ADVERTISEMENT

ದೇಗುಲ ಪ್ರವಾಸ ಅಭಿವೃದ್ಧಿಗೆ ಅವಕಾಶ: ಬಸವರಾಜ ಬೊಮ್ಮಾಯಿ

ದೇವಸ್ಥಾನಗಳ ಸಮಗ್ರ ನಿರ್ವಹಣಾ ವ್ಯವಸ್ಥೆಗೆ ಸಿ.ಎಂ ಬಸವರಾಜ ಬೊಮ್ಮಾಯಿ ಚಾಲನೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2022, 19:16 IST
Last Updated 23 ಫೆಬ್ರುವರಿ 2022, 19:16 IST
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ‘ಸಮಗ್ರ ದೇವಸ್ಥಾನಗಳ ನಿರ್ವಹಣಾ ವ್ಯವಸ್ಥೆ’ (ಐಟಿಎಂಎಸ್‌) ಹಾಗೂ ‘ದೈವ ಸಂಕಲ್ಪ’ ಯೋಜನೆಗಳಿಗೆ ಚಾಲನೆ ನೀಡಿದರು. ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಇದ್ದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ‘ಸಮಗ್ರ ದೇವಸ್ಥಾನಗಳ ನಿರ್ವಹಣಾ ವ್ಯವಸ್ಥೆ’ (ಐಟಿಎಂಎಸ್‌) ಹಾಗೂ ‘ದೈವ ಸಂಕಲ್ಪ’ ಯೋಜನೆಗಳಿಗೆ ಚಾಲನೆ ನೀಡಿದರು. ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಇದ್ದರು.   

ಬೆಂಗಳೂರು: ರಾಜ್ಯದ ಮುಜರಾಯಿ ದೇವಸ್ಥಾನಗಳ ಸಂಪೂರ್ಣ ಮಾಹಿತಿ ಮತ್ತು ಸೇವೆಯ ವಿವರಗಳನ್ನು ನೀಡುವ ‘ದೇವಸ್ಥಾನಗಳ ಸಮಗ್ರ ನಿರ್ವಹಣಾ ವ್ಯವಸ್ಥೆ’ (ಐಟಿಎಂಎಸ್‌) ಹಾಗೂ ‘ದೈವ ಸಂಕಲ್ಪ’ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.

ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಬುಧವಾರ ಈ ಯೋಜನೆಗೆ ಚಾಲನೆ ನೀಡಿ ಮಾತನಾಡಿದಅವರು, ‘ಬೆರಳ ತುದಿಯಲ್ಲಿ ದೇವಸ್ಥಾನಗಳ ಸಮಗ್ರ ಮಾಹಿತಿಯನ್ನು ಒದಗಿಸುವ ಅತ್ಯಾಧುನಿಕ ಡಿಜಿಟಲ್‌ ವ್ಯವಸ್ಥೆ ಇಂದಿನ ಅಗತ್ಯವಾಗಿದೆ. ನಮ್ಮ ದೇವಾಲಯಗಳ ಬಗ್ಗೆ ಸಮಗ್ರ ವಿವರ ಮತ್ತು ಅಲ್ಲಿ ದೊರೆಯುವ ಸೇವೆಗಳನ್ನು ಆನ್‌ಲೈನ್‌ ಮೂಲಕ ಬುಕ್‌ ಮಾಡುವ ವ್ಯವಸ್ಥೆಯನ್ನು ಒಳಗೊಂಡಿದೆ. ಇದರ ಜತೆಗೆ ದೇವಸ್ಥಾನಗಳಿಗೆ ತೆರಳುವ ಕೆಎಸ್‌ಆರ್‌ಟಿಸಿ ಬಸ್‌ಗಳ ಮಾಹಿತಿಯನ್ನೂ ಅಳವಡಿಸಬೇಕು. ಇದರಿಂದ ಪ್ರವಾಸದ ಯೋಜನೆ ಸುಲಭವಾಗಿ ರೂಪಿಸಲು ಅನುಕೂಲವಾಗುತ್ತದೆ’ ಎಂದರು.

