
ಬೆಂಗಳೂರು: ‘ಕನೇರಿ ಸ್ವಾಮೀಜಿ ಮಠಾಧೀಶರಾಗಿದ್ದು ಪ್ರವಚನ ನೀಡಬೇಕೆ ವಿನಃ ತಮ್ಮ ಮಾತುಗಳನ್ನು ರಾಜಕೀಯಗೊಳಿಸಬಾರದು’ ಎಂದು ಹೈಕೋರ್ಟ್ ಕಟುವಾದ ಅಭಿಪ್ರಾಯ ವ್ಯಕ್ತಪಡಿಸಿದೆ.
2026ರ ಜನವರಿವರೆಗೆ ಧಾರವಾಡ ಪ್ರವೇಶ ನಿರ್ಬಂಧಿಸಿ ಜಿಲ್ಲಾಧಿಕಾರಿ ಹೊರಡಿಸಿರುವ ಆದೇಶ ಪ್ರಶ್ನಿಸಿ ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ (ಧಾರವಾಡ) ಬುಧವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಕಾಡಸಿದ್ದೇಶ್ವರ ಸ್ವಾಮೀಜಿ ಪರ ಹೈಕೋರ್ಟ್ ವಕೀಲ ವೆಂಕಟೇಶ ಪಿ.ದಳವಾಯಿ, ‘ಯಾವ ಕಾರಣಕ್ಕಾಗಿ ಕಾಡಸಿದ್ದೇಶ್ವರ ಸ್ವಾಮೀಜಿ ಅವರನ್ನು 2026ರ ಜನವರಿವರೆಗೆ ನಿರ್ಬಂಧಿಸಲಾಗಿದೆಯೋ ಗೊತ್ತಿಲ್ಲ. ಕಾರಣವನ್ನೂ ನೀಡಿಲ್ಲ’ ಎಂದರು.
‘ಕನೇರಿ ಕಾಡಸಿದ್ದೇಶ್ವರ ಸ್ವಾಮೀಜಿ ಖಂಡಿತವಾಗಿಯೂ ಅವಹೇಳನಕಾರಿ ಪದ ಬಳಸುವುದಿಲ್ಲ. ಆದರೆ ಕೆಲ ಸ್ವಾಮೀಜಿಗಳು ದೇವರೆಂದು ಪೂಜಿಸುವ ಲಕ್ಷ್ಮಿಯನ್ನು ಜೂಲಿ ಲಕ್ಷ್ಮಿ ಎಂದು ಜರೆದಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರಷ್ಟೇ’ ಎಂದು ದೂರಿದರು.
ಇದಕ್ಕೆ ರಾಜ್ಯ ಸರ್ಕಾರದ ಪರ ವಕೀಲರು ‘ಸ್ವಾಮೀಜಿ ಜನರ ಭಾವನೆಗಳ ಜೊತೆ ಆಟವಾಡಲು ಯತ್ನಿಸುತ್ತಿದ್ದಾರೆ. ಅವರಿಗೆ ಭಾಷೆಯ ಮೇಲೆ ಹಿಡಿತವಿಲ್ಲ. ಮತ್ತೊಂದು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸಹಾ ಅವರಿಗೆ ಯಾವುದೇ ಪರಿಹಾರ ನೀಡಿಲ್ಲ. ಈ ಪ್ರಕರಣದಲ್ಲಿ ಪೊಲೀಸ್ ವರಿಷ್ಠಾಧಿಕಾರಿಯ ವರದಿ ಪಡೆದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಮುನ್ನಚ್ಚೆರಿಕೆಯ ಭಾಗವಾಗಿ ನಿರ್ಬಂಧ ವಿಧಿಸಲಾಗಿದೆ’ ಎಂದು ಸರ್ಕಾರದ ಕ್ರಮವನ್ನು ಸಮರ್ಥಿಸಿದರು.
ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠ, ‘ಎಚ್ಚರಿಕೆಯಿಂದ ಮಾತನಾಡುವಂತೆ ಕಾಡಸಿದ್ದೇಶ್ವರ ಸ್ವಾಮೀಜಿಗೆ ತಿಳಿಸಿ’ ಎಂದು ದಳವಾಯಿ ಅವರಿಗೆ ಸೂಚಿಸಿ ಆದೇಶ ಕಾಯ್ದಿರಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.