ADVERTISEMENT

ಕೆಪಿಎಸ್‌ಸಿ ವಿರುದ್ಧ ಗೆದ್ದ 10 ಅಭ್ಯರ್ಥಿಗಳು

ಪ್ರಜಾವಾಣಿ ವಿಶೇಷ ವರದಿ: ‘ಅನರ್ಹ’ ಅಭ್ಯರ್ಥಿಗಳಿಗೆ ಕೋರ್ಟ್‌ನಲ್ಲಿ ಗೆಲುವು

ರಾಜೇಶ್ ರೈ ಚಟ್ಲ
Published 12 ಜನವರಿ 2022, 19:32 IST
Last Updated 12 ಜನವರಿ 2022, 19:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಡಿಯಲ್ಲಿರುವ ಮೌಲನಾ ಆಜಾದ್ ಮಾದರಿ ಶಾಲೆಗಳಲ್ಲಿನ ಮುಖ್ಯೋಪಾಧ್ಯಾಯರ ಹುದ್ದೆಗಳ ನೇಮಕಾತಿಯ ವ್ಯಕ್ತಿತ್ವ ಪರೀಕ್ಷೆಗೆ (ಸಂದರ್ಶನ) ಆಯ್ಕೆಯಾಗಿದ್ದರೂ, ನಿಗದಿಪ‍ಡಿಸಿದ ವಿದ್ಯಾರ್ಹತೆ ಇಲ್ಲವೆಂದು ಕರ್ನಾಟಕ‌ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಕೈಬಿಟ್ಟಿದ್ದ 102 ಅಭ್ಯರ್ಥಿಗಳ ಪೈಕಿ, ಹೈಕೋರ್ಟ್‌ ಮೆಟ್ಟಿಲೇರಿದ್ದ10 ಅಭ್ಯರ್ಥಿಗಳು ‘ಅರ್ಹತೆ’ ಗಿಟ್ಟಿಸಿಕೊಂಡಿದ್ದಾರೆ.

100 ಹುದ್ದೆಗಳ (ಗ್ರೂಪ್ ‘ಬಿ’) ನೇಮಕಾತಿಗೆ 1:3 ಅನುಪಾತದಲ್ಲಿ ವ್ಯಕ್ತಿತ್ವ ಪರೀಕ್ಷೆಗೆ ಅರ್ಹರಾದ 264 ಅಭ್ಯರ್ಥಿಗಳ ಪೈಕಿ, 102 ಮಂದಿಯನ್ನು ಮೂಲ ದಾಖಲಾತಿಗಳ ಪರಿಶೀಲನೆ ಬಳಿಕ ಕೆಪಿಎಸ್‌ಸಿ ಕೈಬಿಟ್ಟಿತ್ತು. ಹುದ್ದೆಗೆ ಸ್ನಾತಕೋತ್ತರ ಪದವಿಯ ಜೊತೆಗೆ ಸಂಬಂಧಿಸಿದ ವಿಷಯ ಟೀಚಿಂಗ್ ಮೆಥಡ್‌ನಲ್ಲಿ ಬಿ.ಎಡ್ ಪದವಿ ಪಡೆದಿರಬೇಕು. ಈ ವಿದ್ಯಾರ್ಹತೆ ಇಲ್ಲ ಎಂಬ ಕಾರಣ ನೀಡಿ ವ್ಯಕ್ತಿತ್ವ ಪರೀಕ್ಷೆಯ ಪಟ್ಟಿಯಿಂದ ಹೊರಗಿಟ್ಟಿತ್ತು.

ಒಟ್ಟು 19 ಅಭ್ಯರ್ಥಿಗಳು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಈ ಪೈಕಿ, 9 ಅಭ್ಯರ್ಥಿಗಳ ಮನವಿಯನ್ನು ಹೈಕೋರ್ಟ್‌ ತಿರಸ್ಕರಿಸಿದೆ. ಆದರೆ, ಆಯ್ಕೆಯಾಗಿದ್ದ ಇತರ ಅಭ್ಯರ್ಥಿಗಳ ವ್ಯಕ್ತಿತ್ವ ಪರೀಕ್ಷೆಯನ್ನು ಕೆಪಿಎಸ್‌ಸಿ ಈಗಾಗಲೇ ಮುಗಿಸಿ, ಆಯ್ಕೆ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಅಲ್ಲದೆ, ಆಯ್ಕೆಯಾದವರು ನೇಮಕಾತಿ ಆದೇಶ ಪಡೆದು ಕರ್ತವ್ಯಕ್ಕೂ ಹಾಜರಾಗಿದ್ದಾರೆ. ಇದೀಗ ಹೈಕೋರ್ಟ್‌ ಆದೇಶದಂತೆ 9 ಅಭ್ಯರ್ಥಿಗಳ ವ್ಯಕ್ತಿತ್ವ ಪರೀಕ್ಷೆಯನ್ನು ಕೆಪಿಎಸ್‌ಸಿ ನಡೆಸಬೇಕಿದೆ. ಆಯ್ಕೆ ಪಟ್ಟಿ ಪರಿಷ್ಕೃತಗೊಂಡರೆ ಕೆಲವರು ಕೆಲಸ ಕಳೆದುಕೊಳ್ಳುವ ಸಾಧ್ಯತೆಯೂ ಇದೆ.

