ADVERTISEMENT

ಆನ್‌ಲೈನ್ ಜೂಜು: ಸಂಪುಟದ ನಿರ್ಧಾರ ತಿಳಿಸಿ- ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2021, 4:47 IST
Last Updated 17 ಫೆಬ್ರುವರಿ 2021, 4:47 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಆನ್‌ಲೈನ್ ಜೂಜು ಚಟುವಟಿಕೆ ನಿಯಂತ್ರಿಸುವ ವಿಷಯದಲ್ಲಿ ರಾಜ್ಯ ಸಚಿವ ಸಂಪುಟ ತೆಗೆದುಕೊಳ್ಳುವ ನಿರ್ಧಾರವನ್ನು ದಾಖಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

‘ಆನ್‌ಲೈನ್ ಬೆಟ್ಟಿಂಗ್‌ಗೆ ಸಂಬಂಧಿಸಿದ ವಿಷಯವನ್ನು ಸಂಪುಟದ ಮುಂದೆ ಇಡಲಾಗಿದೆ. ಶೀಘ್ರವೇ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ’ ಎಂದು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠಕ್ಕೆ ಸರ್ಕಾರದ ಪರ ವಕೀಲರು ತಿಳಿಸಿದರು.

‘ಸೂಕ್ತ ನಿಯಮಾವಳಿ ರೂಪಿಸುವ ತನಕ ಎಲ್ಲ ರೀತಿಯ ಆನ್‌ಲೈನ್ ಜೂಜಾಟ ನಿಲ್ಲಿಸಬೇಕು’ ಎಂದು ದಾವಣಗೆರೆ ನಿವಾಸಿ ಡಿ.ಆರ್. ಶಾರದಾ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ADVERTISEMENT

ಈ ಅರ್ಜಿ ವಿಚಾರಣೆಯಲ್ಲಿ ತಮ್ಮನ್ನೂ ಪ್ರತಿವಾದಿ ಆಗಿಸುವಂತೆ ಕೋರಿ ಮುಂಬೈ ಮೂಲದ ಆನ್‌ಲೈನ್ ರಮ್ಮಿ ಫೌಂಡೇಷನ್(ಟಿಒಆರ್‌ಎಫ್‌) ಮಧ್ಯಂತರ ಅರ್ಜಿ ಸಲ್ಲಿಸಿದೆ. ಅರ್ಜಿ ಅನುಮತಿಸಿರುವ ಪೀಠ, ಮಾ.31ರೊಳಗೆ ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶನ ನೀಡಿದೆ.

‘ಆನ್‌ಲೈನ್ ರಮ್ಮಿ ಆಟವನ್ನು ಪ್ರೋತ್ಸಾಹಿಸಿ, ಸುಗಮಗೊಳಿಸುವುದು ಫೆಡರೇಷನ್‌ನ ಉದ್ದೇಶ. ಆಟಗಾರರ ಆಸಕ್ತಿಗಳನ್ನು ರಕ್ಷಿಸುವ ಕೆಲಸವನ್ನೂ ಫೆಡರೇಷನ್ ಮಾಡುತ್ತಿದೆ’ ಎಂದು ಟಿಒಆರ್‌ಎಫ್ ಪರ ವಕೀಲ ಮುಕುಲ್ ರೋಹಟಗಿ ವಿವರಿಸಿದರು.

‘ರಮ್ಮಿ ಒಂದು ಕೌಶಲದ ಆಟವೇ ಹೊರತು ಜೂಜಲ್ಲ. ಇದಕ್ಕೆ ಪರವಾನಗಿ ನೀಡಿದರೆ ಶುಲ್ಕದಿಂದಲೇ ಮುಂದಿನ ಐದು ವರ್ಷಗಳಲ್ಲಿ ರಾಜ್ಯ ಸರ್ಕಾರ ₹1 ಸಾವಿರ ಕೋಟಿ ವರಮಾನ ನಿರೀಕ್ಷಿಸಬಹುದು’ ಎಂದು ಅವರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.