ADVERTISEMENT

ಜನರ ದಿಕ್ಕುತಪ್ಪಿಸಲು ದೇವಸ್ಥಾನ ಧ್ವಂಸ: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2021, 16:25 IST
Last Updated 14 ಸೆಪ್ಟೆಂಬರ್ 2021, 16:25 IST
   

ಬೆಂಗಳೂರು: ತನ್ನ ಜವಾಬ್ದಾರಿಗಳನ್ನು ನಿರ್ವಹಿಸಲು ವಿಫಲವಾಗಿರುವ ರಾಜ್ಯದ ಬಿಜೆಪಿ ಸರ್ಕಾರ, ಜನರ ಗಮನವನ್ನು ಬೇರೆಡೆ ಸೆಳೆಯಲು ದೇವಸ್ಥಾನಗಳ ಧ್ವಂಸಕ್ಕೆ ಕೈಹಾಕಿರುವ ಸಂಶಯ ಕಾಡುತ್ತಿದೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ ರಸ್ತೆ ಬದಿ ಇರುವ ಅನಧಿಕೃತ ದೇವಸ್ಥಾನಗಳ ತೆರವು ಕಾರ್ಯಾಚರಣೆ ಕುರಿತು ಮಂಗಳವಾರ ಸರಣಿ ಟ್ವೀಟ್‌ ಮಾಡಿರುವ ಅವರು, ‘ದೇವಾಲಯಗಳಿಗೆ ರಕ್ಷಣೆ ನೀಡಬೇಕಾಗಿರುವುದು ಸರ್ಕಾರದ ಜವಾಬ್ದಾರಿ. ಅದನ್ನು ಮಾಡದೇ, ತೆರವುಗೊಳಿಸಲಾಗಿದೆ. ಮಗುವನ್ನು ಚಿವುಟುವುದೂ, ತೊಟ್ಟಿಲು ತೂಗುವುದು ಎರಡೂ ಕೆಲಸವನ್ನು ಬಿಜೆ‍ಪಿ ಸರ್ಕಾರ ಏಕಕಾಲಕ್ಕೆ ಮಾಡುತ್ತಿದೆ’ ಎಂದು ಟೀಕಿಸಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ 93 ದೇವಸ್ಥಾನಗಳ ಧ್ವಂಸಕ್ಕೆ ಬಿಜೆಪಿ ಸರ್ಕಾರದ ದ್ವಂದ್ವ ನೀತಿಯೇ ಕಾರಣ. ಸರ್ಕಾರಕ್ಕಿಂತ ಜಿಲ್ಲಾಡಳಿತ ದೊಡ್ಡದೆ? ಒಂದೆಡೆ ದೇವಸ್ಥಾನಗಳ ಧ್ವಂಸ ನಡೆಯುತ್ತಿದೆ, ಇನ್ನೊಂದೆಡೆ ಆಡಳಿತ ಪಕ್ಷದ ಮಿತ್ರ ಸಂಘಟನೆ ಹಿಂದೂ ಜಾಗರಣ ವೇದಿಕೆ ಹಾದಿ ಬೀದಿಯಲ್ಲಿ ಪ್ರತಿಭಟನೆ ನಡೆಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ADVERTISEMENT

ದೇವಾಲಯಗಳನ್ನು ಏಕೆ ನೆಲಸಮ ಮಾಡಲಾಗುತ್ತಿದೆ ಎಂಬ ಪ್ರಶ್ನೆಗೆ ಸರ್ಕಾರ ಉತ್ತರ ನೀಡಬೇಕು. ದೇವಾಲಯ
ಗಳ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದರೆ ಕಾರ್ಯಾಚರಣೆ ನಿಲ್ಲಿಸಿ, ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಿ. ಎಲ್ಲ ಪಕ್ಷ
ಗಳ ಮುಖಂಡರ ಜತೆ ಚರ್ಚಿಸಲಿ ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.