ADVERTISEMENT

ಎಲ್ಲ ಸರ್ಕಾರಿ ಶಾಲೆಗಳಿಗೆ ತಂತ್ರಜ್ಞಾನ‌ ಸ್ಪರ್ಶ: ಚಿಂತನೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2020, 21:33 IST
Last Updated 23 ಡಿಸೆಂಬರ್ 2020, 21:33 IST
ಎಸ್. ಸುರೇಶ್ ಕುಮಾರ್
ಎಸ್. ಸುರೇಶ್ ಕುಮಾರ್   

ಬೆಂಗಳೂರು: ‘ಭಾರತ್ ನೆಟ್ ಸಹಯೋಗದಲ್ಲಿ ಮುಂದಿನ ದಿನಗಳಲ್ಲಿ ಎಲ್ಲ ಸರ್ಕಾರಿ ಶಾಲೆಗಳಿಗೆ ಕೇಬಲ್ ಮೂಲಕ ಹೈ ಸ್ಪೀಡ್ ಇಂಟರ್‌ನೆಟ್‌ ಸೌಲಭ್ಯ ಕಲ್ಪಿಸಲು ಚಿಂತನೆ ನಡೆಯುತ್ತಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್ ಕುಮಾರ್‌ ಹೇಳಿದ್ದಾರೆ.

‘ಕೋವಿಡ್ ಸೃಷ್ಟಿಸಿರುವ ಸಾಮಾಜಿಕ ಸ್ಥಿತಿಗತಿಗಳಿಗೆ ಅನುಗುಣವಾಗಿ ತಂತ್ರಜ್ಞಾನ ಆಧಾರಿತ ಕಲಿಕೆಗೆ ವಿಶೇಷ ಒತ್ತು ನೀಡುವುದು ಅನಿವಾರ್ಯವಾಗಿದೆ. ಹೀಗಾಗಿ, ಈ ಬಗ್ಗೆ ಸಂಬಂಧಿಸಿದ ಇಲಾಖೆಯೊಂದಿಗೆ ಪ್ರಾಥಮಿಕ ಚರ್ಚೆ ನಡೆಸಲಾಗಿದೆ. ಮೊದಲ ಹಂತದಲ್ಲಿ ಕ್ಲಸ್ಟರ್ ಮಟ್ಟದಲ್ಲಿ ಜಾರಿಗೊಳಿಸಲು ಉದ್ದೇಶಿಸಲಾಗಿದೆ. ಮುಂದಿನ ಒಂದು ವರ್ಷದೊಳಗೆ ಸಾಕಾರವಾಗುವ ನಿರೀಕ್ಷೆ ಇದೆ‌’ ಎಂದಿದ್ದಾರೆ.

‘ಹೈಕೋರ್ಟ್‌ ಅಪೇಕ್ಷೆಯಂತೆ ಮಧ್ಯಾಹ್ನ ಉಪಹಾರ ಯೋಜನೆಯಡಿಯಲ್ಲಿ ಮಕ್ಕಳಿಗೆ ಬೇಳೆ ಕಾಳುಗಳನ್ನು ನೀಡುವ ಕಾರ್ಯಕ್ರಮ ಮುಂದುವರಿಯಲಿದ್ದು, ಕೋವಿಡ್ ಕಾರಣಕ್ಕೆ ಈ ಸಾಲಿನಲ್ಲಿ ಶಾಲಾವರಣದಲ್ಲಿ ಆಹಾರವನ್ನು ತಯಾರಿಸುವ ಕಾರ್ಯಕ್ರಮ ಇರುವುದಿಲ್ಲ’ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ADVERTISEMENT

‘ಖಾಸಗಿ ಶಾಲೆಗಳು ಪೋಷಕರ ಸಮಿತಿಗಳನ್ನು ಕಡ್ಡಾಯವಾಗಿ ರಚಿಸಬೇಕು. ಅವರ ಹಂತದಲ್ಲಿ ಕಡ್ಡಾಯವಾಗಿ ಪೋಷಕರ ಸಭೆ ನಡೆಸಿ ಶುಲ್ಕ ಮೊತ್ತ ನಿರ್ಧರಿಸುವ ಕ್ರಮಕ್ಕೆ ಮುಂದಾಗಬೇಕು. ಖಾಸಗಿ ಶಾಲಾ ಸಂಘಟನೆಗಳೊಂದಿಗೆ ಸಭೆ ನಡೆಸಿದ ಸಂದರ್ಭದಲ್ಲಿ ಈ ಕುರಿತಂತೆ ವಿಸ್ತ್ರತ ಚರ್ಚೆ ನಡೆಸಿ ತಿಳಿಸಲು ನಿರ್ದೇಶನ ನೀಡಿದ್ದೇನೆ’ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.