಣ್ಣ– ಸಣ್ಣ ಆಹಾರ ಪದಾರ್ಥಗಳ ತಯಾರಿಕೆಗೆ ಸಂಬಂಧಿಸಿದಂತೆ ಆತ್ಮ ನಿರ್ಭರ್‌ ಯೋಜನೆಯಡಿ ₹ 493 ಕೋಟಿ ಆಹಾರ ಸಂಸ್ಕರಣ ಘಟಕ ಸ್ಥಾಪಿಸಲು ಒಪ್ಪಿಗೆ. ಈ ಯೋಜನೆಗೆ ಕೇಂದ್ರ ಸರ್ಕಾರ ಶೇ 60 ಮತ್ತು ರಾಜ್ಯ ಸರ್ಕಾರ ಶೇ 40 ರಷ್ಟು ಹಣ ತೊಡಗಿಸಲಿವೆ

* ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ 3 ನೇ ಹಂತದ ಕಾಮಗಾರಿಯನ್ನು ನಡೆಸಲು ₹ 22 ಕೋಟಿ ನೀಡಲು ಒಪ್ಪಿಗೆ

* ಎನ್‌ಜಿಇಎಫ್‌ನಲ್ಲಿ ಜರ್ಮನಿಯ ಇಎಚ್‌ಜಿ ಕಂಪನಿಯ ಶೇ 9.7 ರಷ್ಟು ಷೇರುಗಳಿದ್ದವು. ಆ ಷೇರುಗಳ ಮೌಲ್ಯ ₹ 61.95 ಕೋಟಿ. ಎರಡು ಕಂಪನಿಗಳ ಮಧ್ಯೆ ಒಪ್ಪಂದ ಇದ್ದ ಕಾರಣ ಎನ್‌ಜಿಇಎಫ್‌ಗೆ ಸೇರಿದ ಜಮೀನು ಕೂಡ ಜಂಟಿ ಸುಪರ್ದಿಯಲ್ಲಿತ್ತು. ಈಗ ಜರ್ಮನಿಯ ಕಂಪನಿಗೆ ಷೇರು ಮೊತ್ತ ಪಾವತಿಸಿ 122 ಎಕರೆ ಜಮೀನು ಪಡೆಯಲು ತೀರ್ಮಾನ

* ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗಾಗಿ ಕ್ಯಾಂಪಸ್ ಕಾಂಪ್ಲೆಕ್ಸ್‌ ನಿರ್ಮಿಸಲು ₹ 63 ಕೋಟಿ ನೀಡಲು ಒಪ್ಪಿಗೆ

* ಬೆಂಗಳೂರಿನ ಸೂರ್ಯನಗರದಲ್ಲಿ ಬಹುಗ್ರಾಮ ಯೋಜನೆಯಡಿ ಕುಡಿಯುವ ನೀರು ಕಲ್ಪಿಸಲು ಸಂಪುಟ ಉಪಸಮಿತಿ ರಚಿಸಲು ತೀರ್ಮಾನ.

* ಬೆಂಗಳೂರಿನಲ್ಲಿ 12 ಹೈಡೆನ್ಸಿಟಿ ಕಾರಿಡಾರ್‌ ಅಭಿವೃದ್ಧಿಗೆ ₹ 477 ಕೋಟಿಗೆ ಅನುಮೋದನೆ

* ಮಂಡ್ಯ ಜಿಲ್ಲೆಯಲ್ಲಿ ಆದಿಚುಂಚನಗಿರಿ ಆಸ್ಪತ್ರೆ ವಿಸ್ತರಣೆಗಾಗಿ 25 ಎಕರೆ ಸರ್ಕಾರಿ ಜಮೀನು ನೀಡಲು ಒಪ್ಪಿಗೆ

* ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಸತ್ತಿ ಮತ್ತು ಇತರೆ 8 ಗ್ರಾಮಗಳಿಗೆ ₹ 45.39 ಕೋಟಿ ವೆಚ್ಚದಲ್ಲಿ ಕುಡಿಯುವ ನೀರು ಪೂರೈಕೆ ಯೋಜನೆಗೆ ಒಪ್ಪಿಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.