ರಾಜ್ಯದಲ್ಲಿ ಟೆಂಪಲ್‌ ಟೂರಿಸಂಗೆ ಹೆಚ್ಚಿನ ಅವಕಾಶವಿದೆ. ಈ ಅವಕಾಶಗಳ ಬಗ್ಗೆ ಹೆಚ್ಚಿನ ಪ್ರಚಾರ ನೀಡುವಂತೆ ಪ್ರವಾಸೋದ್ಯಮ ಇಲಾಖೆಗೂ ಸೂಚನೆ ನೀಡಲಾಗಿದೆ. ಈ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಅಳವಡಿಸಿಕೊಳ್ಳಬೇಕು. ದೇವಸ್ಥಾನಗಳಲ್ಲಿ ಸೌಲಭ್ಯಗಳನ್ನು ಒದಗಿಸಲು ಮಾಸ್ಟರ್ ಪ್ಲಾನ್ ಸಿದ್ಧಪಡಿಸುವಂತೆಯೂ ಸೂಚನೆ ನೀಡಿದರು.

ADVERTISEMENT

ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ಡಿಜಿಟಲ್‌ ಇಂಡಿಯಾ ಕನಸು ನನಸಾಗಿಸುವಲ್ಲಿ ಐಟಿಎಂಎಸ್‌ ವೆಬ್‌ಸೈಟ್‌ನ ಪಾತ್ರ ಮಹತ್ವದ್ದಾಗಿದೆ. ದೇಶ–ವಿದೇಶಗಳಿಂದ ರಾಜ್ಯದ ದೇವಾಲಯಗಳಿಗೆ ಬರುವ ಲಕ್ಷಾಂತರ ಭಕ್ತರಿಗೆ ಅತ್ಯುತ್ತಮ ಸೌಕರ್ಯ ಒದಗಿಸಲು ಇಲಾಖೆ ಬದ್ಧವಾಗಿದೆ. ದೇವಾಲಯಗಳ ಆಡಳಿತದಲ್ಲಿ ಪಾರದರ್ಶಕತೆ ತಂದು ಹಣಕಾಸಿನ ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಕೆ ಮಾಡಿಕೊಳ್ಳುವಲ್ಲಿ ಐಟಿಎಂಎಸ್‌ ಯೋಜನೆಯ ಜಾರಿ ಮಹತ್ವದ ಹೆಜ್ಜೆಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಎಸ್‌.ಎ.ರಾಮದಾಸ್‌, ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದಮೂರ್ತಿ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ ಗಿರಿನಾಥ, ಮುಜರಾಯಿ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ ಇದ್ದರು.

ಎಟಿಎಂಎಸ್‌ ಯೋಜನೆ ಅಂಶಗಳು

* ಒಂದೇ ವೆಬ್‌ಸೈಟ್‌ನಲ್ಲಿ ಇಲಾಖೆ ವ್ಯಾಪ್ತಿಗೆ ಒಳಪಡುವ ದೇವಾಲಯಗಳಿಗೆ ಸಂಬಂಧಿಸಿದ ಮಾಹಿತಿ ಲಭ್ಯವಿದೆ. ಇದರಲ್ಲಿ ದೇವಾಲಯಗಳ ಇತಿಹಾಸ, ಲಭ್ಯವಿರುವ ಸೇವೆ, ಪೂಜೆಗಳ ವಿವರ, ಲಭ್ಯವಿರುವ ಸೌಲಭ್ಯಗಳು ಮತ್ತು ಹತ್ತಿರದ ಪ್ರೇಕ್ಷಣೀಯ ಸ್ಥಳ ವಿವರವಿದೆ.

