ADVERTISEMENT

ನಾಮಪತ್ರ ಸಲ್ಲಿಸುವ ಮುನ್ನವೇ 'ತೇಜಸ್ವಿ ಗೋ ಬ್ಯಾಕ್ ' ಘೋಷಣೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2019, 9:10 IST
Last Updated 26 ಮಾರ್ಚ್ 2019, 9:10 IST
ತೇಜಸ್ವಿ ಸೂರ್ಯ
ತೇಜಸ್ವಿ ಸೂರ್ಯ   

ಬೆಂಗಳೂರು: ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಅನಿರೀಕ್ಷಿತವಾಗಿ ಪ್ರಕಟವಾದ ಅಭ್ಯರ್ಥಿತೇಜಸ್ವಿ ಸೂರ್ಯ ಅವರಿಗೆ ನಾಮಪತ್ರ ಸಲ್ಲಿಸುವ ಮುನ್ನವೇ ಪಕ್ಷದಲ್ಲೇ 'ಗೋ ಬ್ಯಾಕ್ ತೇಜಸ್ವಿ' ಘೋಷಣೆ ಕೂಗುವುದರೊಂದಿಗೆ ಕಾರ್ಯಕರ್ತರಿಂದ ಪ್ರಬಲ ವಿರೋಧ ವ್ಯಕ್ತವಾಗಿದೆ.

ಅಭ್ಯರ್ಥಿ ಎಂದು ಘೋಷಣೆಯಾದ ನಂತರ ಮಂಗಳವಾರ ಬೆಳಿಗ್ಗೆ ತೇಜಸ್ವಿ ಸೂರ್ಯ ಯಡಿಯೂರಪ್ಪ ಅವರನ್ನು ಭೇಟಿಯಾದರು. ನಂತರ ತೇಜಸ್ವಿನಿ ಅನಂತಕುಮಾರ್ ಅವರ ಮನೆಗೆ ಭೇಟಿ ನೀಡಿದರು. ಆಶೀರ್ವಾದ ಪಡೆಯಲೆಂದು ಹೋದಾಗ ರಾಜ್ಯಸಭಾ ಸದಸ್ಯ ರಾಜೀವ್ಚಂದ್ರಶೇಖರ್ ಕೂಡ ಜೊತೆಗಿದ್ದರು. ಈ ವೇಳೆ ತೇಜಸ್ವಿನಿ ಅವರಿಗೆ ಟಿಕೆಟ್ ಕೈತಪ್ಪಿದ ವಿಷಯ ತಿಳಿಯುತ್ತಿದ್ದಂತೆ ಕಾರ್ಯಕರ್ತರು ಮನೆಯ ಮುಂದೆ ಸೇರಿದ್ದರು. ತೇಜಸ್ವಿ ಸೂರ್ಯ ಮನೆಗೆ ಆಗಮಿಸುತ್ತಿದ್ದಂತೆ ಅಲ್ಲಿದ್ದ ಕಾರ್ಯಕರ್ತರು 'ತೇಜಸ್ವಿ ಡೌನ್ ಡೌನ್' ಅನ್ನೋ ಘೋಷಣೆ ಕೂಗಲು ಆರಂಭಿಸಿದರು. ಆ ಸಮಯದಲ್ಲಿ ಮಧ್ಯಪ್ರವೇಶಿಸಿದ ತೇಜಸ್ವಿನಿ ಅನಂತಕುಮಾರ್ ಅವರು 'ಯಾರೂ ಅಭ್ಯರ್ಥಿ ವಿರುದ್ಧ ಘೋಷಣೆ ಕೂಗಬೇಡಿ. ಪಕ್ಷದ ತೀರ್ಮಾನಕ್ಕೆ ಬದ್ಧರಾಗಿರಬೇಕು' ಎಂದರು. ಆಗ ಕಾರ್ಯಕರ್ತರು ಘೋಷಣೆ ಕೂಗುವುದನ್ನು ನಿಲ್ಲಿಸಿದರು.

ತೇಜಸ್ವಿಸೂರ್ಯ ತೇಜಸ್ವಿನಿ ಅವರ ಕಾಲು ಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡರು. ಸಂಸದ ರಾಜೀವ್ ಚಂದ್ರಶೇಖರ್ ಹೊರ ಬಂದು ಕಾರಿನಲ್ಲಿ ಕೂರುತ್ತಿದ್ದಂತೆ ಕಾರ್ಯಕರ್ತರು ಅವರ ಕಾರನ್ನು ಸುತ್ತುವರಿದು ಮೇಡಂಗೆ ಯಾಕೆ ಹೀಗಾಯ್ತು ಎಂದು ಪ್ರಶ್ನಿಸುತ್ತಿದ್ದರು. ಸಾಕಷ್ಟು ಕಾರ್ಯಕರ್ತರು ಜಮಾಯಿಸಿದ್ದರಿಂದ ಪರಿಸ್ಥಿತಿಯನ್ನು ಅರಿತ ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿ ಕಾರು ಹೊರಡುವುದಕ್ಕೆ ಅನುವು ಮಾಡಿಕೊಟ್ಟರು.

ADVERTISEMENT

ಹೈಕಮಾಂಡ್ ನಿರ್ಧಾರಕ್ಕೆ ಬದ್ಧ:ತೇಜಸ್ವಿ ಸೂರ್ಯ

ನನಗೆ ಹೈಕಮಾಂಡ್ ಟಿಕೆಟ್ ನೀಡುತ್ತದೆ ಅನ್ನೋದು ಗೊತ್ತಿರಲಿಲ್ಲ. ರಾತ್ರಿ ನನಗೆ ಹೈಕಮಾಡ್ ಸೂಚನೆ ನೀಡಿ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸುವಂತೆ ತಿಳಿಸಿದೆ. ಅದರಂತೆ ತೇಜಸ್ವಿನಿ ಅನಂತಕುಮಾರ್ ಅವರ ಆಶೀರ್ವಾದ ಪಡೆದು ನಾಮಪತ್ರ ಸಲ್ಲಿಸಲು ಹೊರಡುತ್ತಿದ್ದೇನೆ ಎಂದು ಅಭ್ಯರ್ಥಿ ತೇಜಸ್ವಿ ಸೂರ್ಯ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.ನನ್ನನ್ನು ಅನಂತಕುಮಾರ್ ಬೆಳೆಸಿದ್ದಾರೆ. ಕಳೆದ 30 ವರ್ಷಗಳಿಂದ ಈ ಕ್ಷೇತ್ರದಲ್ಲಿ ಅವರು ದುಡಿದಿದ್ದಾರೆ. ಇದನ್ನು ಅರಿತು ನಾನು ಜನರ ಸೇವೆ ಮಾಡುತ್ತೇನೆ ಎಂದರು. ಅವರು ಹೊರಬರುತ್ತಿದ್ದಂತೆ ಅಲ್ಲಿದ್ದ ಕಾರ್ಯಕರ್ತರು 'ಗೋಬ್ಯಾಕ್ ತೇಜಸ್ವಿ ಗೋಬ್ಯಾಕ್ ತೇಜಸ್ವಿ' ಅಂತ ಘೋಷಣೆ ಕೂಗಲಾರಂಭಿಸಿದರು.

ಈ ಬೆಳವಣಿಗಳನ್ನು ನೋಡಿದ ತೇಜಸ್ವಿನಿ ಅನಂತಕುಮಾರ್ ಅವರು ಮನೆಯಿಂದ ಹೊರಬಂದು ಎಲ್ಲರನ್ನೂ ಸಮಾಧಾನಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.