ADVERTISEMENT

ಸುಳ್ವಾಡಿ ದೇವಾಲಯ ಸರ್ಕಾರದ ವಶಕ್ಕೆ?

ಪರಿಸರ ಸೂಕ್ಷ್ಮ ವಲಯದಲ್ಲಿ ಅಕ್ರಮ ಅಭಿವೃದ್ಧಿ

ಸೂರ್ಯನಾರಾಯಣ ವಿ
Published 16 ಡಿಸೆಂಬರ್ 2018, 14:48 IST
Last Updated 16 ಡಿಸೆಂಬರ್ 2018, 14:48 IST
ದೇವಾಲಯದ ಎಡ, ಬಲ ಹಾಗೂ ಹಿಂಭಾಗದಲ್ಲಿ ಕಟ್ಟಡಗಳನ್ನು ಕಾಣಬಹುದು
ದೇವಾಲಯದ ಎಡ, ಬಲ ಹಾಗೂ ಹಿಂಭಾಗದಲ್ಲಿ ಕಟ್ಟಡಗಳನ್ನು ಕಾಣಬಹುದು   

ಚಾಮರಾಜನಗರ: ಕಂಡು ಕೇಳರಿಯದ ದುರಂತಕ್ಕೆ ಸಾಕ್ಷಿಯಾಗಿರುವ ಹನೂರು ತಾಲ್ಲೂಕಿನ ಸುಳ್ವಾಡಿ ಗ್ರಾಮದ ಕಿಚ್ಚುಗುತ್ತು ಮಾರಮ್ಮ ದೇವಸ್ಥಾನವು ಮಲೆಮಹದೇಶ್ವರ ವನ್ಯಧಾಮದ ವ್ಯಾಪ್ತಿಯಲ್ಲಿದ್ದರೂ ಭಕ್ತರಿಗೆ ತಂಗಲು ಕೊಠಡಿಗಳು ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ.

ನಿಯಮಗಳ ಪ್ರಕಾರ ಪರಿಸರ ಸೂಕ್ಷ್ಮ ವಲಯದಲ್ಲಿ ಅಥವಾ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಅಭಿವೃದ್ಧಿ ಚಟುವಟಿಕೆಗಳನ್ನು ನಡೆಸುವಂತಿಲ್ಲ. ಆದರೆ, ಇಲ್ಲಿ ಅರಣ್ಯ ಇಲಾಖೆಯ ವಿರೋಧದ ನಡುವೆಯೂ ಅಂತಹ ಕೆಲಸಗಳು ಅನಾಯಾಸವಾಗಿ ನಡೆದಿವೆ.

ದೇವಾಲಯಕ್ಕೆ ಗರ್ಭಗುಡಿ ಸೇರಿದಂತೆ ಸುಸಜ್ಜಿತ ಕಟ್ಟಡ, ಸುತ್ತಲೂ ಆವರಣ ಗೋಡೆ, ಅಡುಗೆ ಮನೆ, ಭಕ್ತಾದಿಗಳಿಗೆ ಪ್ರಸಾದ ವಿತರಿಸಲು ಶೀಟು ಹಾಕಿದ ಸಭಾಂಗಣ, ನೀರು ಪೂರೈಕೆಗೆ ಕೊಳವೆಬಾವಿ ಸೇರಿದಂತೆ ಹಲವು ಸೌಲಭ್ಯಗಳು ಇಲ್ಲಿವೆ.

ADVERTISEMENT

ಇಡೀ ದೇವಾಲಯ ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿದೆ. ಒತ್ತುವರಿ ಮಾಡಿಕೊಂಡು ದೇವಾಲಯ ನಿರ್ಮಿಸಲಾಗಿದೆ ಎಂಬುದು ಅರಣ್ಯ ಇಲಾಖೆಯ ವಾದ. ಸುಮಾರು ಎರಡೂವರೆ ಎಕರೆ ವ್ಯಾಪ್ತಿಯಲ್ಲಿ ದೇವಾಲಯದ ಚಟುವಟಿಕೆಗಳು ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ.

‘ಇಡೀ ಪ್ರದೇಶ ಪರಿಸರ ಸೂಕ್ಷ್ಮ ವಲಯ ಆಗಿರುವುದರಿಂದ ದೇವಾಲಯದ ವ್ಯಾಪ್ತಿ ಎಷ್ಟು ವಿಸ್ತಾರವಾಗಿದೆ ಎಂಬುದನ್ನು ಅಳೆಯುವುದಕ್ಕೆ ನಾವು ಹೋಗಿಲ್ಲ’ ಎಂದು ಮಲೆಮಹದೇಶ್ವರ ವನ್ಯಜೀವಿಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್‌) ವಿ.ಏಡುಕುಂಡಲು ‘ಪ್ರಜಾವಾಣಿ’ಗೆ ತಿಳಿಸಿದರು.