ADVERTISEMENT

ಅರ್ಜಿ ತಿರಸ್ಕರಿಸಿದ್ದ ಕೆಎಟಿ: ವ್ಯಕ್ತಿತ್ವ ಪರೀಕ್ಷೆಯಿಂದ ಕೆಪಿಎಸ್‌ಸಿ ಕೈಬಿಟ್ಟಿದ್ದ ಪಟ್ಟಿಯಲ್ಲಿದ್ದವರಲ್ಲಿ 24 ಅಭ್ಯರ್ಥಿಗಳು ಕರ್ನಾಟಕ ಆಡಳಿತ ನ್ಯಾಯ ಮಂಡಳಿಯ (ಕೆಎಟಿ) ಮೊರೆ ಹೋಗಿದ್ದರು. ಆದರೆ, ಕೆಎಟಿ ಈ ಅಭ್ಯರ್ಥಿಗಳ ವಾದವನ್ನು ಪುರಸ್ಕರಿಸಿರಲಿಲ್ಲ. ಆ ಬಳಿಕ, ಈ ಪೈಕಿ 19 ಅಭ್ಯರ್ಥಿಗಳು ಹೈಕೋರ್ಟ್‌ ಮೊರೆ ಹೋಗಿದ್ದರು. ಕೋರ್ಟ್‌ ನಿರ್ದೇಶನದಂತೆ ವಿದ್ಯಾರ್ಥಿಗಳ ಮನವಿಯನ್ನು ಪರಿಶೀಲಿಸಲು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯುತಜ್ಞರ ಸಮಿತಿ ರಚಿಸಿತ್ತು. ಈ ಸಮಿತಿ 2021ರ ಸೆ. 14ರಂದು ಸರ್ಕಾರಕ್ಕೆ ವರದಿ ನೀಡಿತ್ತು. ಆ ವರದಿಯನ್ನು ಒಪ್ಪಿಕೊಂಡಿದ್ದ ಸರ್ಕಾರ, ಅದನ್ನು ಕೋರ್ಟಿಗೂ ನೀಡಿತ್ತು.

‘1:3 ಆಯ್ಕೆ ಪಟ್ಟಿಯಲ್ಲಿದ್ದರೂ ಸ್ನಾತಕೋತ್ತರ ಪದವಿ ಪಡೆದ ವಿಷಯವು ಬಿ.ಇಡಿ ಕೋರ್ಸ್‌ನಲ್ಲಿ ಕಲಿಸುವ ವಿಧಾನದಲ್ಲಿ (ಟೀಚಿಂಗ್‌ ಮೆಥಡಾಲಜಿ) ಇರಬೇಕೆಂಬ ವಿದ್ಯಾರ್ಹತೆಯ ನಿಯಮದ ಕಾರಣಕ್ಕೆ ಅನರ್ಹಗೊಂಡಿದ್ದೆವು. ಕೆಎಸ್ಒಯು, ಇಗ್ನೊ ಮುಂತಾದ ಮುಕ್ತ ವಿಶ್ವವಿದ್ಯಾಲಯಗಳಲ್ಲಿ ಬಿ.ಇಡಿ ಕೋರ್ಸ್‌ನಲ್ಲಿ ಕಲಿಸುವ ವಿಧಾನದಲ್ಲಿ ಸಮಾಜ ವಿಜ್ಞಾನ ಅಧ್ಯಯನ ಮಾಡಿದ ಅನೇಕ ಅಭ್ಯರ್ಥಿಗಳು, ಇತಿಹಾಸದ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮಾಡಿದ್ದಾರೆ. ಬಿ.ಇಡಿ ಕೋರ್ಸ್‌ನಲ್ಲಿ ಇತಿಹಾಸ ವಿಷಯದ ಪದ ಇಲ್ಲ ಎಂಬ ಕಾರಣಕ್ಕೆ ಅಂಥವರನ್ನು ಪಟ್ಟಿಯಿಂದ ಕೈ ಬಿಡಲಾಗಿತ್ತು. ವಿದ್ಯಾರ್ಹತೆ ವಿಷಯವನ್ನು ಕೆಪಿಎಸ್‌ಸಿ ತಪ್ಪಾಗಿ ಅರ್ಥೈಸಿಕೊಂಡಿತ್ತು. ತಜ್ಞರ ಸಮಿತಿಯ ವರದಿ ಪರಿಗಣಿಸಿ ಹೈಕೋರ್ಟ್‌ ತೀರ್ಪು ನೀಡಿದೆ. ಕೆಪಿಎಸ್‌ಸಿ ವಿರುದ್ಧದ ಒಂದೂವರೆ ವರ್ಷದ ಕಾನೂನು ಹೋರಾಟದಲ್ಲಿ ಕೊನೆಗೂ ಜಯ ಸಿಕ್ಕಿದೆ’ ಎಂದು ಅಭ್ಯರ್ಥಿಯೊಬ್ಬರು ಹೇಳಿದರು.