* ಜಗತ್ತಿನ ಯಾವುದೇ ಭಾಗದಿಂದ ಆನ್‌ಲೈನ್‌ ಮೂಲಕ ಕಾಣಿಕೆಯನ್ನು ಸಲ್ಲಿಸಬಹುದು. ದೇವಾಲಯಗಳಲ್ಲಿ ಲಭ್ಯವಿರುವ ಸೇವೆಗಳನ್ನು ಆನ್‌ಲೈನ್‌ ಮೂಲಕ ಬುಕ್ಕಿಂಗ್‌ ಮಾಡಬಹುದು. ದೇವಾಲಯಗಳಲ್ಲಿ ನಡೆಯುವ ಉತ್ಸವ, ಜಾತ್ರೆ, ಹಬ್ಬ–ಹರಿದಿನಗಳ ವಿವರಗಳನ್ನು ಭಕ್ತಾದಿಗಳು ಪಡೆಯಲು ಐಟಿಎಂಸ್‌ ತಂತ್ರಾಂಶದಲ್ಲಿ ಅಪ್‌ಲೋಡ್‌ ವ್ಯವಸ್ಥೆ ಮಾಡುವ ವ್ಯವಸ್ಥೆ ಅಳವಡಿಸಲಾಗಿದೆ.

ದೈವ ಸಂಕಲ್ಪ ಯೋಜನೆ

* ರಾಜ್ಯದಲ್ಲಿರುವ 205 ಎ ದರ್ಜೆಯ ದೇವಾಲಯಗಳನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸುವುದು ದೈವ ಸಂಕಲ್ಪ ಯೋಜನೆಯ ಪ್ರಮುಖ ಉದ್ದೇಶ. ಯೋಜನೆಯ ಮೊದಲ ಹಂತದಲ್ಲಿ ರಾಜ್ಯದ ಪ್ರಮುಖ 25 ದೇವಾಲಯಗಳನ್ನು ₹1,140 ಕೋಟಿ ಅಂದಾಜು ವೆಚ್ಚದಲ್ಲಿ ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು.

* ಕುಕ್ಕೆ ಸುಬ್ರಹ್ಮಣ್ಯ, ಮಲೆ ಮಹದೇಶ್ವರಸ್ವಾಮಿ ಬೆಟ್ಟ, ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನ, ಕೊಲ್ಲೂರು ಮೂಕಾಂಬಿಕಾ, ಯಡಿಯೂರು ಸಿದ್ಧಲಿಂಗೇಶ್ವರ ದೇವಸ್ಥಾನ, ಸವದತ್ತಿ ಯಲ್ಲಮ್ಮ ಸೇರಿದಂತೆ ಪ್ರಮುಖ ದೇವಸ್ಥಾನಗಳು ಸೇರಿವೆ.

* ಇಲ್ಲಿ ಭಕ್ತರಿಗೆ ವಸತಿ ಸೌಲಭ್ಯ, ಉತ್ತಮ ರಸ್ತೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಪಾರಂಪರಿಕ ಶಿಲಾಮಯ ಕಟ್ಟಡಗಳ ನಿರ್ಮಾಣ, ಮಲ್ಟಿ ಲೆವೆಲ್‌ ಪಾರ್ಕಿಂಗ್‌ ವ್ಯವಸ್ಥೆ, ಸ್ನಾನಘಟ್ಟ, ಸುಸಜ್ಜಿತ ಅನ್ನ ದಾಸೋಹ ಭವನ, ವಾಣಿಜ್ಯ ಸಂಕೀರ್ಣ ಕಟ್ಟಡಗಳು, ಶೌಚಾಲಯಗಳು, ಒಳಚರಂಡಿ, ಘನತ್ಯಾಜ್ಯ ನಿರ್ವಹಣಾ ಘಟಕ ಮತ್ತು ಇತರ ವ್ಯವಸ್ಥೆ ಅಭಿವೃದ್ಧಿಪಡಿಸಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.