ದೇವಾಲಯ ಆಗಿರುವುದರಿಂದ ನಂಬಿಕೆಗೆ ಅಡ್ಡಿಪಡಿಸಬಾರದು ಎಂಬ ಕಾರಣಕ್ಕೆ ಭಕ್ತರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ ಎಂದು ಅರಣ್ಯ ಅಧಿಕಾರಿಗಳು ಹೇಳುತ್ತಾರೆ.

ಆಡಳಿತ ಮಂಡಳಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡ ಸಂದರ್ಭದಲ್ಲಿ ಆಕ್ಷೇಪ ವ್ಯಕ್ತಪಡಿಸಲಾಗಿತ್ತು. ಆದರೆ, ಅದಕ್ಕೆ ಸ್ಥಳೀಯರು, ಆಡಳಿತ ಮಂಡಳಿಯ ಪ್ರಭಾವಿಗಳಿಂದ ಪ್ರತಿರೋಧ ವ್ಯಕ್ತವಾಗುತ್ತಿತ್ತು ಎಂದು ಇಲಾಖೆಯ ಮೂಲಗಳು ತಿಳಿಸಿವೆ. ಈಗಲೂ ಅಷ್ಟೇ; ದೇವಾಲಯದ ವ್ಯಾಪ್ತಿಯನ್ನು ಬಿಟ್ಟು ಉಳಿದ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ತಿರುಗುತ್ತಾರೆ.

ರಾತ್ರಿ ತಂಗುವಂತಿಲ್ಲ: ಮಾರಮ್ಮನ ದರ್ಶನಕ್ಕೆ ಬರುವ ಭಕ್ತರಿಗೆ ದೇವಾಲಯದ ಆವರಣದಲ್ಲೇ ಉಳಿಯುವ ವ್ಯವಸ್ಥೆ ಇತ್ತು. ನಿಯಮಗಳ ಪ್ರಕಾರ,ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಯಾರೂ ರಾತ್ರಿ ಉಳಿಯುವಂತಿಲ್ಲ.

‘ಭಕ್ತರು ಹಗಲು ಹೊತ್ತು ದೇವಸ್ಥಾನಕ್ಕೆ ಬಂದು ಹೋಗಬಹುದು. ಆದರೆ, ರಾತ್ರಿ ವೇಳೆ ಅಲ್ಲಿ ಉಳಿಯುವಂತೆಯೇ ಇಲ್ಲ’ ಎಂದು ಏಡುಕುಂಡಲು ಪ್ರತಿಕ್ರಿಯಿಸಿದರು.

‘ಮಾರಮ್ಮನಿಗೆ ಆಡುಗಳನ್ನು ಬಲಿ ಕೊಡುತ್ತಿದ್ದ ಭಕ್ತರು, ಆವರಣದಲ್ಲೇ ಅವುಗಳನ್ನು ಬಳಸಿಕೊಂಡು ಆಹಾರ ಸಿದ್ಧಪಡಿಸಿ ಪ್ರಸಾದವಾಗಿ ಸೇವಿಸುತ್ತಿದ್ದರು. ಇವರಲ್ಲದೆ, ಮದ್ಯ ಕುಡಿದು ಮೋಜು ಮಸ್ತಿ ನಡೆಸಲು ಬರುತ್ತಿದ್ದವರೂ ಇದ್ದರು’ ಎಂದು ಹೇಳುತ್ತಾರೆ ಸ್ಥಳೀಯರು.

ಕ್ರಮಕ್ಕೆ ಆಗ್ರಹ: ದೇವಾಲಯದ ಸುತ್ತಮುತ್ತ ನಡೆಯುತ್ತಿರುವ ಅಭಿವೃದ್ಧಿ ಚಟುವಟಿಕೆಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಈಗಲಾದರೂ ಕ್ರಮ ಕೈಗೊಳ್ಳಬೇಕು ಎಂದು ಪರಿಸರಪ್ರೇಮಿಗಳು ಒತ್ತಾಯಿಸಿದ್ದಾರೆ.

ದೇವಾಲಯವನ್ನು ಮುಜರಾಯಿ ಇಲಾಖೆ ವಶಪಡಿಸಿಕೊಂಡರೆ, ಎಲ್ಲ ರೀತಿಯ ಚಟುವಟಿಕೆಗಳನ್ನು ನಿಯಂತ್ರಿಸಬಹುದು ಎಂಬುದು ಅವರ ವಾದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.