ತಜ್ಞರ ವರದಿಯಿಂದ ‘ಅರ್ಹತೆ’

‘ರಾಜ್ಯಶಾಸ್ತ್ರ ಅಥವಾ ಇತಿಹಾಸ ವಿಷಯದಲ್ಲಿ ಸ್ನಾತಕೋತ್ತರ (ಪಿಜಿ)ಪದವಿ ಪಡೆದು, ಬಿ.ಇಡಿ ಕೋರ್ಸ್‌ನಲ್ಲಿ ಸಮಾಜ ವಿಜ್ಞಾನ ಮತ್ತು ಇಂಗ್ಲಿಷ್‌ ಅಭ್ಯಾಸ ಮಾಡಿದ್ದರೆ ಕಲಿಸುವ ವಿಧಾನದಲ್ಲಿ (ಟೀಚಿಂಗ್‌ ಮೆಥಡಾಲಜಿ) ರಾಜ್ಯಶಾಸ್ತ್ರ ಮತ್ತು ಇತಿಹಾಸ ಸೇರಿದೆ. ಭೌತವಿಜ್ಞಾನದಲ್ಲಿ ಪಿಜಿ ಪದವಿ ಪಡೆದು ಬಿ.ಇಡಿ ಕೋರ್ಸ್‌ನಲ್ಲಿ ಗಣಿತ ಮತ್ತು ಫಿಸಿಕಲ್‌ ಸೈನ್ಸ್‌ ಓದಿದ್ದರೆ ಕಲಿಸುವ ವಿಧಾನದಲ್ಲಿ ಭೌತವಿಜ್ಞಾನವೂ ಸೇರಿರುತ್ತದೆ. ಭೌತ ವಿಜ್ಞಾನ ಅಥವಾ ರಸಾಯನವಿಜ್ಞಾನದಲ್ಲಿ ಪಿಜಿ ಪದವಿ ಪಡೆದು, ಬಿ.ಇಡಿ ಕೋರ್ಸ್‌ನಲ್ಲಿ ಗಣಿತ ಮತ್ತು ಫಿಸಿಕಲ್‌ ಸೈನ್ಸ್‌ ಓದಿದ್ದರೆ, ಕಲಿಸುವ ವಿಧಾನದಲ್ಲಿ ಭೌತವಿಜ್ಞಾನ ಮತ್ತು ರಸಾಯನವಿಜ್ಞಾನ ಸೇರಿರುತ್ತದೆ. ಸಸ್ಯವಿಜ್ಞಾನದಲ್ಲಿ ಪಿಜಿ ಪದವಿ ಪಡೆದು, ಬಿ.ಇಡಿ ಕೋರ್ಸ್‌ನಲ್ಲಿ ಜೀವವಿಜ್ಞಾನ ಮತ್ತು ರಸಾಯನ‌ವಿಜ್ಞಾನ ಓದಿದ್ದರೆ, ಕಲಿಸುವ ವಿಧಾನದಲ್ಲಿ ಸಸ್ಯವಿಜ್ಞಾನ ಸೇರಿರುತ್ತದೆ. ಹೀಗೆ ತತ್ಸಮಾನ ಎಂದು ಪರಿಗಣಿಸಬಹುದು ಎಂದು ವರದಿ ನೀಡಿತ್ತು. ಅಂಥ 10 ಅಭ್ಯರ್ಥಿಗಳು ಹುದ್ದೆಗೆ ಅರ್ಹರು. ಆದರೆ, ಉಳಿದ 9 ಅಭ್ಯರ್ಥಿಗಳು ಪಿಜಿ ಪದವಿಯಲ್ಲಿ ಓದಿದ ವಿಷಯವು ಬಿ.ಇಡಿ ಕೋರ್ಸ್‌ನ ಕಲಿಸುವ ವಿಧಾನದಲ್ಲಿ ಇಲ್ಲದ ಕಾರಣ ಅವರು ಅರ್ಹರಾಗುವುದಿಲ್ಲ’ ಎಂದು ತಜ್ಞರ ಸಮಿತಿ ವರದಿ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.